ಖ್ಯಾತ ನಟ ದಿಲೀಪ್ ರಾಜ್ ಇನ್ನಿಲ್ಲ : ಹೃದಯಾಘಾತದಿಂದ ಕೊನೆಯುಸಿರು
ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ನಟ, ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು. ಮನೆಯಲ್ಲಿದ್ದಾಗಲೇ ತೀವ್ರ ಹೃದಯಾಘಾತಕ್ಕೆ ತುತ್ತಾಗಿದ್ದ ದಿಲೀಪ್ ರಾಜ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಬದುಕಿನ ಪಯಣ ಮುಗಿಸಿದ್ದಾರೆ.
ದಿಲೀಪ್ ರಾಜ್ ನಿಧನಕ್ಕೆ ಚಿತ್ರರಂಗದ ಅನೇಕರು ಹಾಗೂ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ರಂಗಭೂಮಿಯಲ್ಲಿ ತೊಡಗಿಕೊಂಡಿದ್ದ ದಿಲೀಪ್ ಅವರು 2005ರಲ್ಲಿ ಬಿಡುಗಡೆಯಾದ ಬಾಯ್ ಫ್ರೆಂಡ್ ಚಿತ್ರದ ಮೂಲಕ ನಾಯಕ ನಟನಾಗಿ ಸಿನಿರಂಗಕ್ಕೆ ಕಾಲಿಟ್ಟಿದ್ದರು. 2007ರಲ್ಲಿ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಮಿಲನ ಚಿತ್ರ ಇವರಿಗೆ ಇನ್ನಷ್ಟು ಹೆಸರು ತಂದುಕೊಟ್ಟಿತ್ತು. ಇದಾದ ಬಳಿಕ ಇವರು ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ಜೊತೆಗೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಡಾರ್ಲಿಂಗ್ ಕೃಷ್ಣ ನಿರ್ದೇಶನದ `ಲವ್ ಮಾಕ್ಟೇಲ್ 3′ ಚಿತ್ರದಲ್ಲೂ ಇವರು ಗಮನ ಸೆಳೆದಿದ್ದರು.
ಕಿರುತೆರೆಯಲ್ಲೂ ಸಕ್ರಿಯರಾಗಿದ್ದ ದಿಲೀಪ್ ರಾಜ್ ಅವರಿಗೆ ಹಿಟ್ಲರ್ ಕಲ್ಯಾಣ ಧಾರಾವಾಹಿ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಅಲ್ಲದೆ, ಇವರು ‘ಪಾರು’, ‘ನಾ ನಿನ್ನ ಬಿಡಲಾರೆ’ ಧಾರಾವಾಹಿಗಳನ್ನು ನಿರ್ಮಿಸಿದ್ದರು.
ಇನ್ನು ದಿಲೀಪ್ ರಾಜ್ ಅವರ ಜೊತೆಗಿನ ಒಡನಾಟವನ್ನು ನಿರ್ದೇಶಕ ಕೆ.ಎಮ್ ಚೈತನ್ಯ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಲೀಲಾ ಪಾತ್ರ ನಿರ್ವಹಿಸಿದ್ದ ಮಲೈಕಾ ಅವರು ಕೂಡಾ ಭಾವುಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.



