Sandalwood

1987ರ ಚತುರ್ಥಿಯ ದಿನ ರವಿಚಂದ್ರನ್ ಮಾಡಿದ ಸಹಾಯ ನೆನೆದ ಜಗ್ಗೇಶ್ : ಇನ್‌ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್‌

ನವರಸ ನಾಯಕ ಜಗ್ಗೇಶ್ ಸ್ಯಾಂಡಲ್‌ವುಡ್‌ನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಕಲಾವಿದ. ತುಂಬಾ ಕಷ್ಟದಿಂದ, ಸ್ವಂತ ಪರಿಶ್ರಮದಿಂದ ಬದುಕು ಕಟ್ಟಿಕೊಂಡು ಸಾಧಿಸಿದವರು ಇವರು. ತಮ್ಮ ಬದುಕಿನ ಅಂದಿನ ಕೆಲ ಹೋರಾಟದ ಕ್ಷಣಗಳನ್ನು ಜಗ್ಗೇಶ್ ಆಗಾಗ ನೆನಪಿಸಿಕೊಂಡು ಇಂದಿಗೂ ಭಾವುಕರಾಗುತ್ತಾರೆ. ಸದ್ಯ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಂತಹದ್ದೇ ಸನ್ನಿವೇಶವನ್ನು ಮೆಲುಕು ಹಾಕಿಕೊಂಡಿದ್ದಾರೆ. ತೀರಾ ನೊಂದು, ಅಸಹಾಯಕನಾಗಿದ್ದ ಸಂದರ್ಭದಲ್ಲಿ ಕ್ರೇಜ್‌ಸ್ಟಾರ್ ರವಿಚಂದ್ರನ್ ಅವರು ಮಾಡಿದ ಸಹಾಯವನ್ನೂ ನೆನಪಿಸಿಕೊಂಡಿದ್ದಾರೆ.

ಜಗ್ಗೇಶ್ ಅವರ ಪೂರ್ಣ ಬರಹ ಇಲ್ಲಿದೆ :

ನನ್ನ ನೆಮ್ಮದಿಗೆ ಕಾರಣ ನನ್ನ ಮನೆಯ ದೇವರಕೋಣೆ. ನಾನು1986ರಲ್ಲಿ ಮೊದಲ ಮನೆ ಮಾಡಿದಾಗ ದೇವರ ಮನೆ ಇರಲಿಲ್ಲ. ಬಾಲ್ಯದಿಂದ ಅಮ್ಮನಿಂದ ಕಲಿತ ದೇವರ ಪೂಜೆ ಮುಂದುವರಿಸಲು ಮಲ್ಲೇಶ್ವರ 8ನೇ ಕ್ರಾಸ್ ನಲ್ಲಿ 40ರೂ ಕೊಟ್ಟು ಗಣಪ ಹಾಗು ರಾಯರ ಮಣ್ಣಿನ ವಿಗ್ರಹ ಕೊಂಡು, ಅಡುಗೆ ಮನೆಯ ಮೂಲೆಯಲ್ಲಿ ಮಣೆಯ ಮೇಲೆ ಅವುಗಳನ್ನು ಸ್ಥಾಪಿಸಿ ನನ್ನ ಪೂಜೆ ಆರಂಭಿಸಿ ಇಂದಿಗೆ 40 ವರ್ಷವಾಯಿತು.

ಈ ವಿಗ್ರಹಗಳ ಮುಂದೆ ಅದೆಷ್ಟು ಕಣ್ಣೀರು ಹರಿಸಿ, ನಾನು ನನ್ನ ಕಾಲ ಮೇಲೆ ನಿಲ್ಲಲು ಬೇಡಿದ್ದೆ. ನನಗಾಗುತ್ತಿದ್ದ ಅದೆಷ್ಟು ಅವಮಾನಗಳನ್ನು ಈ ವಿಗ್ರಹಗಳಗೆ ಅರ್ಪಿಸುತ್ತಿದ್ದೆ.

ನನಗೆ ದೇವರ ಮೇಲಿನ ನಂಬಿಕೆ ಅದೆಷ್ಟು ಗಾಢವಾಗಿತ್ತೆಂದರೆ, ನಾನು ಮಾಡಿದ ಉಪವಾಸ, ವ್ರತಗಳು, ಪೂಜೆ, ಏಕಾಂತಸೇವೆ ಈಗ ನೆನೆದರೂ ರೋಮಾಂಚನವಾಗುತ್ತದೆ.

40 ವರ್ಷದಿಂದ ಈ ಗಣಪನಿಗೆ ಗಣೇಶವ್ರತ ತಪ್ಪದೆ ಇಂದಿಗು ಮಾಡುವೆ. ಅದರಲ್ಲಿ ವಿಶೇಷ ವರ್ಷ ಎಂದರೆ 1987ರ ಚತುರ್ಥಿಯ ದಿನ. ಸಂಜೆ ‘ರಣಧೀರ’ ಚಿತ್ರೀಕರಣ ಮುಗಿದಮೇಲೆ ಬಂದು ಪೂಜೆ ಮಾಡುವ ಎಂದು ಹೋದೆ, ನೋಡಿದರೆ ಕ್ರೈಮ್ಯಾಕ್ಸ್ ಚಿತ್ರೀಕರಣ ರಾತ್ರಿ 2 ಗಂಟೆಯಾದರೂ ಮುಗಿಯುತ್ತಿಲ್ಲ! ಏನು ಮಾಡುವುದು ದೇವರೇ ಎಂದು ಮನಸ್ಸಿನಲ್ಲೇ ಕೊರಗುತ್ತಿದ್ದೆ. 2.40 ಕ್ಕೆ ಶೂಟಿಂಗೇನೋ ಮುಗಿಯಿತು ಆದರೆ ಕೈಯಲ್ಲಿ ಬಿಡಿಗಾಸಿಲ್ಲ!. ಧೈರ್ಯಮಾಡಿ ರವಿಚಂದ್ರನ್ ರವರಿಗೆ ‘ಸಾರ್’ ಎಂದೆ. ಅದಾಗಲೇ ದಣಿದಿದ್ದ ಅವರು ‘ಏನೋ..?’ ಎಂದರು.

‘ಸಾರ್.. ಪೂಜೆಗೆ ಕಾಸಿಲ್ಲಾ.. 200ರೂ ಕೊಡಿ’ ಎಂದೆ. ಆಗ ರವಿ ಸಾರ್, ಅವರ ಮ್ಯಾನೇಜರ್ ಬಾಬು ಕರೆದು ‘ಬಾಬು ಇವನಿಗೆ 500 ರೂ ಕೊಡು’ ಎಂದರು. ನನ್ನ ಸಂತೋಷ ಹೇಳತೀರದು (ನಮ್ಮ ರವಿಚಂದ್ರನ್ ಹೃದಯವಂತ, ಹಾಗಾಗಿ ಇಂದು ನಾನು ಎಷ್ಟೇ ಬೆಳದಿದ್ದರು ಅವರ ಮೇಲೆ ವಿಶೇಷ ಗೌರವ. ಇದೇ ಕಾರಣಕ್ಕೆ ನಾನು ನನ್ನ “ಭಂಡ ನನ್ನ ಗಂಡ” ಚಿತ್ರದ ಹಾಡಿನಲ್ಲಿ “ಹತ್ತಿದ್ದ ಏಣಿನಾ ಒದಿಬ್ಯಾಡ” ಎಂದು ಸಾಲು ಬರೆಸಿದ್ದು. I always love you sir ❤️)

ಅಂದು ಅಲ್ಲಿಂದ ಬೈಕ್ ಹತ್ತಿ ಮಲ್ಲೇಶ್ವರ ಮಾರುಕಟ್ಟೆಗೆ ಬಂದು ಹೂವು ಹಣ್ಣು ಖರೀದಿಸಿ, ಬೆಳಗಿನ ಜಾವ 5 ಗಂಟೆಗೆ ಪೂಜೆಮಾಡಿ ಮುಗಿಸಿ ಮಲಗಿದೆ.

ತಮಿಳು ಕವಿ ಭಾರತೀಯಾರ್ ಒಂದು ಸಾಲು ಹೇಳಿದ್ದಾರೆ “ನಂಬಿದವನಿಗೆ ಕೆಡುಕಿಲ್ಲಾ, ಗೆದ್ದೆಗೆಲ್ಲುತ್ತಾನೆ. ಅದಕ್ಕೆ ನಾಲ್ಕು ಬಾರಿ ತೀರ್ಪು” ಎಂದು.

ಇಂದಿಗೂ ನನ್ನ ಭಕ್ತಿ ಕುಂದಿಲ್ಲಾ. ಮುಂದುವರಿದು ಯಾವುದೇ ಆಲಯವಾಗಲಿ ಕಸಗುಡಿಸಿ ಸೇವೆ ಮಾಡುವೆ. ಕಾರಣ ನನ್ನಲ್ಲಿ ಅಹಂಕಾರ ಹತ್ತಿರ ಸುಳಿಯಬಾರದು ಹಾಗು ಈ ಸೇವೆ ಮಾಡಿದವರಿಗೆ ರಾಹು ಶನಿ ಗ್ರಹ ದೋಷ ತಾಗದು ಎಂದು ನನ್ನ ಯೌವ್ವನದಲ್ಲಿ ಒಬ್ಬ ಆಧ್ಯಾತ್ಮಿಕ ಗುರು ಹೇಳಿಕೊಟ್ಟ ಶ್ರೇಷ್ಠ ಪಾಠ.

ಪಾಪ ಇಂದಿನ ಮಕ್ಕಳಿಗೆ ಇದರ ಅರಿವಿಲ್ಲಾ. ನನ್ನ ಇತ್ತೀಚಿನ ರಾಯರ ಮಠ ಗುಡಿಸುವ ಚಿತ್ರವನ್ನು ಕದ್ದು ಸೆರೆಹಿಡಿದು ಜಾಲತಾಣಕ್ಕೆ ಹಾಕಿದ್ದಾರೆ. ಕೋಟಿ ಜನ ಸಂತೋಷಪಟ್ಟರೆ, ಕೆಲವರು ಅಣಕಮಾಡಿ ವಿಕೃತ ಆನಂದ ಪಟ್ಟರು, ವಿಪರ್ಯಾಸ ನಮ್ಮ ಹಿಂದೂ ಧರ್ಮದ ಕೆಲವರ ನಡೆ.

ಒಂದಂತು ಸತ್ಯ, ದೇವರಸೇವೆ ಯಾವುದೆ ರೂಪವಾಗಲಿ ಮನುಷ್ಯರು ಮಾಡಲೆಬೇಕು, ಕಾರಣ ಯಾವುದೋ ಒಂದು ಸಂದರ್ಭದಲ್ಲಿ ನಮ್ಮ ಕಷ್ಟಕ್ಕೆ ಮನುಷ್ಯ ರೂಪದಲ್ಲಿ ದೇವರು ಬಂದು ನಮ್ಮನ್ನ ಕಾಪಾಡುತ್ತಾನೆ

ದೈವಂ ಮಾನುಷರೂಪೇಣಾಂ🙏

Show More

Related Articles

Leave a Reply

Your email address will not be published. Required fields are marked *

Back to top button