ತಮಿಳು ಸಾಹಿತ್ಯ ಆರ್ ವೈರಮುತ್ತು ಅವರಿಗೆ ಒಲಿದ ಜ್ಞಾನಪೀಠ ಪ್ರಶಸ್ತಿ
60ನೇ ಜ್ಞಾನಪೀಠ ಪ್ರಶಸ್ತಿಗೆ ತಮಿಳಿನ ಖ್ಯಾತ ಕವಿ, ಚಿತ್ರ ಸಾಹಿತಿ ಆರ್ ವೈರಮುತ್ತು ಭಾಜನರಾಗಿದ್ದಾರೆ. ತಮಿಳು ಸಾಹಿತ್ಯಕ್ಕೆ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಇವರಿಗೆ 2025 ರ ಸಾಲಿನ ಪ್ರತಿಷ್ಠಿತ ಪ್ರಶಸಿಯನ್ನು ನೀಡಲಾಗುತ್ತಿದೆ ಎಂದು ಭಾರತೀಯ ಜ್ಞಾನಪೀಠ ಪ್ರಶಸ್ತಿ ಸಮಿತಿ ಘೋಷಿಸಿದೆ. ಪಿ.ವಿ.ಅಕಿಲನ್, ಡಿ. ಜಯಕಾಂತನ್ ಬಳಿಕ ಜ್ಞಾನಪೀಠ ಪ್ರಶಸ್ತಿ ಪಡೆದ ಮೂರನೇ ತಮಿಳು ಸಾಹಿತಿ ಇವರಾಗಿದ್ದಾರೆ. ಈ ಪ್ರಶಸ್ತಿಯು 11 ಲಕ್ಷ ರೂಪಾಯಿ ನಗದು ಬಹುಮಾನ, ವಾಗ್ದೇವಿಯ ಕಂಚಿನ ಪ್ರತಿಮೆಯನ್ನು ಒಳಗೊಂಡಿದೆ.
ಖ್ಯಾತ ಬರಹಗಾರ್ತಿ ಪ್ರತಿಭಾ ರೇ ಅಧ್ಯಕ್ಷತೆಯ ಆಯ್ಕೆ ಸಮಿತಿಯಲ್ಲಿ ಮಾಧವ್ ಕೌಶಿಕ್, ದಾಮೋದರ್ ಮೌಜೋ, ಸುರಂಜನ್ ದಾಸ್, ಎ. ಕೃಷ್ಣ ರಾವ್, ಪ್ರಫುಲ್ಲ ಶಿಲೇದಾರ್, ಕೇಸುಭಾಯ್ ದೇಸಾಯಿ, ಜಾನಕಿ ಪ್ರಸಾದ್ ಶರ್ಮಾ, ಕೆ. ಶ್ರೀನಿವಾಸ್ ರಾವ್ ಮತ್ತು ಮಹೇಶ್ವರ್ ಸೇರಿದಂತೆ ಖ್ಯಾತ ಸಾಹಿತಿಗಳು ಮತ್ತು ವಿದ್ವಾಂಸರಿದ್ದರು.
ತಮಿಳಿನ ಹಲವಾರು ಸೂಪರ್ ಹಿಟ್ ಹಾಡುಗಳನ್ನು ರಚಿಸಿದ ಕೀರ್ತಿ ವೈರಮುತ್ತು ಅವರದ್ದು. ಇದರೊಂದಿಗೆ ಇವರು ಕವನ ಸಂಕಲನಗಳು ಮತ್ತು ಕಾದಂಬರಿಗಳು ಸೇರಿದಂತೆ 37 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಸಿನಿಮಾ ಹಾಡುಗಳಿಗಾಗಿ ಇವರು ಏಳು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಗೌರವಗಳನ್ನು ಪಡೆದಿದ್ದಾರೆ. 2003 ರಲ್ಲಿ ಇವರಿಗೆ ಪದ್ಮಶ್ರೀ ಮತ್ತು 2014 ರಲ್ಲಿ ಪದ್ಮಭೂಷಣ ಗೌರವವೂ ಸಂದಿದೆ. ಜೊತೆಗೆ ತಮಿಳುನಾಡು ಸರ್ಕಾರವು ಅವರಿಗೆ ಕಲೈಮಾಮಣಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.



