News Roundup

ಕುಲಾಲ ಕ್ರೀಡೋತ್ಸವದ ಸಂಭ್ರಮ : `ಆರೋಗ್ಯಕ್ಕೆ ಕ್ರೀಡೆ ಅಗತ್ಯ’ : ನಾರಾಯಣ ಮೂಲ್ಯ

ಬಿ.ಸಿ.ರೋಡ್ : ಮೊಬೈಲ್, ವಾಟ್ಸಪ್ ಗೀಳಿನ ಇಂದಿನ ಬದುಕಿನಲ್ಲಿ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಸೇರಿಸಿ ಕ್ರೀಡಾ ಸಂಭ್ರಮ ಮೂಡಿಸಿದ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ “ಕುಲಾಲ ಕ್ರೀಡೋತ್ಸವ” ಭಾನುವಾರ ಪೊಸಳ್ಳಿ ಕುಲಾಲ ಸಮುದಾಯ ಭವನದ ಬಳಿ ಉತ್ಸಾಹಭರಿತವಾಗಿ ನಡೆಯಿತು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಚ್‍ಪಿಸಿಎಲ್ ಉದ್ಯೋಗಿ ನಾರಾಯಣ ಮೂಲ್ಯ, “ಇಂದಿನ ಕಾಲದಲ್ಲಿ ಕ್ರೀಡಾಪಟುಗಳಿಗೆ ಅಪಾರ ಅವಕಾಶಗಳಿವೆ. ಪ್ರತಿಯೊಬ್ಬರೂ ದಿನದಲ್ಲಿ ಕನಿಷ್ಠ ಅರ್ಧ ಗಂಟೆಯಾದರೂ ವಾಕಿಂಗ್ ಹಾಗೂ ವ್ಯಾಯಾಮಕ್ಕೆ ಮೀಸಲಿಡಬೇಕು. ಕ್ರೀಡೆಯಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಚೈತನ್ಯವೂ ವೃದ್ಧಿಸುತ್ತದೆ” ಎಂದು ಹೇಳಿದರು.

“ಆರೋಗ್ಯವೇ ಭಾಗ್ಯ, ಕ್ರೀಡೆಯೇ ಜೀವನ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಬಾಲ್ಯದಿಂದಲೇ ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿದರೆ ಉತ್ತಮ ಭವಿಷ್ಯ ರೂಪುಗೊಳ್ಳುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು.

ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಉದ್ಯಮಿ ಶೋಭಾಜಯಪ್ರಕಾಶ್, “ಇಂದಿನ ಯುವಜನತೆ ಮೊಬೈಲ್ ಜಗತ್ತಿನಲ್ಲಿ ಮುಳುಗುತ್ತಿರುವ ಸಂದರ್ಭದಲ್ಲಿ ಇಂತಹ ಕ್ರೀಡೋತ್ಸವಗಳು ಸಮಾಜಕ್ಕೆ ಹೊಸ ಚೈತನ್ಯ ನೀಡುತ್ತವೆ. ಕ್ರೀಡೆ ಕೇವಲ ಆಟವಲ್ಲ; ಅದು ವ್ಯಕ್ತಿತ್ವ ವಿಕಸನ, ಶಿಸ್ತು ಮತ್ತು ಮಾನಸಿಕ ಆರೋಗ್ಯ ಬೆಳೆಸುವ ಶಕ್ತಿ. ಸಂಘಟನೆಗಳು ಕ್ರೀಡಾಪಟುಗಳ ಬೆನ್ನಿಗೆ ನಿಂತರೆ ಗ್ರಾಮೀಣ ಭಾಗದಿಂದಲೂ ಅನೇಕ ಪ್ರತಿಭೆಗಳು ಹೊರಹೊಮ್ಮಲಿವೆ” ಎಂದು ಅವರು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ. ರಮೇಶ್ ಸಾಲಿಯಾನ್ ಸಂಚಯಗಿರಿ ವಹಿಸಿದ್ದರು. ವೇದಿಕೆಯಲ್ಲಿ ರಕ್ತೇಶ್ವರಿ ದೇವಸ್ಥಾನದ ಅಧ್ಯಕ್ಷ ಬಿ. ಮೋಹನ್, ಮೇಲಂತಸ್ತಿನ ಕಟ್ಟಡ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ನಾವೂರ, ಸೇವಾದಳ ದಳಪತಿ ಜಯಂತ್ ಕುಲಾಲ್ ಅಗ್ರಬೈಲು ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಆಶಾಗಿರಿಧರ್ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಯಾದವ ಅಗ್ರಬೈಲು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ಕುಮಾರ್ ರಾಯಿ ಕಾರ್ಯಕ್ರಮ ನಿರೂಪಿಸಿದರು. ಕ್ರೀಡೋತ್ಸವದಲ್ಲಿ ಬಲೂನ್ ಗೇಮ್ಸ್, ಒಂಟಿಕಾಲಿನ ಹಗ್ಗಜಗ್ಗಾಟ, ಮುಂಡಾಸ್ ಕಟ್ಟುವ ಸ್ಪರ್ಧೆ, ತೆಂಗಿನಗರಿ ಮೊಡೆಯುವುದು, ಬಾಟಲಿಗೆ ನೀರು ತುಂಬಿಸುವುದು, ಕಣ್ಣಾಮುಚ್ಚಾಲೆ, ಮಿನಿ ಕ್ರಿಕೆಟ್ ಹಾಗೂ ಕ್ರೇಜಿ ಗೇಮ್ಸ್ ಸ್ಪರ್ಧೆಗಳು ಗಮನಸೆಳೆದವು. ಪುಟಾಣಿಗಳಿಂದ ಹಿರಿಯರ ತನಕ ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಕ್ರೀಡೋತ್ಸವಕ್ಕೆ ಮೆರುಗು ತಂದರು.

Show More

Related Articles

Leave a Reply

Your email address will not be published. Required fields are marked *

Back to top button