Special Desk

ಕಡಲ ನಡುವೆ ಸಾಗುವ ಖುಷಿ : ಹೋಗೋಣ ಬನ್ನಿ ಸೇಂಟ್ ಮೇರಿಸ್ ದ್ವೀಪಕ್ಕೆ

ಕೃಷ್ಣನೂರು ಉಡುಪಿಗೆ ಬಂದವರು ಮಲ್ಪೆಗೆ ಬರದೇ ಇರಲಾರರು… ಹೀಗೆ ಮಲ್ಪೆಗೆ ಬಂದವರನ್ನು ಸೆಳೆಯುವ ಇನ್ನೊಂದು ತಾಣ ಎಂದರೆ ಅದು ಸೇಂಟ್ ಮೇರಿಸ್ ದ್ವೀಪ. ಈ ಅಪೂರ್ವ ದ್ವೀಪಕ್ಕೆ ಉಡುಪಿಯಿಂದ ಸುಮಾರು 6 ಕಿ ಮೀ ದೂರ ಇದೆ. ರಜಾಕಾಲದ ಸಂಪೂರ್ಣ ಆನಂದವನ್ನು ಪಡೆಯಲು ಬೇಕಾದಂತಹ ತಾಣಗಳಲ್ಲಿ ಸೇಂಟ್ ಮೇರಿಸ್ ದ್ವೀಪ ಕೂಡಾ ಒಂದು. ಕರಾವಳಿಗರ ಪ್ರಮುಖ ಪಿಕ್ನಿಕ್ ತಾಣ ಇದು. ಅದೂ ಅಲ್ಲದೆ, ರಾಜ್ಯದ ನಾನಾ ಭಾಗಗಳಿಂದ, ದೇಶದ ವಿವಿಧ ಭಾಗಗಳಿಂದ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ಉಡುಪಿಗೆ ಬಂದವರನ್ನು ಸೆಳೆಯುವ ಪ್ರಮುಖ ಸ್ಥಳಗಳಲ್ಲಿ ಈ ಸುಂದರ ದ್ವೀಪ ಕೂಡಾ ಒಂದು.

ಇದನ್ನು ಕೋಕೋನಟ್ ಐಲ್ಯಾಂಡ್ ಮತ್ತು ಥೋನ್ಸೆಪರ್ ಎಂದೂ ಕರೆಯಲಾಗುತ್ತದೆ. ಈ ದ್ವೀಪ ಎಷ್ಟು ಪ್ರವಾಸಿ ಆಕರ್ಷಣೆಯಾಗಿ ಗಮನ ಸೆಳೆದಿದೆಯೋ, ಭೂವೈಜ್ಞಾನಿಕ ರಚನೆಯ ತಾಣವಾಗಿಯೂ ಅಷ್ಟೇ ಗಮನ ಸೆಳೆದಿದೆ. ಇದು ಸ್ತಂಭಾಕಾರದ ಬಸಾಲ್ಟಿಕ್ ಲಾವಾ ಶಿಲಾ ರಚನೆಗಳಿಗೆ ಪ್ರಸಿದ್ಧಿ. ಇಲ್ಲಿನ ಶಿಲಾಸ್ತಂಭಗಳ ರಚನೆಗೆ ಅದರದ್ದೇ ಆದ ಮಹತ್ವವಿದೆ. ಅದೆಷ್ಟೋ ಸಹಸ್ರ ವರ್ಷಗಳ ಹಿಂದೆ ಕುದಿಯುತ್ತಿದ್ದ ಲಾವಾರಸ ತಣ್ಣಗಾಗಿ ದ್ವೀಪದ ಬಂಡೆ ಮತ್ತು ಶಿಲಾಸ್ತಂಭಗಳ ವಿಶಿಷ್ಟ ರಚನೆಯಾಗಿ ರೂಪುಗೊಂಡಿದೆ. ಈ ದ್ವೀಪದಲ್ಲಿರುವ ಈ ಅಗ್ನಿ ಶಿಲಾಸ್ತಂಭಗಳ ವಿಶೇಷ ತಾಣ ನಮ್ಮ ದೇಶದ ಬೇರೆಲ್ಲೂ ಇಲ್ಲ ಎಂಬುದು ತಜ್ಞರ ಅಭಿಮತ. ರಾಜ್ಯದ ನಾಲ್ಕು ಭೌಗೋಳಿಕ ಸ್ಮಾರಕಗಳಲ್ಲಿ ಈ ದ್ವೀಪ ಕೂಡಾ ಒಂದು. ಕ್ರಿ.ಶ 1498ರಲ್ಲಿ ಪೋರ್ಚುಗಲ್‍ನಿಂದ ವಾಸ್ಕೊ ಡ ಗಾಮಾ ಈ ದ್ವೀಪಕ್ಕೆ ಬಂದಿದ್ದಾಗಿ ಹೇಳಲಾಗುತ್ತದೆ.

ದೋಣಿಯ ಮೂಲಕವೇ ಈ ದ್ವೀಪಕ್ಕೆ ಹೋಗಬೇಕು. ಪ್ರವಾಸಿಗರಿಗಾಗಿ ಸುಧಾರಿತ ಬೋಟಿಂಗ್ ಸೇವೆ ಇದೆ. ದೋಣಿಗಳು ಬೆಳಗ್ಗೆ 9.00ರಿಂದ ಸಂಜೆ 6.00 ಗಂಟೆಯವರೆಗೆ ಲಭ್ಯವಿರುತ್ತದೆ. ಸುಮಾರು ಅರ್ಧಗಂಟೆಗಳ ದೋಣಿ ಸವಾರಿ ಮೂಲಕ ಇಲ್ಲಿಗೆ ತಲುಪಬಹುದು. ಮಂಗಳೂರಿನಿಂದ ಉತ್ತರಕ್ಕೆ ಸುಮಾರು 58 ಕಿಮೀ ದೂರದಲ್ಲಿ ಈ ಸೇಂಟ್ ಮೇರಿಸ್ ದ್ವೀಪವಿದೆ. ಮಲ್ಪೆ ಬಳಿ ಉಳಿಯುವುದಕ್ಕೂ ಸಾಕಷ್ಟು ಅವಕಾಶಗಳಿವೆ. ಬೀಚ್ ಬಳಿ ರೆಸಾರ್ಟ್‍ಗಳು ಲಭ್ಯವಿದೆ. ಇನ್ನು ಸಮೀಪದ ಪಟ್ಟಣವಾದ ಉಡುಪಿಯಲ್ಲಿ ನಿಮ್ಮ ಬಜೆಟ್‍ಗೆ ಅನುಗುಣವಾದ ಹೊಟೇಲ್‍ಗಳು, ಐಷಾರಾಮಿ ವಾಸ್ತವ್ಯದ ಆಯ್ಕೆಗಳಿವೆ.

 

Show More

Related Articles

Leave a Reply

Your email address will not be published. Required fields are marked *

Back to top button