1998ರಲ್ಲಿ ಹೆತ್ತವರಿಗೆ ಬರೆದಿದ್ದ ಕೈಬರಹದ ಪತ್ರ : ಸವಾಲಿನ ದಿನಗಳನ್ನು ನೆನಪಿಸಿಕೊಂಡ ಧುರಂಧರ್ ನಟ
ನಟ ಗೌರವ್ ಗೆರಾ ಸಿನಿರಂಗದ ಪಯಣದಲ್ಲಿ ಅನುಭವಿಸಿದ್ದ ಸವಾಲುಗಳನ್ನು, ಕಷ್ಟದ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ಮಿಂಚಬೇಕೆಂಬ ಆಸೆಯಲ್ಲಿ ಮುಂಬೈಗೆ ಬಂದಿದ್ದ ಗೌರವ್ ಗೆರಾ 1998 ರಲ್ಲಿ ತಮ್ಮ ಹೆತ್ತವರಿಗೆ ಬರೆದಿದ್ದ ಕೈ ಬರಹದ ಪತ್ರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನಟ ಗೌರವ್ ಗೆರಾ ಪ್ರಸ್ತುತ ಧುರಂಧರ್ ಸರಣಿಯ ಮನೋಜ್ಞ ಅಭಿನಯಕ್ಕಾಗಿ ಮನೆ ಮಾತಾಗಿದ್ದಾರೆ. ಧುರಂಧರ್: ದಿ ರಿವೆಂಜ್ ಚಿತ್ರದಲ್ಲಿ ಇವರು ಮೊಹಮ್ಮದ್ ಆಲಂ ಎಂಬಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಾಯಕನಾಗಿ ನಟಿಸಿದ ಈ ಚಿತ್ರವು ಗೌರವ್ ಗೆರಾ ಅವರಿಗೆ ವ್ಯಾಪಕ ಮೆಚ್ಚುಗೆ, ಜನಪ್ರಿಯತೆಯನ್ನು ತಂದುಕೊಟ್ಟಿದೆ. ಆದರೆ ಹಲವು ವರ್ಷಗಳ ಪರಿಶ್ರಮ ಹಾಗೂ ಹೋರಾಟದ ನಂತರ ಇವರಿಗೆ ಈ ಮನ್ನಣೆ ಈಗ ದೊರೆತಿದೆ.
ಈ ಹೋರಾಟದ ಕ್ಷಣಗಳನ್ನು ನೆನಪಿಸುವ ಸಲುವಾಗಿ ಗೌರವ್ ಗೆರಾ ಅವರು 1998 ರಲ್ಲಿ ತನ್ನ ಹೆತ್ತವರಿಗೆ ಬರೆದ ಕೈಬರಹದ ಪತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ತನ್ನ ನಟನಾ ಕನಸುಗಳನ್ನು ಬೆನ್ನಟ್ಟಲು ದೆಹಲಿಯಿಂದ ಬಂದ ಸ್ವಲ್ಪ ಸಮಯದಲ್ಲಿಯೇ ಇವರು ಈ ಪತ್ರವನ್ನು ಬರೆದಿದ್ದರು.
View this post on Instagram
ಈ ಫೋಟೋವನ್ನು ಹಂಚಿಕೊಂಡ ಗೌರವ್ ಕ್ಯಾಪ್ಶನ್ನಲ್ಲಿ, `ನನ್ನ ಹೆತ್ತವರಿಗೆ ಬರೆದ ಈ ಪತ್ರ – ಡಿಸೆಂಬರ್ 3, 1998.. ನಾನು ಮುಂಬೈಗೆ ಬಂದು ಒಂದು ತಿಂಗಳಿಗಿಂತಲೂ ಕಡಿಮೆ ಸಮಯ.. ಇದು 28 ವರ್ಷಗಳ ಹಿಂದೆ.. ಆಗ ಯಾವುದೇ ಇಮೇಲ್ ಇರಲಿಲ್ಲ, ಪತ್ರ ಬರೆಯಬೇಕಿತ್ತು. ಅದರ ನಂತರ ಬಹಳಷ್ಟು ಟಿವಿ, ಕೆಲವು ಚಲನಚಿತ್ರಗಳು, ಜಾಹೀರಾತುಗಳು, ಸಂಗೀತ ನಾಟಕ, ರೇಡಿಯೋ, ಟಿಕ್ಟಾಕ್, ರೀಲ್ಗಳು… ಇದು ಏರಿಳಿತಗಳೊಂದಿಗೆ ಒಂದು ಸುಂದರ ಪ್ರಯಾಣವಾಗಿತ್ತು.. ದೇವರು ದಯೆ ತೋರಿಸಿದ್ದಾನೆ.. 23 ವರ್ಷದಿಂದ ಆಶಾವಾದವನ್ನು ಉಳಿಸಿಕೊಂಡ ಬದುಕಿಗೆ ಹಾಗೂ ಅಂತ್ಯವಿಲ್ಲದ ಬೆಂಬಲಕ್ಕಾಗಿ ನನ್ನ ತಾಯಿಗೆ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಇವರು ಬರೆದುಕೊಂಡಿದ್ದಾರೆ.
ಈ ಪತ್ರ ಈಗ ನೆಟ್ಟಿಗರ ಗಮನ ಸೆಳೆದಿದೆ. ಜೊತೆಗೆ ಕಮೆಂಟ್ ಮೂಲಕ ಗೌರವ್ ಅವರಿಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ.



