`ಲವ್ ಮಾಕ್ಟೇಲ್-3′ ವಿವಾದ : ಕಾನೂನು ಕ್ರಮದ ಎಚ್ಚರಿಕೆ ನೀಡಿದ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್
ಇತ್ತೀಚೆಗೆ ಬಿಡುಗಡೆಯಾಗಿದ್ದ `ಲವ್ ಮಾಕ್ಟೇಲ್-3′ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ನಿರ್ದೇಶಕ ರಾಘವೇಂದ್ರ ಎಂ ನಾಯ್ಕ್ ಸೋಶಿಯಲ್ ಮೀಡಿಯಾದಲ್ಲಿ `ಈ ಚಿತ್ರದ ದ್ವಿತೀಯಾರ್ಧ ನಾನು ಬರೆದ ಕಥಾ ಹಂದರವನ್ನೇ ಹೊಂದಿದೆ’ ಎಂದು ಆರೋಪಿಸಿದ್ದರು. ಈ ಕಥೆಯನ್ನು ಈ ಹಿಂದೆ ಡಾರ್ಲಿಂಗ್ ಕೃಷ್ಣ ಅವರಿಗೆ ಹೇಳಿದ್ದೆ ಎನ್ನುವುದು ಇವರ ಆರೋಪವಾಗಿತ್ತು. ಚಿತ್ರದಲ್ಲಿ ಬರುವ ಕೋರ್ಟ್ ಸನ್ನಿವೇಶಗಳೆಲ್ಲವೂ ತಾನು ಹೇಳಿದ ಕಥೆ ಎಂದು ಇವರು ಆರೋಪಿಸಿದ್ದರು.
ಇದೀಗ ಈ ವಿವಾದದ ಬಗ್ಗೆ ಸ್ಪಷ್ಟನೆ ನೀಡಿರುವ ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್, ಈ ಚಿತ್ರಕ್ಕೆ ಎಷ್ಟು ಶ್ರಮ ಹಾಕಿದ್ದೇವೆ ಎನ್ನುವುದು ನಮಗೆ ಗೊತ್ತು. ಈಗ ಯಾರೋ ಬಂದು ಈ ಚಿತ್ರದ ಕಥೆ ಬಗ್ಗೆ ಹೀಗೆ ಮಾತನಾಡುವುದು ಅದು ಬರಹಗಾರನಿಗೆ ಮಾಡುವ ದೊಡ್ಡ ಅಪಮಾನ. 4 ವರ್ಷದಿಂದ ಈ ಸಿನಿಮಾಕ್ಕಾಗಿ ಕಥೆ ಬರೆದಿದ್ದೇವೆ. ಇದಾದ ಬಳಿಕವೇ ನಾನು ನಿರ್ದೇಶಕ ಆಗಿರೋದು. ನಮ್ಮ ಮೇಲೆ ವೃಥಾ ಆರೋಪ ಮಾಡಲಾಗುತ್ತಿದೆ. ಹೀಗಾಗಿ ನಿರ್ದೇಶಕ ಗುರುದೇಶ್ ಪಾಂಡೆ ಹಾಗೂ ರಾಘವೇಂದ್ರ ಎಂ. ನಾಯ್ಕ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.



