Sandalwood

`ವರನಟ ರಾಜ್‍ಕುಮಾರ್ ಅವರು ಕಲಿಸಿಕೊಟ್ಟ ಪಾಠವನ್ನು ಇಂದಿಗೂ ಪಾಲಿಸುತ್ತಿದ್ದೇನೆ’ : ಬಹುಭಾಷಾ ನಟಿ ಅಂಬಿಕಾ ಮನದಾಳದ ಮಾತು

ಬಹುಭಾಷಾ ನಟಿ ಅಂಬಿಕಾ ಕನ್ನಡದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ನಟಿಸಿದ್ದ ಸಾಕಷ್ಟು ಚಿತ್ರಗಳು ಸೂಪರ್ ಹಿಟ್. ಅದರಲ್ಲೂ ಚಕ್ರವ್ಯೂಹ ಚಿತ್ರದ `ಚಳಿ ಚಳಿ ತಾಳೆನು’ ಹಾಡಂತು ಇಂದಿಗೂ ಫೇಮಸ್. ಹೀಗೆ ಕನ್ನಡದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದ ಅಂಬಿಕಾ ಕನ್ನಡದ ಬಗ್ಗೆ ಅಪಾರ ಪ್ರೀತಿ, ಗೌರವವನ್ನೂ ಇಟ್ಟುಕೊಂಡಿದ್ದಾರೆ.

ಇದೀಗ ಅಂಬಿಕಾ ಅವರು ವರನಟ ರಾಜ್‍ಕುಮಾರ್ ಅವರ ಬಗೆಗೆ ಮೆಚ್ಚುಗೆ ಮಾತುಗಳನ್ನಾಡಿದ್ದು, ರಾಜ್‍ಕುಮಾರ್ ಅವರು ಕಲಿಸಿಕೊಟ್ಟ ಪಾಠವನ್ನು ಇಂದಿಗೂ ನಾನು ಪಾಲಿಸಿಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಜೊತೆಗೆ ತಾನು ಕನ್ನಡದಲ್ಲಿ ನಟಿಸಿದ್ದ ಚಿತ್ರಗಳು, ನಾಯಕ ನಟರನ್ನೂ ನೆನಪಿಸಿಕೊಂಡಿದ್ದಾರೆ.

ತಮಿಳು ನಟ, ಪತ್ರಕರ್ತ ಚಿತ್ರಾ ಲಕ್ಷ್ಮಣ್‍ನ್ ಅವರೊಂದಿಗೆ `ಚಾಯ್ ವಿತ್ ಚಿತ್ರಾ’ ಚಾನೆಲ್‍ನಲ್ಲಿ ಮಾತನಾಡಿದ ಅಂಬಿಕಾ ತನ್ನ ಮನದಾಳದ ಭಾವನೆಗಳನ್ನು ತೆರೆದಿಟ್ಟಿದ್ದಾರೆ. ತಮಿಳಿನಲ್ಲಿ ಈ ಸಂದರ್ಶನ ಇದ್ದರೂ ನಡುನಡುವೆ ಕನ್ನಡದಲ್ಲೂ ಇವರು ಮಾತನಾಡಿದ್ದಾರೆ.


ಈ ವಿಡಿಯೋದಲ್ಲಿ ಸುಮಾರು 2 ನಿಮಿಷಗಳ ಕಾಲ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಆ ಬಳಿಕ ಸಂದರ್ಶನ ಬೇರೆ ಭಾಷೆಗಳ ಚಿತ್ರಗಳತ್ತ ಸಾಗುತ್ತದೆ. ಈ ಎರಡು ನಿಮಿಷಗಳಲ್ಲಿ ಅಂಬಿಕಾ ಮಾತನಾಡಿದ ಮಾತುಗಳ ಸಾರಾಂಶ ಇಲ್ಲಿದೆ…

ಪ್ರಶ್ನೆ : ತೆಲುಗಿನಲ್ಲಿ ಯಾವುದು ಮೊದಲ ಚಿತ್ರ…?

ಅಂಬಿಕಾ : ತೆಲುಗಿನಲ್ಲಿ ಮೊದಲು ಮಾಡಿದ ಚಿತ್ರ ದಾಸರಿ ಸರ್ ಅವರದ್ದು. ಅದು `ಅದ್ದಾಲ ಮೆಡ’. ಇದಾದ ಬಳಿಕ ವಿಶ್ವರೂಪ ಎನ್ನುವಂತಹ ಒಂದು ಚಿತ್ರ ಮಾಡಿದೆ, ಎನ್‍ಟಿಆರ್ ಅವರೊಂದಿಗೆ. ಆದರೆ ಈ ಚಿತ್ರಗಳೆಲ್ಲಾ ದೊಡ್ಡ ಹಿಟ್ ಆಗಲಿಲ್ಲ. ಹೀಗಾಗಿ ತೆಲುಗಿನಲ್ಲಿ ಹೆಚ್ಚಾಗಿ ನಾನು ಬರಲಿಲ್ಲ. ಈ ಸಮಯದಲ್ಲಿ ಕನ್ನಡದಲ್ಲಿ ಎರಡು ಚಿತ್ರಗಳು ದೊಡ್ಡ ಹಿಟ್ ಗಳಿಸಿದ್ದವು. ಸಹಜವಾಗಿಯೇ ಲಕ್ಕಿ ಸ್ಟಾರ್ ಎನ್ನುವ ಹೆಸರು ಬಂತು. ಜೊತೆಗೆ ಕನ್ನಡದಲ್ಲಿ ಹಿಟ್ ಆದ ತಕ್ಷಣ ತೆಲುಗಿನಲ್ಲಿ ನಿರೀಕ್ಷಿತ ಫಲಿತಾಂಶ ಬರಲಿಲ್ಲ ಎಂಬ ಕಾರಣಕ್ಕೆ ನಾನು ಕನ್ನಡದತ್ತ ಹೆಚ್ಚಿನ ಗಮನ ಹರಿಸಿದೆ. ತೆಲುಗು ಹಿಟ್ ಆಗಿದ್ದರಿಂದ ಸಹೋದರಿ ರಾಧಾ ತೆಲುಗಿನ ಕಡೆ ಹೋದರು, ನಾನು ಕನ್ನಡ, ತಮಿಳು, ಮಲಯಾಳಂನಲ್ಲಿ ತೊಡಗಿಸಿಕೊಂಡೆ. ನಮಗೆ ಎಲ್ಲಿ ಹಿಟ್ ಸಿಗುತ್ತದೋ ಅಲ್ಲೇ ನಮ್ಮನ್ನು ಕರೆಯುತ್ತಾರೆ ಅಲ್ವಾ…. ರಾಜ್‍ಕುಮಾರ್ ಸರ್ ಚಿತ್ರಗಳೆಲ್ಲಾ ದೊಡ್ಡ ಹಿಟ್‍ಗಳು ಆಗ…

ಪ್ರಶ್ನೆ : ರಾಜ್‍ಕುಮಾರ್ ಅವರೊಂದಿಗೆ ನಟಿಸಿದ ಅನುಭವಗಳು ಹೇಗಿದ್ದವು…?

ಅಂಬಿಕಾ : ಕನ್ನಡ ನಾನು ಕಲಿತಿದ್ದೆ. ಆದರೆ ಇದರಲ್ಲಿ ಶೇಕಡಾ 80ರಷ್ಟು ಕನ್ನಡ ಕಲಿಸಿದ್ದು ರಾಜ್‍ಕುಮಾರ್ ಸರ್. ಅವರು ಒಂದು ಮಾತು ಹೇಳುತ್ತಿದ್ದರು, ಅದನ್ನು ಯಾವಾಗಲೂ ನನ್ನ ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತೇನೆ. `ಯಾರು ಬೇಕಾದರೂ ಮಾತನಾಡಬಹುದು, ಆದರೆ ಮಾತನಾಡುವುದರಲ್ಲಿ ಒಂದು ಅಂದ ಇರಬೇಕು’ ಎಂದು ಹೇಳುತ್ತಿದ್ದರು. ಯಾಕೆ ಸರ್ ಹೀಗೆ ಎಂದು ನಾನು ಕೇಳಿದ್ದೆ, ಆಗ ಅವರು, `ಮಾತನಾಡುವಾಗ ನಾವಾಡುವ ನುಡಿಗಳಲ್ಲಿ ಚಂದವೂ, ಮರ್ಯಾದೆಯೂ ಇರಬೇಕು. ಆಗಲೇ ಆ ಭಾಷೆಗೆ ಅದು ಚಂದ’ ಎಂದು ಹೇಳಿದ್ದರು. ಯಾವಾಗಲೂ `ಮಾತುಗಳಲ್ಲಿ ಮರ್ಯಾದೆ ಇರಬೇಕು’ ಎಂದು ಹೇಳುತ್ತಿದ್ದರು. ಅದನ್ನು ನಾನು ಈ ತನಕ ಪಾಲಿಸಿಕೊಂಡು ಬಂದಿದ್ದೇನೆ. ಕೆಟ್ಟದಾಗಿ ಮಾತನಾಡುವುದು, ಏಕವಚನದಲ್ಲಿ ಮಾತನಾಡುವುದು ಇದನ್ನೆಲ್ಲಾ ನಾನು ಮಾಡುವುದಿಲ್ಲ. ಬನ್ನಿ, ಹೋಗಿ, ನೀವು, ತಾವು… ಹೀಗೆ ನಾನು ಮಾತನಾಡುತ್ತೇನೆ.

ಪ್ರಶ್ನೆ : ಕನ್ನಡದಲ್ಲಿ ಅಂಬರೀಷ್, ರವಿಚಂದ್ರನ್ ಎಲ್ಲರೊಂದಿಗೆ ನಟಿಸಿದ್ದೀರಿ ಅಲ್ವಾ…?

ಅಂಬಿಕಾ : ಹೌದು, ರವಿಚಂದ್ರನ್ ಅವರ ಮೊದಲ ಚಿತ್ರದ ಹೀರೋಯಿನ್ ನಾನು. ಅದು `ಅಸಂಭವ’ ಚಿತ್ರ. ರಾಜ್‍ಕುಮಾರ್ ಸರ್, ಅಂಬರೀಷ್, ವಿಷ್ಣುವರ್ಧನ್, ಅನಂತ್‍ನಾಗ್, ಶಂಕರ್ ನಾಗ್, ಶ್ರೀನಾಥ್, ಪ್ರಭಾಕರ್, ರವಿಚಂದ್ರನ್, ಜಗ್ಗೇಶ್ ಅವರೊಂದಿಗೆ ನಟಿಸಿದ್ದೇನೆ. ಜಗ್ಗೇಶ್ ಅವರೊಂದಿಗೆ ನಟಿಸಿದ ಚಿತ್ರದಲ್ಲಿ ಅವರು ತಂದೆ ಮತ್ತು ಮಗನ ಪಾತ್ರವನ್ನು ನಿರ್ವಹಿಸಿದ್ದರು.

ಪ್ರಶ್ನೆ : ಎಲ್ಲಾ ಭಾಷೆಯನ್ನು ಮಾತನಾಡಿದರೂ ಎಲ್ಲಾ ಚಿತ್ರಗಳಲ್ಲೂ ಡಬ್ಬಿಂಗ್ ಬಳಸಲಾಗಿದೆಯಾ…?

ಅಂಬಿಕಾ : ಎರಡ್ಮೂರು ಚಿತ್ರಗಳಿಗೆ ನಾನೇ ಮಾತನಾಡಿದ್ದೇನೆ. ಆದರೆ ಬಳಿಕ ನನಗೆ ಆಗಲಿಲ್ಲ. ಟೈಮ್ ಇರಲಿಲ್ಲ. ಎರಡು ದಿನ ಡಬ್ಬಿಂಗ್‍ಗೆ ನೀಡುವ ಬದಲು, ಇನ್ನೊಂದು ಚಿತ್ರಕ್ಕೆ ಅದೇ ಸಮಯ ಕೊಟ್ಟರೆ ಎರಡು ದಿನಗಳಲ್ಲಿ ಹಾಡಿನ ಶೂಟಿಂಗ್ ಮುಗಿಯುತ್ತಿತ್ತು. ಹೀಗಾಗಿ ಸಮಯ ಸಾಕಾಗುತ್ತಿರಲಿಲ್ಲ..

 

Show More

Related Articles

Leave a Reply

Your email address will not be published. Required fields are marked *

Back to top button