ಸಂಗೀತ ಮಾಂತ್ರಿಕ ಇಳಯರಾಜರ ಕ್ಷಮೆಯಾಚಿಸಿದ `ಕರುಪ್ಪು’ ಚಿತ್ರತಂಡ: ಏನಿದು ವಿವಾದ?
ಸೂರ್ಯ, ತ್ರಿಷಾ ನಟನೆಯ `ಕರುಪ್ಪು’ ಚಿತ್ರ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಆದರೆ ಈ ಚಿತ್ರದ ಒಂದು ಸಂಭಾಷಣೆ ಸಂಗೀತ ನಿರ್ದೇಶಕ ಇಳಯರಾಜ ಹಾಗೂ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಈ ಬಗ್ಗೆ ಚಿತ್ರತಂಡ ಈಗ ಕ್ಷಮೆ ಕೇಳಿದ್ದು, ಇಳಯರಾಜ ಅವರನ್ನು ನೋಯಿಸುವ ಉದ್ದೇಶ ಇರಲಿಲ್ಲ. ಕೇವಲ ಮನರಂಜನೆ ದೃಷ್ಟಿಯಿಂದ ಅವರ ಹೆಸರನ್ನು ಈ ಚಿತ್ರದಲ್ಲಿ ಬಳಕೆ ಮಾಡಿದ್ದೇವೆ. ಇದರಿಂದ ಅವರಿಗೆ ನೋವಾಗಿದ್ದರೆ ಈ ಮೂಲಕ ಕ್ಷಮೆಯಾಚಿಸುತ್ತೇವೆ. ಹೀಗಾಗಿ ಅವರಿಗೆ ಸಂಬಂಧಿಸಿದ ದೃಶ್ಯವನ್ನು ತೆಗೆಯುವುದಾಗಿ ಚಿತ್ರ ನಿರ್ಮಾಣ ಸಂಸ್ಥೆ ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹೇಳಿಕೊಂಡಿದೆ.
‘ಭಾರತೀಯ ಚಿತ್ರರಂಗಕ್ಕೆ ಸಂಗೀತ ಮಾಂತ್ರಿಕ ಇಳಯರಾಜ ಅವರ ಕೊಡುಗೆ ಅಪಾರ . ಎಲ್ಲಾ ಕಾಲದ ಜನರಿಗೂ ಇವರ ಹಾಡು ಸ್ಪೂರ್ತಿಯಾಗಿದೆ. ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಮೊದಲು ನಾವು ಅವರಿಗೆ ಪ್ರಶಂಸೆಯನ್ನು ವ್ಯಕ್ತಪಡಿಸುತ್ತೇವೆ’ ಎಂದು ಈ ಪೋಸ್ಟ್‌ನಲ್ಲಿ ನಿರ್ಮಾಣ ಸಂಸ್ಥೆ ತಿಳಿಸಿದೆ.
ಈ ಚಿತ್ರದ ಸಂಭಾಷಣೆಯೊಂದರಲ್ಲಿ ಆರ್‌ಜೆ ಬಾಲಾಜಿ ನಿರ್ವಹಿಸಿದ ಪಾತ್ರವು, ‘ಎನ್ನಾ… ಇದುಕ್ಕುಂ ಇಳಯರಾಜ ಕಿಟ್ಟಾ ಪರ್ಮಿಷನ್ ವಂಗನುಮಾ?’ (ಏನು… ಇದಕ್ಕೂ ನಾವು ಇಳಯರಾಜ ಅವರಿಂದ ಅನುಮತಿ ಪಡೆಯಬೇಕೇ?) ಎಂದು ಕೇಳುತ್ತಿದೆ . ಈ ಸಾಲು ಅವರ ಸಂಗೀತ ರಾಯಲ್ಟಿ ಮತ್ತು ಹಕ್ಕುಸ್ವಾಮ್ಯ ಅನುಮತಿಗಳ ಕುರಿತು ನಡೆಯುತ್ತಿರುವ ನಿಜ ಜೀವನದ ಚರ್ಚೆಗಳಿಗೆ ನೇರ ಉಲ್ಲೇಖದಂತಿರುವ ಕಾರಣ ಇದು ವಿವಾದಕ್ಕೆ ಕಾರಣವಾಗಿದೆ.
ಆರ್‌ಜೆ ಬಾಲಾಜಿ ಬರೆದು ನಿರ್ದೇಶಿಸಿರುವ ಕರುಪ್ಪು ಚಿತ್ರದಲ್ಲಿ ಸೂರ್ಯ ಮತ್ತು ತ್ರಿಶಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸಾಯಿ ಅಭ್ಯಂಕರ್ ಸಂಗೀತ ನೀಡಿದ್ದಾರೆ.



