News Roundup

ಕಾವಳಮೂಡೂರು – ದೂಮಳಿಕೆ ರಸ್ತೆಯಲ್ಲೀಗ ಹೊಂಡಗಳದ್ದೇ ಸಾಮ್ರಾಜ್ಯ : ದಶಕದ ನಿರ್ಲಕ್ಷ್ಯಕ್ಕೆ ಸಾವಿರಾರು ಜನರ ನರಕಯಾತನೆ

ಯಾದವ ಕುಲಾಲ್ ಅಗ್ರಬೈಲು
ಬಿ.ಸಿ.ರೋಡ್: ಬಂಟ್ವಾಳ – ಧರ್ಮಸ್ಥಳಕ್ಕೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯೊಂದು ಅಭಿವೃದ್ಧಿಯ ಕನಸನ್ನೇ ಕಾಣದೆ ಹೊಂಡಗಳ ಸಾಗರವಾಗಿ ಮಾರ್ಪಟ್ಟಿದ್ದು, ಸಾವಿರಾರು ಜನರ ದೈನಂದಿನ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ. ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮ ಪಂಚಾಯತ್ ಕಚೇರಿಯ ಮುಂಭಾಗದಲ್ಲೇ ಹಾದು ಹೋಗುವ ಕಾವಳಕಟ್ಟೆ ಬಳಿಯ ದೂಮಳಿಕೆ ರಸ್ತೆ ಇಂದು ಜನಪ್ರತಿನಿಗಳ ನಿರ್ಲಕ್ಷ್ಯಕ್ಕೆ ಜೀವಂತ ಸಾಕ್ಷಿಯಾಗಿದೆ.

ಸುಮಾರು ಐನೂರಕ್ಕೂ ಅಧಿಕ ನಿವೇಶನಗಳ ನಿವಾಸಿಗಳು, ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಹಿರಿಯ ನಾಗರಿಕರು ಈ ರಸ್ತೆಯನ್ನೇ ಮುಖ್ಯ ಸಂಪರ್ಕ ಮಾರ್ಗವಾಗಿ ಬಳಸುತ್ತಿದ್ದಾರೆ. ಆದರೆ ರಸ್ತೆಯುದ್ದಕ್ಕೂ ಬಿದ್ದಿರುವ ಬೃಹತ್ ಹೊಂಡಗಳು, ಕೆಸರು ಮತ್ತು ಕಲ್ಲುಗಳಿಂದ ಸಂಚಾರ ದುಸ್ತರವಾಗಿದ್ದು, ಪ್ರತಿದಿನವೂ ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಕಳೆದ ಹನ್ನೆರಡು ವರ್ಷಗಳಿಂದ ಈ ರಸ್ತೆಗೆ ಸಮರ್ಪಕ ಡಾಮರೀಕರಣ ನಡೆದಿಲ್ಲ. ಪರಿಣಾಮವಾಗಿ ರಸ್ತೆಯ ಅಸ್ತಿತ್ವವೇ ಕಣ್ಮರೆಯಾಗಿದ್ದು, ಹೊಂಡಗಳ ನಡುವೆ ರಸ್ತೆ ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಕೆಸರುಮಯವಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರು ಜಾರಿ ಬೀಳುವುದು ಸಾಮಾನ್ಯ ದೃಶ್ಯವಾಗಿದೆ.

ತಾಲೂಕಿನ ಅನೇಕ ಭಾಗಗಳಲ್ಲಿ ರಸ್ತೆಗಳು ಕಾಂಕ್ರೀಟೀಕರಣಗೊಂಡು ಉತ್ತಮ ಸೌಲಭ್ಯ ಪಡೆದಿದ್ದರೂ, ಗ್ರಾಮ ಪಂಚಾಯತ್ ಕಚೇರಿ ಎದುರಿನಲ್ಲೇ ಇರುವ ಈ ರಸ್ತೆ ಮಾತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ಹಲವು ವರ್ಷಗಳಿಂದ ಗ್ರಾಮಸ್ಥರು ಪಂಚಾಯತ್‍ಗೆ ಮನವಿ ಸಲ್ಲಿಸುತ್ತಿದ್ದರೂ ಶಾಶ್ವತ ಪರಿಹಾರ ದೊರೆತಿಲ್ಲ. ಪ್ರತೀ ವರ್ಷ ಹೊಂಡಗಳಿಗೆ ಮಣ್ಣು ಹಾಕುವ ತಾತ್ಕಾಲಿಕ ಕ್ರಮ ಮಾತ್ರ ಕೈಗೊಳ್ಳಲಾಗುತ್ತಿದ್ದು, ಮಳೆ ಬಂದ ಕೂಡಲೇ ಅದು ಮತ್ತೆ ಮೊದಲಿನ ಸ್ಥಿತಿಗೆ ಮರಳುತ್ತಿದೆ.

ಈಗ ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಶಾಲಾ ಮಕ್ಕಳು ಪ್ರತಿದಿನ ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದ್ದು, ಇಳಿಜಾರು ಪ್ರದೇಶಗಳಲ್ಲಿ ಜಾರಿ ಬೀಳುವ ಘಟನೆಗಳು ಹೆಚ್ಚುತ್ತಿವೆ. ಪಾದಚಾರಿಗಳ ಮೇಲೆ ವಾಹನಗಳಿಂದ ಕೆಸರು ಚಿಮ್ಮುವುದು ನಿತ್ಯದ ಕಾಟವಾಗಿದೆ. ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಸೇರಿದಂತೆ ಅಗತ್ಯ ಸೇವೆಗಳ ವಾಹನಗಳ ಸಂಚಾರಕ್ಕೂ ಈ ರಸ್ತೆ ಅಡ್ಡಿಯಾಗುತ್ತಿದೆ. ಸಾವಿರಾರು ಜನರ ಬದುಕಿಗೆ ನೇರವಾಗಿ ಸಂಬಂಸಿದ ಈ ರಸ್ತೆಯ ಅಭಿವೃದ್ಧಿಗೆ ಜನಪ್ರತಿನಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಹರಿಸಿ ಶಾಶ್ವತ ಕಾಮಗಾರಿ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

******
“ಈ ರಸ್ತೆಯ ಸಮಸ್ಯೆ ಇಂದಿನದಲ್ಲ. ಹಲವು ವರ್ಷಗಳಿಂದ ಇದೇ ಸ್ಥಿತಿ ಇದೆ. ಪ್ರತೀ ಮಳೆಗಾಲ ಬಂದಾಗ ರಸ್ತೆಯು ಕೆಸರುಗದ್ದೆಯಾಗಿ ಮಾರ್ಪಡುತ್ತದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು, ಹಿರಿಯರನ್ನು ಆಸ್ಪತ್ರೆಗೆ ಕರೆದೊಯ್ಯಲು ತುಂಬಾ ಕಷ್ಟವಾಗುತ್ತದೆ. ಜನಪ್ರತಿನಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರತಿದಿನ ಮಾರುಕಟ್ಟೆಗೆ ಹೋಗಲು ಇದೇ ರಸ್ತೆಯನ್ನು ಬಳಸಬೇಕಾಗುತ್ತದೆ. ಮಳೆ ಬಂದರೆ ರಸ್ತೆಯಲ್ಲಿ ನಡೆದುಕೊಂಡು ಹೋಗುವುದೇ ಕಷ್ಟ. ವಾಹನಗಳು ಹಾದುಹೋದಾಗ ಕೆಸರು ಚಿಮ್ಮಿ ಬಟ್ಟೆಗಳೆಲ್ಲ ಮಣ್ಣಾಗುತ್ತವೆ. ಶಾಶ್ವತ ಕಾಮಗಾರಿ ಮಾಡದಿದ್ದರೆ ಸಮಸ್ಯೆ ಮುಂದುವರಿಯುತ್ತಲೇ ಇರುತ್ತದೆ.
– ಮಹಮ್ಮದ್ ಇಸಾಕ್, ದೂಮಳಿಕೆ
***
ಶಾಲೆಗೆ ಹೋಗುವಾಗ ಪ್ರತಿದಿನ ಈ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕು. ಮಳೆಗಾಲದಲ್ಲಿ ಕೆಸರಿನಿಂದ ಬಟ್ಟೆ, ಶೂಗಳು ಹಾಳಾಗುತ್ತವೆ. ಕೆಲವೊಮ್ಮೆ ಜಾರಿ ಬೀಳುವ ಅಪಾಯವೂ ಇರುತ್ತದೆ. ವಿದ್ಯಾರ್ಥಿಗಳ ಕಷ್ಟವನ್ನು ಗಮನಿಸಿ ರಸ್ತೆ ಅಭಿವೃದ್ಧಿಪಡಿಸಬೇಕು. ದೂಮಳಿಕೆ ರಸ್ತೆಯ ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಂಡು, ಶಾಶ್ವತವಾಗಿ ಡಾಮರೀಕರಣ ಅಥವಾ ಕಾಂಕ್ರೀಟೀಕರಣ ಮಾಡಿ ಸಾರ್ವಜನಿಕರ ಸಂಚಾರದ ಸಂಕಷ್ಟ ನಿವಾರಿಸಬೇಕು.
– ರೇಖಾ, ವಿದ್ಯಾರ್ಥಿನಿ
****
ವರ್ಷದಿಂದ ವರ್ಷಕ್ಕೆ ಮನವಿ ಕೊಡುತ್ತಿದ್ದೇವೆ. ಆದರೆ ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ. ಹೊಂಡಗಳಿಗೆ ಮಣ್ಣು ಹಾಕುವುದು ಸಮಸ್ಯೆಗೆ ಪರಿಹಾರವಲ್ಲ. ಸಾವಿರಾರು ಜನರು ಬಳಸುವ ಈ ರಸ್ತೆಗೆ ಸರ್ಕಾರ ವಿಶೇಷ ಅನುದಾನ ನೀಡಿ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕು. ರಸ್ತೆಯಲ್ಲಿರುವ ದೊಡ್ಡ ಹೊಂಡಗಳನ್ನು ತಪ್ಪಿಸಲು ಹೋಗಿ ಅನೇಕ ಬಾರಿ ವಾಹನ ಸವಾರರು ಅಪಘಾತಕ್ಕೀಡಾಗಿದ್ದಾರೆ. ರಾತ್ರಿ ವೇಳೆ ಪರಿಸ್ಥಿತಿ ಇನ್ನೂ ಅಪಾಯಕಾರಿಯಾಗಿದೆ. ಪಂಚಾಯತ್ ಕಚೇರಿ ಎದುರಿನಲ್ಲೇ ಇರುವ ರಸ್ತೆಯ ಈ ದುಸ್ಥಿತಿ ನಿಜಕ್ಕೂ ಬೇಸರದ ಸಂಗತಿ.
– ಅಬ್ದುಲ್ ರಝಾಕ್, ಸ್ಥಳೀಯರು

Show More

Related Articles

Leave a Reply

Your email address will not be published. Required fields are marked *

Back to top button