Sandalwood

ಎಂಟು ವರ್ಷ ಹಿಂದಿನ ಖಾಸಗಿ ಸಂಭಾಷಣೆ ಸೋರಿಕೆ : ಕಾನೂನು ಕ್ರಮದ ಎಚ್ಚರಿಕೆ ಕೊಟ್ಟ ರಶ್ಮಿಕಾ ಮಂದಣ್ಣ

ಹೈದರಾಬಾದ್ : ಸೋರಿಕೆಯಾದ ಸುಮಾರು ಎಂಟು ವರ್ಷ ಹಳೆಯ ಖಾಸಗಿ ಸಂಭಾಷಣೆಯನ್ನು ಪ್ರಸಾರ ಮಾಡುತ್ತಿರುವವರ ವಿರುದ್ಧ ನಟಿ ರಶ್ಮಿಕಾ ಮಂದಣ್ಣ ಕಿಡಿಕಾರಿದ್ದಾರೆ. ಜೊತೆಗೆ ಈ ಸಂಭಾಷಣೆಯನ್ನು ಪ್ರಸಾರ ಮಾಡುತ್ತಿರುವವರು, ಪ್ರಭಾವಿಗಳು ಹಾಗೂ ಮಾಧ್ಯಮ ವೇದಿಕೆಗಳ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ರಶ್ಮಿಕಾ ಮಂದಣ್ಣ, ಕಳೆದ ಎಂಟು ವರ್ಷಗಳಿಂದ ತಮ್ಮನ್ನು ಗುರಿಯಾಗಿಸಿಕೊಂಡು ತಪ್ಪು ಮಾಹಿತಿ, ಕಿರುಕುಳ, ನಿರಂತರ ದಾಳಿಯ ಅಭಿಯಾನ ನಡೆಸಲಾಗುತ್ತಿದೆ. ಇಂತಹ ವಿವಾದಗಳಿಂದ ವೈಯಕ್ತಿಕ ನೋವು ಉಂಟಾಗಿದ್ದರೂ ತಾಳ್ಮೆ ಮತ್ತು ಮೌನದಿಂದ ಇದ್ದೆ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

ಈಗ ಎಂಟು ವರ್ಷಗಳ ಹಿಂದೆ ರೆಕಾರ್ಡ್ ಮಾಡಲಾಗಿದೆ ಎನ್ನಲಾಗುತ್ತಿರುವ ಖಾಸಗಿ ಸಂಭಾಷಣೆಯನ್ನು ನಮ್ಮ ಗಮನಕ್ಕೆ ತಾರದೆ ಅಥವಾ ಒಪ್ಪಿಗೆ ಇಲ್ಲದೆ ಪ್ರಸಾರ ಮಾಡಿರುವಂತಹ ಇತ್ತೀಚಿನ ಬೆಳವಣಿಗೆಗಳು ಮಿತಿಯ ಗೆರೆಯನ್ನು ದಾಟಿದೆ. ಆ ಸಂಭಾಷಣೆಯ ಒಂದು ಸಣ್ಣ ಭಾಗವನ್ನು ಈಗ ಉದ್ದೇಶಪೂರ್ವಕವಾಗಿ ವಿವಾದವನ್ನು ಸೃಷ್ಟಿಸಲು ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ. ಹೀಗಾಗಿ ಇನ್ನು ಮುಂದೆ ಮೌನವಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಮಾಧ್ಯಮ ವೇದಿಕೆಗಳು, ಪ್ರಭಾವಿಗಳು ಮತ್ತು ವಿಷಯವನ್ನು ಪ್ರಸಾರ ಮಾಡುವ ವ್ಯಕ್ತಿಗಳು ಅದನ್ನು ತಕ್ಷಣವೇ ತೆಗೆದುಹಾಕುವಂತೆ ರಶ್ಮಿಕಾ ಮಂದಣ್ಣ ಒತ್ತಾಯಿಸಿದ್ದಾರೆ. ಜೊತೆಗೆ 24 ಗಂಟೆಗಳ ಕಾಲಾವಕಾಶ ನೀಡಿದ್ದಾರೆ. ಒಂದೊಮ್ಮೆ ಇದಕ್ಕೆ ವಿಫಲವಾದರೆ ಇದರಲ್ಲಿ ಭಾಗಿಯಾಗಿರುವ ವ್ಯಕ್ತಿಗಳು, ಡಿಜಿಟಲ್ ವೇದಿಕೆಗಳು ಮತ್ತು ಮಾಧ್ಯಮ ಸಂಸ್ಥೆಗಳಿಗೆ ಲೀಗಲ್ ನೋಟಿಸ್‌ ಸೇರಿದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

Show More

Related Articles

Leave a Reply

Your email address will not be published. Required fields are marked *

Back to top button