ಶತಮಾನೋತ್ಸವದ ಹೊಸ್ತಿಲಲ್ಲಿರುವ ಅಜ್ಜಿಬೆಟ್ಟು ಶಾಲೆ ; ಕುಸಿದ ಕಂಪೌಂಡಿನಿಂದ ಮಕ್ಕಳ ಸುರಕ್ಷತೆಗೆ ಧಕ್ಕೆ

ವರದಿ : ಯಾದವ ಕುಲಾಲ್ ಅಗ್ರಬೈಲು
ಬಿ.ಸಿ.ರೋಡ್: ಒಂದು ಕಡೆ ಶೆಕ್ಷಣಿಕ ಗುಣಮಟ್ಟ, ತಂತ್ರಜ್ಞಾನ ಆಧಾರಿತ ಬೋಧನೆ ಹಾಗೂ ವಿದ್ಯಾರ್ಥಿ ಸ್ನೇಹಿ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿರುವ ಶಾಲೆ. ಮತ್ತೊಂದು ಕಡೆ ಕುಸಿದು ಬಿದ್ದ ಕಂಪೌಂಡು, ಶಿಥಿಲಗೊಂಡ ಶೌಚಾಲಯ ಹಾಗೂ ಭದ್ರತೆಯ ಕೊರತೆಯಿಂದ ಆತಂಕದಲ್ಲಿರುವ ವಿದ್ಯಾರ್ಥಿಗಳು. ಇದು ಬಂಟ್ವಾಳ ತಾಲೂಕಿನ ಮೂಡ ಗ್ರಾಮದ ಅಜ್ಜಿಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಂದಿನ ವಾಸ್ತವ ಚಿತ್ರಣ.
ಶತಮಾನೋತ್ಸವದ ಸಂಭ್ರಮವನ್ನು ಎದುರು ನೋಡುತ್ತಿರುವ ಈ ಶಾಲೆಯ ಕಂಪೌಂಡು ಗೋಡೆ ಕಳೆದ ವರ್ಷ ಭಾರೀ ಮಳೆಗೆ ಕುಸಿದು ಬಿದ್ದಿತ್ತು. ಅಪಾಯಕಾರಿಯಾಗಿದ್ದ ಭಾಗವನ್ನು ತೆರವುಗೊಳಿಸಿದರೂ, ಒಂದು ವರ್ಷ ಕಳೆದರೂ ಹೊಸ ಕಂಪೌಂಡು ನಿರ್ಮಾಣವಾಗಿಲ್ಲ. ಪರಿಣಾಮ ಶಾಲಾ ಆವರಣ ಸಂಪೂರ್ಣ ತೆರೆದ ಪ್ರದೇಶವಾಗಿ ಮಾರ್ಪಟ್ಟಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಪ್ರಶ್ನಾರ್ಥಕವಾಗಿದೆ. ಶಾಲೆಯ ಮುಖ್ಯ ಪ್ರವೇಶ ದ್ವಾರದಲ್ಲಿ ಗೇಟ್ ಮಾತ್ರ ಉಳಿದಿದ್ದು, ಅದರ ಎರಡೂ ಬದಿಗಳಲ್ಲಿ ರಕ್ಷಣಾ ಗೋಡೆ ಇಲ್ಲದಿರುವುದು ಶಾಲಾ ಆವರಣಕ್ಕೆ ಯಾರು ಬೇಕಾದರೂ ಸುಲಭವಾಗಿ ಪ್ರವೇಶಿಸಲು ಅವಕಾಶ ಕಲ್ಪಿಸಿದೆ. ಸಿಸಿ ಕ್ಯಾಮೆರಾ ವ್ಯವಸ್ಥೆಯೂ ಇಲ್ಲದ ಕಾರಣ ಶಾಲೆಯ ಭದ್ರತೆ ಮತ್ತಷ್ಟು ಕುಂಠಿತಗೊಂಡಿದೆ.
ಪುಟಾಣಿಗಳ ಪಾಲಿಗೆ ಅಪಾಯದ ದಾರಿ
ಕುಸಿದಿರುವ ಕಂಪೌಂಡಿನ ಸಮೀಪವೇ ಶಾಲೆಯ ಶೌಚಾಲಯವಿದೆ. ಇನ್ನೂ ಕೆಲವು ಕಲ್ಲುಗಳು ನೇತಾಡುವ ಸ್ಥಿತಿಯಲ್ಲಿರುವುದರಿಂದ ಪುಟ್ಟ ಮಕ್ಕಳು ಶೌಚಾಲಯಕ್ಕೆ ತೆರಳುವಾಗ ಶಿಕ್ಷಕರು ಜೊತೆಯಾಗಿಯೇ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಯಿರುವ ಕಾರಣ ಶಿಕ್ಷಕರು ಹಾಗೂ ಪೆÇೀಷಕರಲ್ಲಿ ಆತಂಕ ಮನೆ ಮಾಡಿದೆ.
ದುರಸ್ತಿಗಾಗಿ ಕಾಯುತ್ತಿರುವ ಶೌಚಾಲಯ
ಶಾಲಾ ಆವರಣದಿಂದ ಸ್ವಲ್ಪ ದೂರದಲ್ಲಿರುವ ಶೌಚಾಲಯವೂ ಹಾಳಾಗಿದ್ದು, ಮಳೆಗಾಲದಲ್ಲಿ ಮಕ್ಕಳು ಅಲ್ಲಿ ತೆರಳಲು ಸಾಕಷ್ಟು ತೊಂದರೆ ಅನುಭಸುತ್ತಿದ್ದಾರೆ. ವಿಶೇಷವಾಗಿ ಎಲ್ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಶಾಲಾ ಕಟ್ಟಡದ ಸಮೀಪದಲ್ಲೇ ಪ್ರತ್ಯೇಕ ಶೌಚಾಲಯ ನಿರ್ಮಾಣದ ಅಗತ್ಯವಿದೆ. ಅಲ್ಲದೆ ಬಿಸಿಯೂಟ ಕೊಠಡಿಯ ಕೆಳಭಾಗವೂ ಹಾನಿಗೊಳಗಾಗಿದ್ದು, ಸುರಕ್ಷತಾ ದೃಷ್ಟಿಯಿಂದ ತಕ್ಷಣದ ಕ್ರಮ ಅಗತ್ಯವಾಗಿದೆ.
ಮೂಲಸೌಕರ್ಯ ಸಮಸ್ಯೆಗಳ ನಡುವೆಯೂ ಶಾಲೆ ಶೆಕ್ಷಣಿಕ ಕ್ಷೇತ್ರದಲ್ಲಿ ಮಾದರಿಯಾಗುವತ್ತ ಹೆಜ್ಜೆ ಇಡುತ್ತಿದೆ. ಶಾಲಾಭಿವೃದ್ಧಿ ಸಮಿತಿಯ ಪ್ರಯತ್ನದಿಂದ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಲಾಗಿದ್ದು, ಇದರಿಂದ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗಿದೆ. ದಾನಿಗಳ ಸಹಕಾರದಿಂದ ಕಂಪ್ಯೂಟರ್ಗಳನ್ನು ಒದಗಿಸಲಾಗಿದ್ದು, ಈವರೆಗೆ ಹಿರಿಯ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ನೀಡಲಾಗುತ್ತಿದ್ದ ಕಂಪ್ಯೂಟರ್ ಶಿಕ್ಷಣವನ್ನು ಈ ಶೆಕ್ಷಣಿಕ ವರ್ಷದಿಂದ ಒಂದನೇ ತರಗತಿಯಿಂದಲೇ ಆರಂಭಿಸಲು ಯೋಜಿಸಲಾಗಿದೆ. ಪೆÇ್ರಜೆಕ್ಟರ್ ಮೂಲಕ ದೃಶ್ಯಾಧರಿತ ಬೋಧನೆ ನಡೆಸಲಾಗುತ್ತಿದ್ದು, ಮಕ್ಕಳ ಕಲಿಕೆಯಲ್ಲಿ ಹೊಸ ಆಸಕ್ತಿ ಮೂಡಿಸಿದೆ.
ಇಲಾಖೆಯ ನಿರ್ಲಕ್ಷ್ಯ
ಶಾಲಾ ಕಂಪೌಂಡಿನ ದುಸ್ಥಿತಿ ಕುರಿತು ಕಳೆದ ವರ್ಷವೇ ಶಿಕ್ಷಣ ಇಲಾಖೆಯ ಗಮನಕ್ಕೆ ತರಲಾಗಿದ್ದರೂ ಇದುವರೆಗೆ ಯಾವುದೇ ದುರಸ್ತಿ ಕಾಮಗಾರಿ ಆರಂಭವಾಗಿಲ್ಲ. ಇದೀಗ ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಉಳಿದಿರುವ ಗೋಡೆಯೂ ಕುಸಿಯುವ ಭೀತಿ ಎದುರಾಗಿದ್ದು, ತುರ್ತು ಕ್ರಮದ ಅಗತ್ಯ ಇದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಶ್ರಮಿಸುತ್ತಿರುವ ಶಾಲೆಗೆ ಮೂಲಭೂತ ಸೌಕರ್ಯಗಳ ಕೊರತೆ ಅಡ್ಡಿಯಾಗಬಾರದು. ಮಕ್ಕಳ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಕಂಪೌಂಡು ಪುನರ್ನಿರ್ಮಾಣ, ಶೌಚಾಲಯ ದುರಸ್ತಿ ಹಾಗೂ ಭದ್ರತಾ ವ್ಯವಸ್ಥೆ ಕಲ್ಪಿಸುವ ಕೆಲಸವನ್ನು ಸಂಬಂಭಪಟ್ಟ ಇಲಾಖೆ ಶೀಘ್ರ ಕೈಗೊಳ್ಳಬೇಕಿದೆ.
***
ಶಾಲೆಯ ಆವರಣ ಗೋಡೆ ಕಳೆದ ವರ್ಷವೇ ಕುಸಿದು ಬಿದ್ದಿದ್ದು, ಈ ಕುರಿತು ಹಲವು ಬಾರಿ ಶಿಕ್ಷಣ ಇಲಾಖೆಯ ಗಮನಕ್ಕೆ ತರಲಾಗಿದೆ. ಆದರೂ ಇದುವರೆಗೆ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ. ಕುಸಿದಿರುವ ಕಂಪೌಂಡಿನ ಪಕ್ಕದಲ್ಲೇ ವಿದ್ಯಾರ್ಥಿಗಳು ಬಳಸುವ ಶೌಚಾಲಯವಿರುವುದರಿಂದ ಪ್ರತಿದಿನವೂ ಆತಂಕದ ನಡುವೆಯೇ ಮಕ್ಕಳ ಓಡಾಟ ನಡೆಯುತ್ತಿದೆ. ವಿಶೇಷವಾಗಿ ಮಳೆಗಾಲದಲ್ಲಿ ಉಳಿದಿರುವ ಗೋಡೆಯ ಭಾಗವೂ ಕುಸಿಯುವ ಭೀತಿ ಎದುರಾಗಿದ್ದು, ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತುರ್ತು ದುರಸ್ತಿ ಕಾಮಗಾರಿ ಕೈಗೊಳ್ಳಬೇಕು. ಮಕ್ಕಳ ಸುರಕ್ಷತೆಗಿಂತ ದೊಡ್ಡ ಆದ್ಯತೆ ಮತ್ತೊಂದಿಲ್ಲ.
– ಲಕ್ಷೀ, ಮುಖ್ಯೋಪಾಧ್ಯಯರು, ಸ.ಹಿ.ಪ್ರಾ. ಶಾಲೆ, ಅಜ್ಜಿಬೆಟ್ಟು
****
ನಮ್ಮೂರಿನ ಸರಕಾರಿ ಶಾಲೆ ಎಂಬ ಅಭಿಮಾನದಿಂದಲೇ ನಾವು ಮಕ್ಕಳನ್ನು ಅಜ್ಜಿಬೆಟ್ಟು ಶಾಲೆಗೆ ಕಳುಹಿಸುತ್ತಿದ್ದೇವೆ. ಶಾಲೆಯಲ್ಲಿ ಉತ್ತಮ ಶಿಕ್ಷಣದ ಜೊತೆಗೆ ವಿವಿಧ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತಿದೆ. ಆದರೆ ಶಾಲೆಯ ಭದ್ರತೆಯ ದೃಷ್ಟಿಯಿಂದ ನೋಡಿದರೆ ಪರಿಸ್ಥಿತಿ ಆತಂಕಕಾರಿಯಾಗಿದೆ. ಶಾಲೆಯ ಹಿಂಭಾಗದ ಆವರಣ ಗೋಡೆ ಕುಸಿದು ಹೋಗಿದ್ದು, ಇದೀಗ ಸಂಪೂರ್ಣ ತೆರೆದ ಸ್ಥಿತಿಯಲ್ಲಿದೆ. ಮಕ್ಕಳ ಸುರಕ್ಷತೆಗಾಗಿ ಹಾಗೂ ಶಾಲೆಯ ರಕ್ಷಣೆಗೆ ಸಂಬಂಧಪಟ್ಟ ಇಲಾಖೆ ತಕ್ಷಣ ಗಮನಹರಿಸಿ ಶಾಶ್ವತ ಆವರಣ ಗೋಡೆ ನಿರ್ಮಿಸಬೇಕು.
– ರಜನೀಶ್, ಸ್ಥಳೀಯರು



