News Roundup

ಪಚ್ಚಿನಡ್ಕ-ನೋರ್ಣಡ್ಕ ರಸ್ತೆ: ಅಭಿವೃದ್ಧಿಯ ಭರವಸೆಗಳ ನಡುವೆ ಗ್ರಾಮಸ್ಥರ ನರಕಯಾತನೆ

ಯಾದವ ಕುಲಾಲ್ ಅಗ್ರಬೈಲು

ಬಿ.ಸಿ.ರೋಡ್: ರಸ್ತೆ ಎಂದರೆ ಜನರ ಜೀವನದ ನಾಡಿ. ಆದರೆ ಅಮ್ಟಾಡಿ ಗ್ರಾಮದ ಪಚ್ಚಿನಡ್ಕ-ನೋರ್ಣಡ್ಕ ರಸ್ತೆಯ ಸ್ಥಿತಿ ನೋಡಿದರೆ ಅದು ರಸ್ತೆಗಿಂತ ಕೆಸರುಗುಂಡಿಯೇ ಹೆಚ್ಚು ಎಂಬ ಭಾವನೆ ಮೂಡುತ್ತದೆ. ಸುಮಾರು 300 ಮೀಟರ್ ಉದ್ದದ ಈ ರಸ್ತೆಯಲ್ಲಿ ಡಾಮರು ಸಂಪೂರ್ಣ ಕಿತ್ತು ಹೋಗಿದ್ದು, ಮಣ್ಣು ಮತ್ತು ಕೆಸರು ಆವರಿಸಿರುವುದರಿಂದ ಸಾರ್ವಜನಿಕರು ಪ್ರತಿದಿನ ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.

ಒಂದು ಕಾಲದಲ್ಲಿ ಪಚ್ಚಿನಡ್ಕದಿಂದ ಕೆಂಪುಗುಡ್ಡೆ, ಅಜೆಕಲ ಹಾಗೂ ಬಂಟ್ವಾಳ ಬೈಪಾಸ್‍ಗೆ ಸಂಪರ್ಕ ಕಲ್ಪಿಸುವ ಸುಲಭ ಮಾರ್ಗವಾಗಿದ್ದ ಈ ರಸ್ತೆ ಇಂದು ಜನರ ಪಾಲಿಗೆ ದುಃಸ್ವಪ್ನವಾಗಿದೆ. ದ್ವಿಚಕ್ರ ವಾಹನ ಸವಾರರು ಜಾರಿಬೀಳುವ ಭಯದಲ್ಲೇ ಸಂಚರಿಸುತ್ತಿದ್ದರೆ, ಮಳೆಗಾಲದಲ್ಲಿ ರಸ್ತೆಯ ಸ್ಥಿತಿ ಮತ್ತಷ್ಟು ಹದಗೆಟ್ಟು ಸಂಚಾರವೇ ದುಸ್ತರವಾಗುತ್ತದೆ. ಹಲವರು ತಮ್ಮ ವಾಹನಗಳನ್ನು ಮಧ್ಯದಲ್ಲೇ ನಿಲ್ಲಿಸಿ, ಪರ್ಯಾಯ ಮಾರ್ಗವನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ರಸ್ತೆಯನ್ನೇ ಅವಲಂಬಿಸಿರುವ ನೂರಾರು ಕುಟುಂಬಗಳು ಪ್ರತಿನಿತ್ಯ ಸಂಕಷ್ಟ ಅನುಭವಿಸುತ್ತಿವೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು, ಹಿರಿಯ ನಾಗರಿಕರು ಹಾಗೂ ಮಹಿಳೆಯರು ತಮ್ಮ ದೈನಂದಿನ ಸಂಚಾರಕ್ಕಾಗಿ ಪರದಾಡುತ್ತಿದ್ದಾರೆ. ರಸ್ತೆ ಹಾಳಾಗಿರುವ ಕಾರಣ ಜನರು ಸುಮಾರು ಐದು ಕಿಲೋಮೀಟರ್ ಹೆಚ್ಚುವರಿ ಸುತ್ತು ಬಳಸಿ ತಮ್ಮ ಗಮ್ಯಸ್ಥಾನ ತಲುಪಬೇಕಾಗಿದೆ. ಇದರಿಂದ ಸಮಯ, ಇಂಧನ ಹಾಗೂ ಹಣದ ಹೆಚ್ಚುವರಿ ಹೊರೆ ಜನರ ಮೇಲಿದೆ. ಮೀನು, ತರಕಾರಿ ಮತ್ತು ಗೃಹೋಪಯೋಗಿ ವಸ್ತುಗಳ ವ್ಯಾಪಾರಿಗಳು ಕೂಡ ರಸ್ತೆ ಸಮಸ್ಯೆಯಿಂದ ಬೇಸತ್ತಿದ್ದಾರೆ. ಈ ಭಾಗದಲ್ಲಿ ಉತ್ತಮ ವ್ಯಾಪಾರದ ನಿರೀಕ್ಷೆಯೊಂದಿಗೆ ಆಗಮಿಸುವವರು ಕೆಸರಿನ ರಸ್ತೆಯಲ್ಲಿ ಹರಸಾಹಸ ಪಟ್ಟು ಸಂಚರಿಸಿ, ಕೆಲವೊಮ್ಮೆ ವ್ಯಾಪಾರವೇ ಸಾಧ್ಯವಾಗದೆ ಖಾಲಿಹಸ್ತದಿಂದ ಹಿಂದಿರುಗುತ್ತಿದ್ದಾರೆ. ಇದರಿಂದ ಸ್ಥಳೀಯ ಆರ್ಥಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀಳುತ್ತಿದೆ.

ರಸ್ತೆಯ ದುಸ್ಥಿತಿಯ ಬಗ್ಗೆ ಸಾರ್ವಜನಿಕರು ಹಲವು ಬಾರಿ ಗಮನ ಸೆಳೆದಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ. ಪರಿಣಾಮವಾಗಿ ಸ್ಥಳೀಯರು ತಮ್ಮ ಅಸಮಾಧಾನವನ್ನು ವ್ಯಂಗ್ಯದ ಮೂಲಕ ವ್ಯಕ್ತಪಡಿಸಲು ಮುಂದಾಗಿದ್ದಾರೆ. ‘ಪಚ್ಚಿನಡ್ಕ-ನೋರ್ಣಡ್ಕ ರಸ್ತೆಯಲ್ಲೊಂದು ಕೆಸರ್‍ಡೊಂಜಿ ದಿನ’ ಎಂಬ ಕಾಲ್ಪನಿಕ ಕಾರ್ಯಕ್ರಮದ ಪೆÇೀಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಅಸಹಾಯಕತೆಯನ್ನೂ ಆಡಳಿತದ ನಿರ್ಲಕ್ಷ್ಯವನ್ನೂ ಬಿಂಬಿಸಿದೆ. ಜೊತೆಗೆ ‘ಅತೀ ಕೆಟ್ಟ ರಸ್ತೆ’ ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸಿ, ಪ್ರಯಾಣಿಕರ ಜೀವಕ್ಕೆ ಅಪಾಯ’ ಎಂಬ ಎಚ್ಚರಿಕೆ ಫಲಕಗಳ ಚಿತ್ರಗಳೂ ವ್ಯಾಪಕವಾಗಿ ಹರಿದಾಡುತ್ತಿವೆ.

ಮೂಲಭೂತ ಸೌಕರ್ಯಗಳೇ ಅಭಿವೃದ್ಧಿಯ ಅಡಿಪಾಯವಾಗಿರುವ ಈ ಕಾಲಘಟ್ಟದಲ್ಲಿ, ಜನರ ದೈನಂದಿನ ಬದುಕಿಗೆ ಅತ್ಯಗತ್ಯವಾದ ರಸ್ತೆ ಈ ಮಟ್ಟಿಗೆ ಹದಗೆಟ್ಟಿರುವುದು ವಿಷಾದನೀಯ. ಮಳೆಗಾಲ ಮತ್ತಷ್ಟು ತೀವ್ರವಾಗುವ ಮೊದಲು ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ತುರ್ತು ಕ್ರಮ ಕೈಗೊಂಡು ರಸ್ತೆ ದುರಸ್ತಿ ಕಾರ್ಯ ಆರಂಭಿಸಬೇಕು. ಇಲ್ಲದಿದ್ದರೆ ಈ ರಸ್ತೆ ಸಾರ್ವಜನಿಕರ ಸಂಕಷ್ಟದ ಸಂಕೇತವಾಗಿ ಉಳಿಯುವ ಅಪಾಯವಿದೆ.

***
ಈ ರಸ್ತೆಯಲ್ಲಿ ಪ್ರತಿದಿನ ಸಂಚರಿಸುವವರು ಮಾತ್ರ ಇದರ ಕಷ್ಟವನ್ನು ಅರ್ಥ ಮಾಡಿಕೊಳ್ಳಬಹುದು. ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಯಾವ ಕ್ಷಣದಲ್ಲಿ ಜಾರಿಬೀಳುತ್ತೇವೋ ಎಂಬ ಭಯ ಇರುತ್ತದೆ. ಮಳೆಗಾಲದಲ್ಲಿ ಪರಿಸ್ಥಿತಿ ಇನ್ನೂ ಹದಗೆಡುತ್ತದೆ. ತಾತ್ಕಾಲಿಕವಾಗಿ ಮಣ್ಣು ಹಾಕಿ ಹೋಗುವುದು ಸಮಸ್ಯೆಗೆ ಪರಿಹಾರವಲ್ಲ. ಗುಣಮಟ್ಟದ ಡಾಮರು ರಸ್ತೆ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ನೀಡಬೇಕು. ಮತ್ತೊಂದು ಮಳೆಗಾಲ ಕಳೆಯುವ ಮೊದಲು ಕಾಮಗಾರಿ ಆರಂಭವಾಗಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸುವುದರಿಂದ ಹಿಡಿದು ಆಸ್ಪತ್ರೆಗೆ ಹೋಗುವವರೆಗೂ ಪ್ರತಿಯೊಂದು ಕೆಲಸವೂ ಸವಾಲಾಗಿದೆ. ಜನಪ್ರತಿನಿಧಿಗಳು ಒಮ್ಮೆ ಈ ರಸ್ತೆಯಲ್ಲಿ ಸಂಚರಿಸಿದರೆ ಜನರ ಸಮಸ್ಯೆ ಅರ್ಥವಾಗುತ್ತದೆ.
– ದಿನೇಶ್, ಸ್ಥಳೀಯ ನಿವಾಸಿ

**

ನಮ್ಮ ಭಾಗದ ಜನರಿಗೆ ಈ ರಸ್ತೆ ಜೀವನಾಡಿಯಾಗಿದೆ. ಆದರೆ ಈಗ ಇದು ರಸ್ತೆಯೋ, ಕೆಸರುಗುಂಡಿಯೋ ಎಂಬುದೇ ಗೊತ್ತಾಗದ ಸ್ಥಿತಿ ನಿರ್ಮಾಣವಾಗಿದೆ. ತರಕಾರಿ ತರಲು, ಮಕ್ಕಳನ್ನು ಶಾಲೆಗೆ ಕಳುಹಿಸಲು, ಆಸ್ಪತ್ರೆ ಅಥವಾ ಕಚೇರಿಗೆ ಹೋಗಲು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದೇವೆ. ರಸ್ತೆ ಸ್ಥಿತಿ ನೋಡಿದರೆ ಮನೆಯಿಂದ ಹೊರಡಲು ಭಯವಾಗುತ್ತದೆ. ವಯಸ್ಸಾದವರಿಗೆ ಈ ರಸ್ತೆ ಇನ್ನಷ್ಟು ಕಷ್ಟಕರವಾಗಿದೆ. ಸಂಬಂಧಪಟ್ಟವರು ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು.
– ಪ್ರೇಮಾ, ಗೃಹಿಣಿ

Show More

Related Articles

Leave a Reply

Your email address will not be published. Required fields are marked *

Back to top button