News Roundup

ಅಮ್ಟಾಡಿ ಗ್ರಾಮದ ಏರ್ಕುಲದ ಅಕ್ರಮ ಹಂದಿ ಸಾಕಾಣಿಕೆ ಕೇಂದ್ರ ತೆರವಿಗೆ ಗ್ರಾಮಸ್ಥರ ಆಗ್ರಹ

ವರದಿ : ಯಾದವ ಕುಲಾಲ್ ಅಗ್ರಬೈಲ್
ಬಿ.ಸಿ.ರೋಡ್ : ಅಮ್ಟಾಡಿ ಗ್ರಾಮದ ಏರ್ಕುಲ ಪ್ರದೇಶದಲ್ಲಿ ಪರವಾನಿಗೆ ಇಲ್ಲದೆ ನಡೆಯುತ್ತಿರುವ ಹಂದಿ ಸಾಕಾಣಿಕೆ ಕೇಂದ್ರದ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಅಮ್ಟಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ಥಳಕ್ಕೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಗ್ರಾಮಸ್ಥರು ಮಾತನಾಡಿ, ಹಂದಿ ಸಾಕಾಣಿಕೆ ಕೇಂದ್ರದಿಂದ ನಿರಂತರ ಗಬ್ಬು ವಾಸನೆ ಹರಡುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಮಕ್ಕಳ ಹಾಗೂ ಹಿರಿಯ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ದೂರಿದರು. ಗಬ್ಬು ವಾಸನೆಯ ಕಾರಣ ಈ ಭಾಗದಲ್ಲಿ ಶುಭ ಸಮಾರಂಭಗಳನ್ನು ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ತೆರೆದ ವಾಹನಗಳಲ್ಲಿ ತ್ಯಾಜ್ಯಗಳನ್ನು ಹಂದಿ ಸಾಕಾಣಿಕೆ ಕೇಂದ್ರಕ್ಕೆ ಸಾಗಿಸಲಾಗುತ್ತಿದ್ದು, ಪರಿಸರ ಮತ್ತಷ್ಟು ಮಾಲಿನ್ಯಗೊಳ್ಳುತ್ತಿದೆ. ಅಲ್ಲದೆ ಸಮೀಪದಲ್ಲೇ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಾನಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ಪರವಾನಿಗೆ ಇಲ್ಲದೆ ಕಾನೂನುಬಾಹಿರವಾಗಿ ನಡೆಯುತ್ತಿರುವ ಈ ಹಂದಿ ಸಾಕಾಣಿಕೆ ಕೇಂದ್ರವನ್ನು ಕೂಡಲೇ ತೆರವುಗೊಳಿಸಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮಸ್ಥರ ಅಹವಾಲುಗಳನ್ನು ದಾಖಲಿಸಿಕೊಂಡಿದ್ದು, ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Show More

Related Articles

Leave a Reply

Your email address will not be published. Required fields are marked *

Back to top button