ಪ್ರಿಯಕರನೊಂದಿಗೆ ಬಂದು ಕೇರಳ ಪೊಲೀಸರ ರಕ್ಷಣೆ ಕೇಳಿದ ಕುಂಭಮೇಳ ಬೆಡಗಿ ಮೊನಾಲಿಸಾ!
ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರುತ್ತಿದ್ದ ಬೆಕ್ಕಿನ ಕಣ್ಣಿನ ಬೆಡಗಿ ಮೊನಾಲಿಸಾ ಮತ್ತೆ ಸುದ್ದಿಯಲ್ಲಿದ್ದಾರೆ. ಕುಂಭಮೇಳದ ಬಳಿಕ ವೈರಲ್ ಸ್ಟಾರ್ ಆಗಿದ್ದ ಮೊನಾಲಿಸಾ ಇದೀಗ ಪ್ರಿಯಕರನೊಂದಿಗೆ ಬಂದು ಕೇರಳ ಪೊಲೀಸರ ರಕ್ಷಣೆ ಕೇಳಿದ್ದಾರೆ. ಮೂಲತಃ ಇಂಧೋರ್‌ನ ಮೋನಿ ಭೋಸ್ಲೆ ಅಲಿಯಾಸ್ ಮೊನಾಲಿಸಾ ತಿರುವನಂತಪುರಂನ ಥಂಪನೂರು ಪೊಲೀಸ್ ಠಾಣೆಗೆ ತಮ್ಮ ಪ್ರಿಯಕರ ಫರ್ಮಾನ್ ಖಾನ್ ಜೊತೆಗೆ ಬಂದು ರಕ್ಷಣೆ ಕೇಳಿದ್ದಾರೆ. ತನ್ನ ತಂದೆ ತಮ್ಮ ಪ್ರೀತಿಗೆ ಒಪ್ಪದೆ ಬೇರೊಬ್ಬನೊಂದಿಗೆ ಮದುವೆ ಮಾಡಲು ಒತ್ತಾಯಿಸುತ್ತಿದ್ದಾರೆ ಎಂದು ಇವರು ದೂರಿದ್ದಾರೆ. ತಮ್ಮಿಬ್ಬರಿಗೆ ಕೇರಳ ಸುರಕ್ಷಿತ ತಾಣವೆಂದು ಇಲ್ಲಿ ಆಶ್ರಯ ಕೇಳಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.
ಇಂಧೋರ್‌ನ ಮೊನಾಲಿಸಾ ಹಾಗೂ ಮಹಾರಾಷ್ಟ್ರದ ಫರ್ಮಾನ್ ಖಾನ್ ಒಂದೂವರೆ ವರ್ಷದ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಬಳಿಕ ಪ್ರೀತಿಗೆ ಬಿದ್ದಿದ್ದರು. ಈಗ ತಾನು ಫರ್ಮಾನ್ ಜೊತೆ ವಾಸಿಸಲು ಬಯಸಿದ್ದೇನೆ ಎಂದು ಮೊನಾಲಿಸಾ ಪೊಲೀಸರಿಗೆ ತಿಳಿಸಿದ್ದಾರೆ.
ಪೂವಾರ್‌ನಲ್ಲಿ ಸಿನಿಮಾ ಶೂಟಿಂಗ್‌ಗಾಗಿ ಬಂದಿದ್ದ ಮೊನಾಲಿಸಾ ತನ್ನ ಪ್ರಿಯಕರನೊಂದಿಗೆ ಠಾಣೆಗೆ ಬಂದಿದ್ದರು. ಬಳಿಕ ಪೊಲೀಸರು ಈಕೆಯ ತಂದೆ ಜೈ ಸಿಂಗ್ ಭೋಸ್ಲೆ ಅವರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಿದ್ದರು. ನಂತರ ಈಗ ತನ್ನ ಗೆಳೆಯನೊಂದಿಗೆ ಹೋದರು ಎಂದು ಗೊತ್ತಾಗಿದೆ. ಕುಂಭಮೇಳದಲ್ಲಿ ಹಾರ ಮಾರುತ್ತಿದ್ದ ಮೊನಾಲಿಸಾ ಸದ್ಯ ಮಾಡೆಲಿಂಗ್ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ.



