News RoundupSandalwood

ಆಳ್ವಾಸ್ ಸಂಪ್ರದಾಯ ದಿನ 2026 : ಸಂಭ್ರಮಕ್ಕೆ ಸಾಕ್ಷಿಯಾದ ಶಿವರಾಜ್ ಕುಮಾರ್ ದಂಪತಿ

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ `ಆಳ್ವಾಸ್ ಸಂಪ್ರದಾಯ ದಿನ 2026′ ಕಾರ್ಯಕ್ರಮಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಸಾಕ್ಷಿಯಾದರು. ವಿದ್ಯಾಗಿರಿಯ ಕೃಷಿ ಸಿರಿ ಆವರಣದ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಶನಿವಾರ ನಡೆದ ಈ ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕøತಿಯು ಅನಾವರಣಗೊಂಡಿತು.

ಚೆಂಡೆಯಂತಹ ಮಂಗಳ ವಾದ್ಯಗಳು, ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಉಪಸ್ಥಿತರಿದ್ದರು. ನಂತರ ಮಾತನಾಡಿದ ಶಿವರಾಜ್ ಕುಮಾರ್ `ಏನನ್ನೇ ಸಾಧಿಸಬೇಕಾದರೂ ಮನಸ್ಸಿನಲ್ಲಿ ಧಾರಾಳತನ ಬೇಕು. ಅದನ್ನು ನಾನಿಲ್ಲಿ ಕಂಡಿದ್ದೇನೆ. ಡಾ.ಮೋಹನ್ ಆಳ್ವರಿಗೆ ಧನ್ಯವಾದ’ ಎಂದರು.

ಇದಕ್ಕೂ ಮುನ್ನ ಭಾರತದ ಬಹುತ್ವ ಸಾರುವ ಸಾಂಸ್ಕೃತಿಕ ದರ್ಶನ ಮೆರವಣಿಗೆ ಮೂಲಕ ಶಿವರಾಜ್ ಕುಮಾರ್ ದಂಪತಿಯನ್ನು ವೇದಿಕೆಗೆ ಕರೆದುಕೊಂಡು ಬರಲಾಯಿತು.

ಸ್ಮೈಲ್ ಚಿತ್ರದ ನೆನಪು
ಈ ಹಿಂದೆ ಮೂಡುಬಿದಿರೆಗೆ ಬಂದಿದ್ದ ಕ್ಷಣವನ್ನು ಶಿವರಾಜ್‍ಕುಮಾರ್ ನೆನಪಿಸಿಕೊಂಡರು. ಸ್ಮೈಲ್ ಸಿನಿಮಾಕ್ಕಾಗಿ ಬಂದಿದ್ದೆವು. ಈಗ ತುಂಬಾ ಖುಷಿಯಾಯಿತು. 40 ವರ್ಷಗಳ ಬಳಿಕವೂ ನನ್ನ ಮೇಲೆ ಅದೇ ಪ್ರೀತಿ ತೋರಿಸುತ್ತಿದ್ದೀರಿ. ಇದಕ್ಕೆ ನಾನೇ ಪುಣ್ಯವಂತ’ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಹಾಡಿಗೆ ಧ್ವನಿಯಾದ ಶಿವಣ್ಣ
ಕಾರ್ಯಕ್ರಮದಲ್ಲಿ ಹಲವು ಹಾಡುಗಳನ್ನು ಹಾಡಿ ಶಿವರಾಜ್‍ಕುಮಾರ್ ಖುಷಿ ಪಟ್ಟರು. ತಾಳ ಹಿಡಿದು `ಕೋಲು ಮಂಡೆ ಜಂಗಮ ದೇವರು…..’ ಹಾಡಿ, ಹೆಜ್ಜೆ ಹಾಕಿದರು. ಜೊತೆಗೆ ತಮ್ಮ ಪ್ರಥಮ ಚಿತ್ರ `ಆನಂದ್’ ಸಿನಿಮಾದ `ಟುವ್ವಿ ಟುವ್ವಿ’ ಹಾಡು, ಮುತ್ತಣ ಪೀಪಿ ಊದುವ ಹಾಡು, ಮಣಿ ಮಣಿ ಹಾಡು, ಇವನಾರ ಮಗನೋ…, ಬೇಡುವನು ವರವನ್ನು ಜೋಗಿ…, ಯಾರೇ ಕೂಗಾಡಲಿ… ಹಾಗೂ ಸೋದರ ದಿವಂಗತ ಪುನೀತ್ ರಾಜ್‍ಕುಮಾರ್ ಅವರ `ಬೊಂಬೆ ಹೇಳುತೈತೆ… ನೀನೆ ರಾಜಕುಮಾರ’ ಹಾಡನ್ನೂ ಹಾಡಿ ಇವರು ಆನಂದಿಸಿದರು.

ಸಮಾರಂಭದಲ್ಲಿ ಮಾತನಾಡಿದ ಗೀತಾ ಶಿವರಾಜ್ ಕುಮಾರ್, `ನಾವು ಬಾರದಿದ್ದರೆ ತಪ್ಪಾಗುತ್ತಿತ್ತು. ಎಲ್ಲ ಸಂಸ್ಕೃತಿ ಒಂದೆಡೆ ನೋಡುವುದು ಪುಣ್ಯ’ ಎಂದು ಹೇಳಿದರು. ಜೊತೆಗೆ ಇಂಥ ಸಂಸ್ಥೆ ಕಟ್ಟಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಧನ್ಯವಾದ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಕೌಶಿಕ್ ಬರೆದ ಚಿತ್ರವನ್ನು ದಂಪತಿಗೆ ನೀಡಲಾಯಿತು. ದಿನದ ಸ್ಪರ್ಧೆಗಳ ನಿರ್ಣಾಯಕರಾಗಿ ಬಂದ ನಟ ರಾಹುಲ್ ಅಮೀನ್, ಶೈಲಶ್ರೀ ಮೂಲ್ಕಿ, ದಿಶಾ ಶೆಟ್ಟಿ ಹಾಗೂ ಸಾಹಿಲ್ ರೈ, ಮಾಜಿ ಸಚಿವ ಅಭಯಚಂದ್ರ ಜೈನ್, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಸಮೂಹ ಸಂಸ್ಥೆಗಳ ಪ್ರಾಂಶುಪಾಲರುಗಳು ಉಪಸ್ಥಿತರಿದ್ದರು. ನಿತೇಶ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ, ಗುಜರಾತ್, ಈಶಾನ್ಯ ಭಾರತ, ಕೇರಳ, ಕರಾವಳಿ ಕರ್ನಾಟಕ, ಇತರೆ ಭಾರತ ಸೇರಿದಂತೆ ಆರು ತಂಡಗಳು ತಮ್ಮ ತವರೂರಿನ ಕಲಾ ಪ್ರಕಾರವನ್ನು ಪ್ರದರ್ಶಿಸಿದರು. ಜೊತೆಗೆ ಕೇರಳ, ಮಹಾರಾಷ್ಟ್ರ, ಕರ್ನಾಟಕ, ಗುಜುರಾತ್ ಮತ್ತು ದೇಶದ ವಿವಿಧ ಭಾಗಗಳ ಆಹಾರ ಸವಿಯುವ ಸದಾವಕಾಶವು ವಿದ್ಯಾರ್ಥಿಗಳಿಗೆ ದೊರೆಯಿತು.

Show More

Related Articles

Leave a Reply

Your email address will not be published. Required fields are marked *

Back to top button