ನಟಿ ಖುಷ್ಬೂ ಪತಿ, ನಿರ್ದೇಶಕ ಸುಂದರ್ ಸಿ ರಾಜಕೀಯಕ್ಕೆ ಎಂಟ್ರಿ : ಮಧುರೈ ಕೇಂದ್ರದಿಂದ ಕಣಕ್ಕೆ
ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ಬಹುಭಾಷಾ ನಟಿ ಖುಷ್ಬೂ ಪತಿ ಸುಂದರ್ ಸಿ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. 2026ರ ತಮಿಳುನಾಡು ಚುನಾವಣೆಯಲ್ಲಿ ಮಧುರೈ ಸೆಂಟ್ರಲ್ ವಿಧಾನಸಭಾ ಸ್ಥಾನಕ್ಕೆ ಇವರು ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಪುದಿಯ ನೀತಿ ಕಚ್ಚಿ (ಪಿಎನ್‍ಕೆ) ಅಥವಾ ನ್ಯೂ ಜಸ್ಟೀಸ್ ಪಾರ್ಟಿ (ಎನ್‍ಜೆಪಿ) ಅಭ್ಯರ್ಥಿಯಾಗಿ ಇವರು ರಾಜಕೀಯ ಜೀವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಪಕ್ಷ ಎನ್‍ಡಿಎ ಮೈತ್ರಿಕೂಟದಲ್ಲಿದೆ. ಸುಂದರ್ ಸಿ ಪತ್ನಿ ಖುಷ್ಬೂ ತಮಿಳುನಾಡು ಬಿಜೆಪಿಯ ಉಪಾಧ್ಯಕ್ಷರಾಗಿದ್ದಾರೆ.
ಸುಂದರ್ ಸಿ ಈಗ ಬಹುತೇಕ ಆಡಳಿತರೂಢ ಡಿಎಂಕೆ ಸರಕಾರದಲ್ಲಿ ಐಟಿ ಸಚಿವರಾಗಿರುವ ಪಳನಿವೇಲ್ ತಿಯಾಗ ರಾಜನ್ ಅವರ ವಿರುದ್ಧ ಸ್ಪರ್ಧಿಸಲಿದ್ದಾರೆ. ಯಾಕೆಂದರೆ, ಈ ಕ್ಷೇತ್ರದ ಪ್ರಸ್ತುತ ಪ್ರತಿನಿಧಿ ಮಾಹಿತಿ ತಂತ್ರಜ್ಞಾನ ಸಚಿವ ಪಳನಿವೇಲ್ ತಿಯಾಗ ರಾಜನ್ ಅವರನ್ನೇ ಡಿಎಂಕೆ ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆ ಇದೆ.
ತಮಿಳುನಾಡಿನಲ್ಲಿ ಬಿಜೆಪಿ, ಎಐಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಈ ಎನ್‍ಡಿಎ ಮೈತ್ರಿಕೂಟಕ್ಕೆ ಎ.ಸಿ. ಷಣ್ಮುಗಂ ಅವರು ಸ್ಥಾಪಿಸಿರುವ ಪಿಎನ್‍ಕೆ ಕೂಡಾ ಬೆಂಬಲ ನೀಡಿದೆ. ಮೈತ್ರಿಯ ಭಾಗವಾಗಿ ಒಂದು ಸೀಟನ್ನು ಪಿಎನ್‍ಕೆಗೆ ನೀಡಲಾಗಿದೆ.
ಸುಂದರ್ ಸಿ ಪತ್ನಿ ಖುಷ್ಬೂ 2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪ್ರಸ್ತುತ ಅವರು ತಮಿಳುನಾಡಿನಲ್ಲಿ ಪಕ್ಷದ ಉಪಾಧ್ಯಕ್ಷೆಯಾಗಿದ್ದಾರೆ.
View this post on Instagram
ತಮಿಳುನಾಡು ರಾಜಕೀಯದಲ್ಲಿ ಸಿನಿರಂಗದವರು ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ನಟ ವಿಜಯ್ ಅವರು ಕೂಡಾ ತಮಿಳಗ ವೆಟ್ರಿ ಕಳಗಂ ಮೂಲಕ ಕಣದಲ್ಲಿದ್ದಾರೆ. ಇದೀಗ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ನಟ, ನಿರ್ದೇಶಕ ಸುಂದರ್ ಸಿ ಅವರು ಕೂಡಾ ರಾಜಕೀಯದ ಅಗ್ನಿಪರೀಕ್ಷೆಗೆ ಒಳಗಾಗುತ್ತಿದ್ದಾರೆ.



