Special Desk

ಕೃಷ್ಣನೂರಿಗೆ ಪ್ರಮುಖ ಪ್ರವಾಸಿ ತಾಣಗಳು : ಕಡಲತಡಿಯಲ್ಲಿ ಖುಷಿಯ ವಿಹಾರ

ಕೃಷ್ಣನೂರು, ಕಡಲತಡಿಯ ನಗರಿ, ಪ್ರಾಕೃತಿಕವಾಗಿ ಸಮೃದ್ಧವಾದ ತಾಣ, ಇಲ್ಲಿ ನೆಮ್ಮದಿಗೇನೂ ಕೊರತೆ ಇಲ್ಲ. ಅದೇ ಸೊಬಗಿನ ಉಡುಪಿ. ಕರಾವಳಿಯ ಸುಂದರ ಜಿಲ್ಲೆಗಳಲ್ಲಿ ಇದೂ ಕೂಡಾ ಒಂದು. ಅಪೂರ್ವ ಕಡಲತೀರ, ಹಚ್ಚಹಸಿರಿನ ಸಹ್ಯಾದ್ರಿ ಪರ್ವತ ಶ್ರೇಣಿ ಇಲ್ಲಿನ ಮುಕುಟದ ಮಣಿಗಳಿದ್ದಂತೆ. ಸಾಕಷ್ಟು ದೇವ ಸನ್ನಿಧಿಗಳೂ ಉಡುಪಿಯಲ್ಲಿವೆ. ಪ್ರವಾಸಿಗರಿಗೆ ಖುಷಿ ನೀಡುವ ಸಾಕಷ್ಟು ಸುಂದರ ತಾಣಗಳನ್ನು ಉಡುಪಿಯಲ್ಲಿ ನೋಡಬಹುದು. ಅವುಗಳಲ್ಲಿ ಕೆಲವು ತಾಣಗಳ ಬಗ್ಗೆ ನೋಡೋಣ.

ಧಾರ್ಮಿಕ ಕೇಂದ್ರಗಳು
ಶ್ರೀಕೃಷ್ಣ ದೇವಸ್ಥಾನ : ಉಡುಪಿ ಕೃಷ್ಣನೂರು ಎಂದೇ ಖ್ಯಾತಿ. ಉಡುಪಿಗೆ ಬರುವ ಸಾಕಷ್ಟು ಸಂಖ್ಯೆಯ ಭಕ್ತರು, ಪ್ರವಾಸಿಗರು ಶ್ರೀಕೃಷ್ಣ ದರ್ಶನಕ್ಕೆಂದು ಬರುತ್ತಾರೆ. ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ್ದ ಶ್ರೀಕೃಷ್ಣ ವಿಗ್ರಹವಿದು. ದೇವಸ್ಥಾನದ ಸುತ್ತಲಿನ ರಥಬೀದಿಯಲ್ಲಿ ಅಷ್ಟಮಠಗಳನ್ನೂ ನೋಡಬಹುದು. ಪುತ್ತಿಗೆ, ಪೇಜಾವರ, ಪಲಿಮಾರು, ಅದಮಾರು, ಶಿರೂರು, ಸೋದೆ, ಕೃಷ್ಣಾಪುರ ಮತ್ತು ಕಾಣಿಯೂರು ಮಠಗಳು ಶ್ರೀಕೃಷ್ಣ ದೇವಸ್ಥಾನದ ಸುತ್ತಲೂ ಇದೆ.

ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ಸನ್ನಿಧಿ : ಶ್ರೀಕೃಷ್ಣ ದೇವಸ್ಥಾನದ ಬಳಿಯೇ ಎಂದರೆ ರಥಬೀದಿಯಲ್ಲಿ ಅತ್ಯಂತ ಪುರಾತನ ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಸ್ಥಾನ ಕೂಡಾ ಇದೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ : ಉಡುಪಿಯಿಂದ ಕೊಲ್ಲೂರಿಗೆ ಇರುವುದು 74 ಕಿಮೀ. ಸಾಕಷ್ಟು ಭಕ್ತರನ್ನು ಸೆಳೆಯುವಂತಹ ದಕ್ಷಿಣ ಭಾರತದ ದೇವಸನ್ನಿಧಿಗಳಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಕೂಡಾ ಒಂದು.

ವರಂಗ : ಕೆರೆಯ ಮಧ್ಯದಲ್ಲಿರುವ ರಮಣೀಯ ಬಸದಿಯೇ ವರಂಗ. ಉಡುಪಿಯಿಂದ ಇಲ್ಲಿಗೆ ಇರುವ ದೂರ ಸುಮಾರು 40 ಕಿ.ಮೀ.

ಚತುರ್ಮುಖ ಬಸದಿ : ಇನ್ನು ನೀವೇನಾದರೂ ಕಾರ್ಕಳದ ಕಡೆಗೆ ಬಂದರೆ ಇಲ್ಲಿ 1432ರಲ್ಲಿ ನಿರ್ಮಿಸಲಾದ ಗೋಮಟೇಶ್ವರ ದೇವರ 42 ಅಡಿ ಎತ್ತರದ ಏಕಶಿಲೆಯ ವಿಗ್ರಹ, ಸುಮಾರು 16 ನೇ ಶತಮಾನದ ಚತುರ್ಮುಖ ಬಸದಿಯ ದರ್ಶನವನ್ನೂ ಪಡೆಯಬಹುದು.

ಅತ್ತೂರು ಚರ್ಚ್ : ಇನ್ನು ಇದೇ ಕಾರ್ಕಳದ ಸಮೀಪದ ಅತ್ತೂರಿನಲ್ಲಿ ಪ್ರಸಿದ್ಧ ಸೇಂಟ್ ಲಾರೆನ್ಸ್ ಚರ್ಚ್ ಕೂಡಾ ಇದೆ. 1839ರಲ್ಲಿ ನಿರ್ಮಾಣವಾಗಿದ್ದ ಚರ್ಚ್ ಇದು.

ಇವಷ್ಟೇ ಅಲ್ಲದೆ, ಉಡುಪಿಯಲ್ಲಿ ಬ್ರಹ್ಮಾವರ ಮಹಾಲಿಂಗ ದೇವಾಲಯ (ಸುಮಾರು 12 ಕಿಮೀ ದೂರ), ಅಂಬಲಪಾಡಿ ಜನಾರ್ದನ ದೇವಸ್ಥಾನ, ಕಡಿಯಾಳಿ ಮಹಿಷಮರ್ಧಿನಿ ಅಮ್ಮನ ದೇವಸ್ಥಾನ, ಮೌಂಟ್ ರೋಸರಿ ಚರ್ಚ್, ಬಸ್ರೂರೂರಿನ ನಖರೇಶ್ವರ ಮತ್ತು ತುಳುವೇಶ್ವರ ದೇವಸ್ಥಾನಗಳು, ಆನೆಗುಡ್ಡೆಯ ವಿನಾಯಕ ದೇವಸ್ಥಾನ ಹೀಗೆ ಸಾಕಷ್ಟು ದೇವ ಸನ್ನಿಧಿಗಳು, ಧಾರ್ಮಿಕ ಕೇಂದ್ರಗಳು ಉಡುಪಿಯಲ್ಲಿವೆ.

www.pexels.com

ಬೀಚ್‍ನಲ್ಲಿ ಆಡುವ ಖುಷಿ
ಉಡುಪಿಗೆ ಬಂದ ಮೇಲೆ ಬೀಚ್‍ಗೆ ಹೋಗದೇ ಇರಲು ಸಾಧ್ಯನಾ…? ಪ್ರವಾಸಿಗರಿಗೆ ಖುಷಿ ನೀಡುವಂತಹ ಸಾಕಷ್ಟು ಬೀಚ್‍ಗಳು ಉಡುಪಿ ಮತ್ತು ಸುತ್ತಮುತ್ತ ಇವೆ. ಅದರಲ್ಲಿ ಪ್ರಮುಖವಾಗಿದ್ದು, ಮಲ್ಪೆ ಬೀಚ್. ಉಡುಪಿಯಿಂದ ಸುಮಾರು 6 ಕಿ.ಮೀ ದೂರದಲ್ಲಿದೆ ಮಲ್ಪೆ ಬೀಚ್. ಇನ್ನು ಮಲ್ಪೆ ಬೀಚ್‍ಗೆ ಸಮೀಪದಲ್ಲಿಯೇ ಇದೆ ಅಪೂರ್ವ ಸೇಂಟ್ ಮೇರಿಸ್ ದ್ವೀಪ.

ಉಡುಪಿಯಿಂದ ಸುಮಾರು 12 ಕಿಲೋ ಮೀಟರ್ ದೂರದಲ್ಲಿ ಕಾಪು ಬೀಚ್ ಇದ್ದು, ಇಲ್ಲಿ ಒಂದು ಶತಮಾನದಷ್ಟು ಹಳೆಯದಾದ 130 ಅಡಿ ಎತ್ತರದ ದೀಪಸ್ತಂಭ ಕೂಡಾ ಇದೆ. ಇದು ಇಲ್ಲಿನ ಪ್ರಮುಖ ಆಕರ್ಷಣೆಯೂ ಹೌದು. ಇವಷ್ಟೇ ಅಲ್ಲದೆ, ಉದ್ಯಾವರ ಬೀಚ್, ಪಡುಬಿದ್ರಿ ಬೀಚ್, ಕೋಡಿ ಬೀಚ್ ಪ್ರವಾಸಿಗರನ್ನು ಸೆಳೆಯುತ್ತದೆ. ಇನ್ನು ಉಡುಪಿಯಿಂದ ಸುಮಾರು 54 ಕಿಮೀ ದೂರದಲ್ಲಿ ಸುಂದರ ಮರವಂತೆ ಬೀಚ್ ಇದೆ. ಇಲ್ಲಿನ ಸುಂದರ ಭೂದೃಶ್ಯಗಳು ಎಲ್ಲನ್ನೂ ಸೆಳೆಯದೇ ಇರದು. ಮರವಂತೆಯಿಂದ ಸುಮಾರು 45 ಕಿಮೀ ದೂರದಲ್ಲಿರುವ ಬೈಂದೂರಿನಲ್ಲೂ ಒಂದು ಸುಂದರ ಕಡಲತೀರವಿದೆ. ಪ್ರವಾಸದ ಖುಷಿಯನ್ನು ಅನುಭವಿಸಬೇಕು ಎನ್ನುವವರಿಗೆ ಇದೊಂದು ಹೇಳಿ ಮಾಡಿಸಿದಂತಹ ತಾಣ ಕೂಡಾ ಹೌದು.

ವನ್ಯಜೀವಿ ಪ್ರೇಮಿಗಳ ನೆಚ್ಚಿನ ತಾಣ
ನೀವೇನೇನಾದರೂ ವನ್ಯಜೀವಿ ಪ್ರೇಮಿಗಳಾಗಿದ್ದರೆ ಸೋಮೇಶ್ವರ ವನ್ಯಜೀವಿ ಅಭಯಾರಣ್ಯ (ಸುಮಾರು 55 ಕಿಮೀ), ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯಕ್ಕೂ ಭೇಟಿ ನೀಡಬಹುದು. ಉಡುಪಿಯಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಕೂಡಾ ಹತ್ತಿರವೇ ಆಗುತ್ತದೆ.

ಟ್ರೆಕ್ಕಿಂಗ್, ರಿವರ್ ರಾಫ್ಟಿಂಗ್ ಸೇರಿದಂತೆ ಸಾಕಷ್ಟು ಸಾಹಸ ಚಟುವಟಿಕೆಗಳಿಗೂ ಉಡುಪಿಯಲ್ಲಿ ಸಾಕಷ್ಟು ಅವಕಾಶಗಳಿವೆ. ಇನ್ನು ಹೆಬ್ರಿ ಬಳಿ ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಕೂಡ್ಲು ತೀರ್ಥ ಎಂಬ ಜಲಪಾತವಿದೆ. ಇದನ್ನು ಸೀತಾ ಜಲಪಾತ ಎಂದೂ ಕರೆಯುತ್ತಾರೆ. ಇದಲ್ಲದೆ, ಹಸ್ತ ಶಿಲ್ಪ ಹೆರಿಟೇಜ್ ವಿಲೇಜ್, ಮಣಿಪಾಲ್ ಮ್ಯೂಸಿಯಂ ಆಫ್ ಅನ್ಯಾಟಮಿ ಆ್ಯಂಡ್ ಪೆಥಾಲಜಿ, ಮಣಿಪಾಲ ಎಂಡ್ ಪಾಯಿಂಟ್, ಡಾ. ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿರುತ್ತದೆ.

ಆಹಾರ ವೈವಿಧ್ಯ
ಇನ್ನು ಕರಾವಳಿಯ ಪಾಕ ವೈವಿಧ್ಯವನ್ನೂ ಇಲ್ಲಿ ಸವಿಯಬಹುದು. ನೀವೇನಾದರೂ ಮೀನು ಪ್ರಿಯರಾದರೆ ಮೀನಿನ ಸಾಕಷ್ಟು ರುಚಿಕರ ಖಾದ್ಯಗಳನ್ನು ಸವಿಯುವ ಅವಕಾಶ ಇಲ್ಲಿವೆ. ಇನ್ನು ಕರಾವಳಿಯ ವಿಶಿಷ್ಟ ಆಹಾರವಾದ ಕೆಸುವಿನ ಎಲೆಯಿಂದ ಮಾಡಿದ ಪತ್ರೋಡೆ, ನೀರುದೋಸೆ, ಬನ್ಸ್, ಗೋಳಿ ಬಜೆ ಸೇರಿದಂತೆ ಕರಾವಳಿಯ ಆಹಾರದ ಸವಿಯನ್ನೂ ಉಣ್ಣಬಹುದು.

ಉಡುಪಿ ನಗರ ಸೇರಿದಂತೆ ಆಸುಪಾಸಿನಲ್ಲಿ ನಿಮ್ಮ ಬಜೆಟ್‍ಗೆ ಅನುಗುಣವಾಗಿ ಹೋಟೆಲ್, ಹೋಮ್‍ಸ್ಟೇ, ರೆಸಾರ್ಟ್‍ಗಳು ಲಭ್ಯವಿದೆ. ರಾಜ್ಯದ ಪ್ರಮುಖ ನಗರಗಳನ್ನು ಸಂಪರ್ಕಿಸುವಂತೆ ಖಾಸಗಿ ಮತ್ತು ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಕೂಡಾ ಇದೆ. ಉಡುಪಿಯಲ್ಲಿ ರೈಲು ನಿಲ್ದಾಣ ಕೂಡಾ ಇದೆ. ಇನ್ನು ವಿಮಾನದಲ್ಲಿ ಬರುವವರಿಗೆ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರವಾಗುತ್ತದೆ.

Show More

Related Articles

Leave a Reply

Your email address will not be published. Required fields are marked *

Back to top button