Kollywood

ಸೂಪರ್‌ಸ್ಟಾರ್ ರಜನಿಕಾಂತ್ ಮೇಲೆ ಅಂದೊಮ್ಮೆ ನಡೆದಿತ್ತು ಹಲ್ಲೆ ಯತ್ನ! : ಇವರನ್ನು ರಕ್ಷಿಸಿದವರು ಒಬ್ಬರು ಖ್ಯಾತ ನಟ!

ಸೂಪರ್‌ಸ್ಟಾರ್ ರಜನಿಕಾಂತ್ ಅವರೆಂದರೆ ಅಭಿಮಾನಿಗಳಿಗೆ ದೇವರಿದ್ದಂತೆ… ಕೋಟ್ಯಂತರ ಅಭಿಮಾನಿಗಳ ಹೃದಯ ಸಿಂಹಾಸನವನ್ನು ಆಳುತ್ತಿರುವ ಅರಸ ಇವರು. ಇಂತಹ ರಜನಿಕಾಂತ್ ಮೇಲೂ ನಡೆದಿತ್ತು ಹಲ್ಲೆ ಯತ್ನ…! ಅಂದಿನ ಈ ಘಟನೆಯನ್ನು ಹಾಗೂ ತನ್ನನ್ನು ರಕ್ಷಿಸಿದ್ದ ಖ್ಯಾತ ನಟ, ಚಿತ್ರಕಥೆಗಾರ, ನಿರ್ದೇಶಕ ಕೆ. ಭಾಗ್ಯರಾಜ್ ಸಹಾಯವನ್ನೂ ರಜನಿಕಾಂತ್ ಸ್ಮರಿಸಿದ್ದಾರೆ.

ಭಾಗ್ಯರಾಜ್ ಅವರ ಸಿನಿಪಯಣದ 50 ವರ್ಷದ ಸಂಭ್ರಮಾಚರಣೆ ವೇಳೆ ರಜನಿಕಾಂತ್ ಈ ಘಟನೆಯನ್ನು ನೆನೆಪಿಸಿಕೊಂಡಿದ್ದಾರೆ.

image credit : x.com/UngalKBhagyaraj

1995ರಲ್ಲಿ ಹಿರಿಯ ನಟ ಶಿವಾಜಿ ಗಣೇಶನ್ ಅವರನ್ನು ಗೌರವಿಸುವ ಸಮಾರಂಭವೊಂದನ್ನು ಆಯೋಜಿಸಲಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಈ ಕಾರ್ಯಕ್ರವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಚಲನಚಿತ್ರೋದ್ಯಮ ಮತ್ತು ರಾಜಕೀಯದ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಅರ್ಪಿಸಲು ವೇದಿಕೆಯೇರಿದ್ದ ರಜನಿಕಾಂತ್ ಜಯಲಲಿತಾ ವಿರುದ್ಧ ಮಾತನಾಡಿದ್ದರು. `ನಾನು ಕೋಪವನ್ನು ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳುವುದಿಲ್ಲ. ನನಗೆ ಮಾತನಾಡಲು ಅವಕಾಶ ಸಿಕ್ಕಾಗ ಕೆಲವೊಮ್ಮೆ ಅದು ಸಿಡಿಯುತ್ತದೆ. ಆ ದಿನ ನನ್ನ ಭಾಷಣದಲ್ಲಿ ನಾನಾಡಿದ್ದ ಮಾತು ಜಯಲಲಿತಾ ಅವರನ್ನು ತೀವ್ರವಾಗಿ ಪರಿಣಾಮ ಬೀರಿತು’ ಎಂದು ರಜನಿಕಾಂತ್ ನೆನಪಿಸಿಕೊಂಡಿದ್ದಾರೆ.

ಅಂದು ವೇದಿಕೆಯಲ್ಲಿ ಜಯಲಲಿತಾ ವಿರುದ್ಧ ಮಾತನಾಡಿ ರಜನಿ ವೇದಿಕೆಯಿಂದ ಇಳಿದಾಗ ಎಐಎಡಿಎಂಕೆ ಕಾರ್ಯಕರ್ತರು, ಬೆಂಬಲಿಗರು ಅವರ ವಿರುದ್ಧ ತಿರುಗಿಬಿದ್ದು ಮುತ್ತಿಗೆ ಹಾಕಿದ್ದರು. ಇವರೊಂದಿಗಿದ್ದ ಜನರು ಎಷ್ಟು ತಡೆಯಲು ಪ್ರಯತ್ನಿಸಿದ್ದರು ಅದು ಸಾಧ್ಯವಾಗಿರಲಿಲ್ಲ. ಈ ವೇಳೆ ರಜನಿಕಾಂತ್ ಮೇಲೆ ಹಲ್ಲೆ ಮಾಡುವ ಪ್ರಯತ್ನವೂ ನಡೆದಿತ್ತು. ಆದರೆ ಇವೆಲ್ಲವನ್ನೂ ಅಲ್ಲಿದ್ದ ಪೊಲೀಸರು ಸುಮ್ಮನೆ ನಿಂತು ನೋಡಿದ್ದರು.

ಸಿಎಂ ವಿರುದ್ಧದ ಮಾತಾಗಿದ್ದರಿಂದ ಪೊಲೀಸರು ಮಧ್ಯಪ್ರವೇಶಿಸಲು ಹೆದರುತ್ತಿದ್ದರು. ಇದನ್ನು ದೂರದಲ್ಲಿದ್ದ ಭಾಗ್ಯರಾಜ್ ಗಮನಿಸಿ ತಕ್ಷಣ ಅಲ್ಲಿಗೆ ಓಡಿ ಬಂದು ಪೊಲೀಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರಂತೆ. ಆದರೆ ಅಧಿಕಾರಿ ಪ್ರತಿಕ್ರಿಯಿಸಲಿಲ್ಲ. ಆಗ ಭಾಗ್ಯರಾಜ್ ಕೋಪಗೊಂಡು ಇಡೀ ಚಿತ್ರರಂಗ ಪ್ರತಿಭಟನೆಗೆ ಎದ್ದೇಳುತ್ತದೆ ಎಂದು ಕೋಪದಲ್ಲಿ ಹೇಳಿದ್ದರು. ಇದಾದ ಬಳಿಕ ಆ ಪೊಲೀಸ್ ಅಧಿಕಾರಿ ರಜನಿಕಾಂತ್ ಅವರನ್ನು ಜೀಪಿನಿಂದ ರಕ್ಷಿಸಿ ಇವರಿಗೆ ತೆರಳಲು ಮತ್ತೊಂದು ವಾಹನದ ವ್ಯವಸ್ಥೆ ಮಾಡಿದ್ದರಂತೆ. ಜೊತೆಗೆ ರಜನಿಕಾಂತ್ ಅವರಿಗೆ ಧೈರ್ಯ ತುಂಬಿದ್ದ ಭಾಗ್ಯರಾಜ್ ` ಮನೆಗೆ ತಲುಪಿದ ನಂತರ ನನಗೆ ಕರೆ ಮಾಡಿ’ ಎಂದೂ ಹೇಳಿದ್ದರಂತೆ. ಈ ಘಟನೆಯನ್ನು ನೆನೆದ ರಜನಿಕಾಂತ್ ಈ ಸಹಾಯಕ್ಕೆ ಯಾವತ್ತೂ ಋಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button