News Roundup

ಮೊಡಂಕಾಪು ರೈಲ್ವೇ ಸೇತುವೆ ಆಧುನೀಕರಣ ಯಾವಾಗ? : `ಅಪಘಾತದ ಸ್ಪಾಟ್’ ಎಂಬ ಹಣೆಪಟ್ಟಿಯಿಂದ ಸಿಗುವುದೇ ಮುಕ್ತಿ?

ವರದಿ : ಯಾದವ ಕುಲಾಲ್ ಅಗ್ರಬೈಲು
ಬಿ.ಸಿ.ರೋಡ್ : ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದಲ್ಲಿ ಮೊಡಂಕಾಪು ಬಳಿ ಇರುವ ರೈಲ್ವೇ ಮೇಲ್ಸೇತುವೆ ಕಾಯಕಲ್ಪಕ್ಕೆ ಹಾತೊರೆಯುತ್ತಿದೆ. ಇತಿಹಾಸ ಪ್ರಸಿದ್ಧ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ದಾರಿಯಾಗಿದ್ದರೂ, ಈ ಸೇತುವೆ ಇಂದಿಗೂ ಹಳೆಯ ವಿನ್ಯಾಸದಲ್ಲೇ ಉಳಿದಿದೆ. ಜೊತೆಗೆ ಇದು ಆಕ್ಸಿಡೆಂಟ್ ಸ್ಪಾಟ್ ಆಗಿಯೂ ಪರಿವರ್ತನೆಗೊಂಡಿದೆ.

ಈ ರೈಲ್ವೇ ಸೇತುವೆಯ ಅಡಿಭಾಗದಲ್ಲಿ ಕಲ್ಲಿನ ಬೃಹತ್ ಪಿಲ್ಲರ್‍ನ ನಿರ್ಮಿಸಿ ಎರಡು ಇಬ್ಬಾಗ ಮಾರ್ಗಗಳಾಗಿ ವಿಭಜನೆಯಾಗಿದೆ. ಇದರಿಂದ ಒಂದೇ ಸಮಯದಲ್ಲಿ ಎದುರುಮುಖವಾಗಿ ವಾಹನಗಳು ಬರುವಾಗ, ಚಾಲಕರು ಕ್ಷಣಕ್ಷಣಕ್ಕೂ ಜೀವ ಪಣಕ್ಕಿಟ್ಟು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಳಲಿ, ಕಟೀಲು, ಬಜಪೆ ರೈಲ್ವೇ ನಿಲ್ದಾಣ, ಎಂಆರ್‌ಪಿಎಲ್ ಸೇರಿದಂತೆ ಪ್ರಮುಖ ಸ್ಥಳಗಳಿಗೆ ತೆರಳಲು ಈ ದಾರಿಯೇ ಪ್ರಮುಖ ಸಂಪರ್ಕ ಮಾರ್ಗ. ದಿನವೂ ಸಾವಿರಾರು ವಾಹನಗಳು ಈ ಸೇತುವೆಯಡಿ ಹಾದು ಹೋಗುತ್ತವೆ. ಆದರೆ ಸುರಕ್ಷತೆಯ ದೃಷ್ಟಿಯಿಂದ ಅಗತ್ಯವಾದ ಮೂಲಭೂತ ವ್ಯವಸ್ಥೆಗಳ ಕೊರತೆ ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಭಾರೀ ವಾಹನಗಳ ಸಂಚಾರ ನಿಯಂತ್ರಣಕ್ಕಾಗಿ ಸೇತುವೆಯ ಅಡಿಭಾಗದಲ್ಲಿ ಅಳವಡಿಸಿರುವ ಕಬ್ಬಿಣದ ಕಮಾನುಗಳು ಇದೀಗ ಅಪಾಯದ ಸಂಕೇತವಾಗಿವೆ. ಯಾವುದೇ ಸೂಚನಾ ಫಲಕಗಳು, ಪ್ರತಿಬಿಂಬಿಸುವ ಬಣ್ಣಗಳಿಲ್ಲದೆ ರಾತ್ರಿ ವೇಳೆ ಅಥವಾ ಮಳೆಗಾಲದಲ್ಲಿ ಚಾಲಕರಿಗೆ ಅವು ಕಾಣಿಸಿಕೊಳ್ಳುವುದೇ ಕಷ್ಟ. ಪರಿಣಾಮವಾಗಿ ಕಳೆದ ಕೆಲ ತಿಂಗಳಿನಿಂದ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿದ್ದು, ಕೆಲವೊಮ್ಮೆ ಜೀವಹಾನಿಗೂ ಕಾರಣವಾಗುತ್ತಿದೆ.

ಹೀಗಾಗಿ ಈ ಸಮಸ್ಯೆಗೆ ಅಭಿವೃದ್ಧಿ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಒತ್ತಾಯ ಸ್ಥಳೀಯರದ್ದು. ಮಧ್ಯದಲ್ಲಿರುವ ಕಾಂಕ್ರೀಟ್ ಪಿಲ್ಲರ್ ತೆರವುಗೊಳಿಸಿ, ರಸ್ತೆ ವಿಸ್ತರಣೆ ಮಾಡಿದರೆ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಈ ಬಗ್ಗೆ ಅಧಿಕಾರಿಗಳು, ಸಂಬಂಧಪಟ್ಟವರು ಕಾರ್ಯಪ್ರವೃತ್ತರಾಗಬೇಕಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button