Sandalwood

ಲಂಡನ್‍ನಿಂದ ಚಂದನವನಕ್ಕೆ : ಕನ್ನಡ ಸಿನಿರಂಗದಿಂದಲೇ ವೃತ್ತಿಜೀವನದ ಆರಂಭದ ಹೆಬ್ಬಯಕೆಯಲ್ಲಿ ಕನಸು ಕಂಗಳ ಹುಡುಗಿ

ಬಣ್ಣದ ಲೋಕದ ಸೆಳೆತವೇ ಹಾಗೆ… ಸಿನಿಲೋಕ ಎನ್ನುವುದೊಂದು ಮಾಯಾನಗರಿ… ಇಲ್ಲಿರುವ ಕಾಂತಶಕ್ತಿಯನ್ನು ಬಣ್ಣಿಸಲು ಸಾಧ್ಯವೇ ಇಲ್ಲ… ಅದೆಷ್ಟೋ ಪ್ರತಿಭಾವಂತರಿಗೆ ಆಸರೆಯಾದ, ಬೆಳಗಲು ವೇದಿಕೆಯಾದ, ಕೀರ್ತಿಯ ಪತಾಕೆ ಹಾರಿಸಲು ದಾರಿಯಾದ ಕ್ಷೇತ್ರ ಇದು. ಇಲ್ಲಿ ಕಲೆ ಇದೆ, ಕಲಿಕೆ ಇದೆ, ಜೀವನ ಪ್ರೀತಿ ಇದೆ…

ಹೀಗೆ ಈ ಮನೋಹರ ಲೋಕದ ಸೆಳೆತ ಇಲ್ಲೊಬ್ಬರು ಯುವತಿಯನ್ನು ಲಂಡನ್‍ನಿಂದ ಕರುನಾಡಿಗೆ ಕರೆತಂದಿದೆ… ತನ್ನ ಸಿನಿಲೋಕದ ಪಯಣ ಕನ್ನಡದ ನೆಲದಿಂದಲೇ ಆಗಬೇಕು ಎನ್ನುವ ಹೆಬ್ಬಯಕೆ ಈ ಕನಸು ಕಂಗಳ ಯುವತಿಯದ್ದು…

ಆಕೆಯೇ ಅಮೃತ ಯೆಲಾಜ್ಯೋಸುಲ. ಲಂಡನ್‍ನಲ್ಲಿ ನೆಲೆಸಿರುವ ಈ ಯುವತಿ ಸದ್ಯ ತನ್ನ ಸಿನಿಲೋಕದ ಪಯಣವನ್ನು ಆರಂಭಿಸುವ ಉತ್ಸಾಹದಲ್ಲಿದ್ದಾರೆ. ಕಲೆಯ ಮೇಲೆ ಅಪಾರ ಗೌರವ, ಆಸಕ್ತಿ ಹೊಂದಿರುವ ಅಮೃತಾ ಲಂಡನ್‍ನ ಐಡೆಂಟಿಟಿ ಸ್ಕೂಲ್ ಆಫ್ ಆಕ್ಟಿಂಗ್‍ನಲ್ಲಿ ನಟನಾ ತರಬೇತಿಯನ್ನು ಪಡೆದಿದ್ದಾರೆ. ಜೊತೆಗೆ ಕಾರ್ಯಾಗಾರಗಳು, ಪ್ರದರ್ಶನ ಕಾರ್ಯಗಳು ಸೇರಿದಂತೆ ಕಲಾರಂಗದಲ್ಲಿ ತನ್ನ ಬೆಳವಣಿಗೆಗೆ ಬೇಕಾದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಇವರು ಸಕ್ರಿಯರಾಗಿದ್ದಾರೆ.

ಹೀಗೆ ತನ್ನ ಕ್ಷೇತ್ರದಲ್ಲಿ ಮುಂದೆ ಬರಬೇಕು, ಸಾಧನೆ ಮಾಡಬೇಕೆಂಬ ಕನಸು ಹೊತ್ತಿರುವ ಅಮೃತಾ ಈ ಬಗೆಗೆ ತಮ್ಮನ್ನು ತಾವು ಇನ್ನಷ್ಟು ಗಂಭೀರವಾಗಿ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಕನ್ನಡ ಸಿನಿಮಾ ರಂಗದಿಂದ ತನ್ನ ವೃತ್ತಿಜೀವನ ಆರಂಭವಾಗಬೇಕು ಎನ್ನುವುದು ಇವರ ಕನಸು. ಕಾಂತಾರದಂತಹ ಸಿನಿಮಾಗಳು ಕನ್ನಡದ ಬಗೆಗಿನ ಇವರ ಸೆಳೆತವನ್ನು ಇನ್ನಷ್ಟು ಗಟ್ಟಿಗೊಳಿಸಿತ್ತು. `ಕನ್ನಡದಲ್ಲಿ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಲು ಮತ್ತು ಶಕ್ತಿಯುತ ಕಥೆಗಳು ಮತ್ತು ಪ್ರದರ್ಶನಗಳೊಂದಿಗೆ ಸಾಗುತ್ತಿರುವ ಸ್ಯಾಂಡಲ್‍ವುಡ್‍ನ ಭಾಗವಾಗಲು ನಾನು ಇಷ್ಟಪಡುತ್ತೇನೆ. ಕನ್ನಡ ಚಲನಚಿತ್ರೋದ್ಯಮಕ್ಕೆ ಸೇರಲು, ಅದರಿಂದ ಕಲಿಯಲು ಮತ್ತು ಪ್ರಾಮಾಣಿಕತೆ, ಉತ್ಸಾಹ ಮತ್ತು ಕಠಿಣ ಪರಿಶ್ರಮದಿಂದ ಅದಕ್ಕೆ ಕೊಡುಗೆ ನೀಡಲು ಅವಕಾಶಕ್ಕಾಗಿ ನಾನು ಹಾತೊರೆಯುತ್ತಿದ್ದೇನೆ’ ಎನ್ನುವುದು ಅಮೃತಾ ಮಾತು.

ಸದ್ಯ ಚಿತ್ರ ನಿರ್ದೇಶಕ ಸಾವನ್ ಗುರು ಅವರ ಮುಂದಿನ ಪ್ರಾಜೆಕ್ಟ್‌ನಲ್ಲಿ ಅಮೃತಾ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಕಾಲಿಡುವ ಉತ್ಸಾಹದಲ್ಲಿ ಇವರಿದ್ದಾರೆ. `ಇಲ್ಲಿ ನನ್ನ ಪ್ರಯಾಣವನ್ನು ಪ್ರಾರಂಭಿಸುವುದು ರೋಮಾಂಚಕಾರಿ ಮತ್ತು ಅರ್ಥಪೂರ್ಣವಾಗಿದೆ ಹಾಗೂ ಮತ್ತು ನನಗೆ ಬರುವ ಪ್ರತಿಯೊಂದು ಅವಕಾಶದೊಂದಿಗೆ ಕಲಿಯಲು, ಕಷ್ಟಪಟ್ಟು ಕೆಲಸ ಮಾಡಲು ಹಾಗೂ ಬೆಳವಣಿಗೆ ಕಾಣಲು ನಾನು ಬಯಸಿದ್ದೇನೆ’ ಎನ್ನುತ್ತಾರೆ ಅಮೃತಾ.

Show More

Related Articles

Leave a Reply

Your email address will not be published. Required fields are marked *

Back to top button