ಬದರಿ- ಕೇದಾರ ದರ್ಶನ : ಸಾರಾ ಅಲಿ ಖಾನ್ ಸಲ್ಲಿಸಬೇಕು ಅಫಿಡವಿಟ್: ಕಾರಣವೇನು?
ಬಾಲಿವುಡ್ ನಟಿ ಸಾರಾ ಅಲಿ ಖಾನ್ ಆಗಾಗ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುತ್ತಾರೆ. ಬದರಿನಾಥ ಹಾಗೂ ಕೇದಾರನಾಥ ದೇಗುಲದಲ್ಲೂ ಇವರು ಪೂಜೆ ಸಲ್ಲಿಸಿದ್ದರು. ಆದರೆ ಈಗ ಈ ದೇಗುಲಗಳಲ್ಲಿ ಸಾರಾ ಪ್ರಾರ್ಥನೆ ಸಲ್ಲಿಸಲು ಅಫಿಡವಿಟ್ ಸಲ್ಲಿಸಬೇಕಾಗಬಹುದು. ಯಾಕೆಂದರೆ ಬದರಿ- ಕೇದಾರನಾಥ ದೇವಾಲಯ ಸಮಿತಿ ಹೊರಡಿಸಿದ ಹೊಸ ನಿರ್ದೇಶನದ ಪ್ರಕಾರ ಸನಾತನ ಧರ್ಮದಲ್ಲಿ ನಂಬಿಕೆ ಹೊಂದಿರುವವರು ಮಾತ್ರ ಪೂಜೆ ಸಲ್ಲಿಸಬಹುದಾಗಿದೆ. ಹೀಗಾಗಿ ಹಿಂದೂಯೇತರರು ದೇಗುಲ ಭೇಟಿಗೆ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ.
View this post on Instagram
ಮಂಗಳವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಹೇಮಂತ್ ದ್ವಿವೇದಿ, ಕೇದಾರನಾಥ ಮತ್ತು ಬದರಿನಾಥ ದೇವಾಲಯದಲ್ಲಿ ದರ್ಶನ ಪಡೆಯಲು ಬಯಸುವ ಎಲ್ಲಾ ಹಿಂದೂಯೇತರ ಸಂದರ್ಶಕರು ತಾವು ಹಿಂದೂ ಧರ್ಮದಲ್ಲಿ ತಮ್ಮ ನಂಬಿಕೆಯನ್ನು ದೃಢೀಕರಿಸುವ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಪ್ರಾರ್ಥನೆಗಾಗಿ ಎರಡೂ ದೇವಾಲಯಗಳಿಗೆ ಭೇಟಿ ನೀಡುವ ಯಾವುದೇ ಹಿಂದೂಯೇತರ ಭಕ್ತರಿಗೆ ಈ ನಿಯಮವು ಅನ್ವಯವಾಗುತ್ತದೆ.
View this post on Instagram
ತಮ್ಮ ಮೊದಲ ಸಿನಿಮಾ ಕೇದಾರನಾಥವನ್ನು ಚಿತ್ರೀಕರಿಸಿದ ಬಳಿಕ ಸಾರಾ ಅಲಿ ಖಾನ್ ಅವರು ನಿಯಮಿತವಾಗಿ ಈ ದೇಗುಲಕ್ಕೆ ಭೇಟಿ ನೀಡುತ್ತಾರೆ. ದೇಗುಲಗಳಿಗೆ ಭೇಟಿ ನೀಡುವ ಫೋಟೋಗಳನ್ನೂ ಆಗಾಗ ಇವರು ಹಂಚಿಕೊಳ್ಳುತ್ತಾ ಇರುತ್ತಾರೆ.
ಸಾರಾ ಅಲಿ ಖಾನ್ ಬಾಲಿವುಡ್‌ನ ಖ್ಯಾತ ನಟ ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಪುತ್ರಿ. ಸದ್ಯ ಈ ದಂಪತಿ ವಿಚ್ಚೇದನ ಪಡೆದಿದ್ದಾರೆ. ಸೈಫ್ ಅಲಿ ಖಾನ್ ಕರಿನಾ ಕಪೂರ್ ಅವರನ್ನು ವರಿಸಿದ್ದಾರೆ.



