ಶ್ರೀಕೃಷ್ಣ ದೇವರ ಕೊರಳಲ್ಲಿ ಹಾರವಾಯಿತು ನರಕಾಸುರನ ಪುತ್ರ ಪ್ರಯೋಗಿಸಿದ ಅಸ್ತ್ರ !
ನರಕಾಸುರನ ಪುತ್ರನ ಹೆಸರು ಭಗದತ್ತ. ಈತ ಪ್ರಾಗ್ಜ್ಯೋತಿಷದ ಪ್ರಬಲ ರಾಜ. ಮಹಾಭಾರತ ಯುದ್ಧದಲ್ಲಿ ಕೌರವ ಪಕ್ಷದಲ್ಲಿ ಹೋರಾಡಿದ ಅನುಭವಿ, ಬಲಶಾಲಿಗಳಲ್ಲಿ ಭಗದತ್ತ ಕೂಡಾ ಒಬ್ಬ. ಆನೆಯಲ್ಲಿ ಕುಳಿತು ಯುದ್ಧ ಮಾಡುವುದರಲ್ಲಿ ಭಗದತ್ತ ಅತ್ಯುನ್ನತ ಕೌಶಲ್ಯ ಹೊಂದಿದ್ದ.
ಪಟ್ಟದ ಆನೆ ಸುಪ್ರತೀಕ ಎಂಬ ಅವನ ಬಲಿಷ್ಠ ಆನೆಗೆ ಅವನು ಪ್ರಸಿದ್ಧನಾಗಿದ್ದ.
ಮಹಾಭಾರತ ಯುದ್ಧದ 12ನೇ ದಿನ ಭಗದತ್ತನು ಪ್ರಬಲ ಪ್ರಹಾರವನ್ನೇ ಮಾಡಿದ್ದ. ಅರ್ಜುನ ಹಾಗೂ ಭಗದತ್ತನಿಗೂ ಘನಘೋರ ಯುದ್ಧವೇ ನಡೆದಿತ್ತು. ಒಂದು ಹಂತದಲ್ಲಿ ಅರ್ಜುನನ ದಾಳಿಯನ್ನು ಎದುರಿಸಲಾಗದೆ ಭಗದತ್ತ ತನ್ನಲ್ಲಿದ್ದ ಪ್ರಬಲ ಅಸ್ತ್ರವನ್ನು ಪ್ರಯೋಗಿಸಿದ್ದ. ಭಗದತ್ತ ಅರ್ಜುನನೆಡೆಗೆ ಪ್ರಯೋಗಿಸಿದ್ದ ಪ್ರಬಲ ಅಸ್ತ್ರದ ಹೆಸರೇ `ವೈಷ್ಣವಾಸ್ತ್ರ’.
ಶಕ್ತಿಶಾಲಿ ವೈಷ್ಣವಾಸ್ತ್ರ ಬರುತ್ತಿರುವುದನ್ನು ಕಂಡ ಶ್ರೀಕೃಷ್ಣ ದೇವರು ಅರ್ಜುನನಿಗೆ ಅಡ್ಡವಾಗಿ ಎದ್ದು ನಿಂತರು. ಹೀಗಾಗಿ ಬಂದ ವೈಷ್ಣವಾಸ್ತ್ರ ಶ್ರೀಕೃಷ್ಣ ದೇವರ ಎದೆಗೆ ತಾಗಿ ಅವರ ಕುತ್ತಿಗೆಯಲ್ಲಿ ಹಾರವಾಗಿ ಪರಿವರ್ತನೆಯಾಯಿತು. ಹೀಗೆ ಅರ್ಜುನನನ್ನು ಶ್ರೀಕೃಷ್ಣ ದೇವರು ರಕ್ಷಿಸಿದರು. ಬಳಿಕ ಅರ್ಜುನನ ದಾಳಿಗೆ ಭಗದತ್ತನು ಕೊಲ್ಲಲ್ಪಟ್ಟನು.



