ವಿವಾಹ ವಾರ್ಷಿಕೋತ್ಸವದಂದು ದರ್ಶನ್ ಭೇಟಿಯಾದ ಪತ್ನಿ-ಪುತ್ರ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರ ವಿವಾಹ ವಾರ್ಷಿಕೋತ್ಸವ ಇಂದು. ಈ ಹಿನ್ನೆಲೆಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್ ಮಂಗಳವಾರ ಸಂಜೆ ಜೈಲಿಗೆ ಭೇಟಿ ನೀಡಿ ಕೆಲ ಹೊತ್ತು ಮಾತುಕತೆ ನಡೆಸಿದರು.
ಈ ವೇಳೆ ದರ್ಶನ್ ಭಾವುಕರಾಗಿದ್ದರು ಎಂದು ಹೇಳಲಾಗುತ್ತದೆ. ಜೊತೆಗೆ ಪತಿಗಾಗಿ ಮನೆಯಿಂದ ಹಣ್ಣುಗಳನ್ನೂ ವಿಜಯಲಕ್ಷ್ಮೀ ತಂದಿದ್ದರು. ಹೊರಡುವಾಗ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಧೈರ್ಯ ಹೇಳಿ ಹೊರಟರು ಎನ್ನಲಾಗುತ್ತದೆ.
ಜೈಲಿನ ಕೈಪಿಡಿಯ ನಿಯಮದಂತೆ ಈ ಭೇಟಿಗೆ ಅವಕಾಶ ನೀಡಲಾಗಿತ್ತು. ಮೇ 19ಕ್ಕೆ ದರ್ಶನ್ ಹಾಗೂ ವಿಜಯಲಕ್ಷ್ಮೀ ಮದುವೆಯಾಗಿ 23 ವರ್ಷ. ಹೀಗಾಗಿ ದರ್ಶನ್ ಅವರನ್ನು ಭೇಟಿಯಾಗಲು ಅವಕಾಶ ಕಲ್ಪಿಸುವಂತೆ ವಿಜಯಲಕ್ಷ್ಮೀ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್‍ಗೆ ಪತ್ರ ಬರೆದಿದ್ದರು. ಆ ಪತ್ರವನ್ನು ಜೈಲಿನ ಮುಖ್ಯ ಅಧೀಕ್ಷಕ ಅಂಶುಕುಮಾರ್ ಅವರಿಗೆ ಡಿಜಿಪಿ ಕಳುಹಿಸಿ, ನಿಯಮಾವಳಿಯಂತೆ ಕ್ರಮಕ್ಕೆ ನಿರ್ದೇಶನ ನೀಡಿದ್ದರು. ಜೊತೆಗೆ ದರ್ಶನ್ ಅವರು ಕೂಡಾ ಪತ್ನಿ ಹಾಗೂ ಪುತ್ರನ ಭೇಟಿಗೆ ಕೊಠಡಿ ಒಳಗೆ ಅವಕಾಶ ನೀಡಿ ಎಂದು ಜೈಲಿನ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು.



