News Roundup

ಹೂಳು ತುಂಬಿದ ರಾಜಕಾಲುವೆ, ಹದಗೆಟ್ಟ ರಸ್ತೆ : ಪುದು ಗ್ರಾಮದಲ್ಲಿ ಹೆಜ್ಜೆಗೊಂದು ಸಮಸ್ಯೆ!

ವರದಿ : ಯಾದವ ಕುಲಾಲ್ ಅಗ್ರಬೈಲು

ಬಿ.ಸಿ.ರೋಡ್ : ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೂಲಭೂತ ಸಮಸ್ಯೆಗಳ ಸರಮಾಲೆಯೇ ತಲೆದೋರಿದೆ. ಹೂಳು ತುಂಬಿದ ರಾಜಕಾಲುವೆ, ಹೆದಗೆಟ್ಟ ರಸ್ತೆ, ಕುಸಿಯುವ ಭೀತಿಯಲ್ಲಿ ಕಾಂಪೌಂಡ್ ಹೀಗೆ ಹೇಳುತ್ತಾ ಹೋದರೆ ಸಮಸ್ಯೆಗಳು ಹಲವಿವೆ.

ಕುಂಪಣಮಜಲು ಭಾಗದಲ್ಲಿರುವ ರಾಜಕಾಲುವೆ ಹೂಳು, ಮಣ್ಣು ಹಾಗೂ ತ್ಯಾಜ್ಯಗಳಿಂದ ತುಂಬಿ ಹೋಗಿದ್ದು, ಮಳೆ ನೀರು ಹರಿಯಲು ದಾರಿ ಇಲ್ಲದಂತಾಗಿದೆ. ಈ ಭಾಗದ ತ್ಯಾಜ್ಯ ನೀರು ಸಂಪೂರ್ಣವಾಗಿ ಇದೇ ಕಾಲುವೆಯ ಮೂಲಕ ಹರಿಯುತ್ತಿದ್ದು, ಬೇಸಿಗೆ ಅವಧಿಯಲ್ಲಿ ತ್ಯಾಜ್ಯವನ್ನು ಕಾಲುವೆಗೆ ಹಾಕುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಹೀಗಾಗಿ ಮಳೆಗಾಲದಲ್ಲಿ ನೀರು ಹರಿಯಲು ಅವಕಾಶವೇ ಇಲ್ಲದಂತಾಗಿದ್ದು, ಸುತ್ತಮುತ್ತ ಪ್ರದೇಶಗಳಲ್ಲಿ ನೀರು ನಿಂತು ಮನೆಗಳಿಗೆ ತೊಂದರೆ ಉಂಟಾಗುವ ಭೀತಿಯನ್ನೂ ಅಲ್ಲಗಳೆಯುವಂತಿಲ್ಲ.

ಮುಖ್ಯ ರಸ್ತೆಯೇ ಹದಗೆಟ್ಟು ಸಂಚಾರಕ್ಕೆ ಅಡ್ಡಿ :
ಸುಜೀರ್ ಸರ್ಕಾರಿ ಆಸ್ಪತ್ರೆ ಸಮೀಪದಿಂದ ಗ್ರಾಮೀಣ ಭಾಗಕ್ಕೆ ಸಂಪರ್ಕಿಸುವ ರಸ್ತೆ ಮಳೆ ನೀರಿನ ಹೊಡೆತಕ್ಕೆ ಸಿಲುಕಿ ಹದಗೆಟ್ಟಿದೆ. ಗುಡ್ಡ ಪ್ರದೇಶದಿಂದ ಹರಿದುಬರುವ ನೀರಿಗೆ ತೋಡು ವ್ಯವಸ್ಥೆ ಇಲ್ಲದ ಕಾರಣ, ನೀರು ನೇರವಾಗಿ ರಸ್ತೆಯ ಮೇಲೆಯೇ ಹರಿದು ರಸ್ತೆ ಕರಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರಿಪಳ್ಳ ಜಂಕ್ಷನ್ ಮೂಲಕ ಸಾಗುವ ಈ ರಸ್ತೆ ಸುಜೀರ್, ದೈಯಡ್ಕ, ಕೊಡಂಗೆ, ಮಲ್ಲಿ ಸೇರಿದಂತೆ ಹಲವು ಗ್ರಾಮಗಳ ಜೀವನಾಡಿಯಾಗಿದ್ದು, ಈಗಾಗಲೇ ಭಾರೀ ವಾಹನ ಸಂಚಾರಕ್ಕೆ ಅಸಾಧ್ಯವಾಗಿದೆ. ಕಳೆದ ವರ್ಷದ ನಿರಂತರ ಮಳೆಯ ಸಂದರ್ಭ ಈ ಭಾಗದ ಮನೆಗಳಿಗೂ ನೀರು ನುಗ್ಗಿ ಹಾನಿ ಉಂಟಾಗುವ ಸಂಭವ ಇತ್ತು. ತೋಡು ವ್ಯವಸ್ಥೆ ಇನ್ನೂ ನಿರ್ಮಾಣವಾಗದಿದ್ದರೆ, ಮುಂದಿನ ಮಳೆಗಾಲದಲ್ಲಿ ಈ ಭಾಗದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗುವ ಸಾಧ್ಯತೆ ಇದೆ. ಗ್ರಾಮಸ್ಥರಿಗೆ ಮೂಲಭೂತ ಸಂಪರ್ಕವೇ ಕಡಿತವಾಗುವ ಆತಂಕ ಎದುರಾಗಿದೆ.

ಕುಸಿಯುತ್ತಿರುವ ಕಂಪೌಂಡ್ – ಮನೆಗಳಿಗೆ ಅಪಾಯದ ನೆರಳು :
ಪುದು ಗ್ರಾಮದ ಕೊಡಂಗೆ ಬಳಿ ನಿರಂತರ ಮಳೆಯಿಂದ ರಮೇಶ್ ಕುಲಾಲ್ ಅವರ ಕಾಂಪೌಂಡ್ ಕಳೆದ ಹಲವಾರು ವರ್ಷಗಳಿಂದ ಕುಸಿಯುತ್ತಿದ್ದು, ಪಕ್ಕದ ನಿವೇಶನಕ್ಕೂ ಹಾನಿ ಉಂಟಾಗಿದೆ. ಇದೇ ಸ್ಥಿತಿ ಮುಂದುವರಿದರೆ ಮನೆಗೂ ಅಪಾಯ ಸಂಭವಿಸಬಹುದೆಂಬ ಭೀತಿ ವ್ಯಕ್ತವಾಗಿದೆ. ಈ ಭಾಗದಲ್ಲಿ ತಡೆಗೋಡೆ ನಿರ್ಮಿಸಿದರೆ ಶಾಶ್ವತ ಪರಿಹಾರ ಸಿಗಬಹುದು. ಆದರೆ ಕಳೆದ ವರ್ಷ ಅಳವಡಿಸಿದ ತಾತ್ಕಾಲಿಕ ತಲ್ಪಾರ್ ಈಗಾಗಲೇ ಒಣಗಿ ಪರಿಣಾಮಕಾರಿತ್ವ ಕಳೆದುಕೊಂಡಿದೆ.

ಹೀಗೆ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಡ್ರೈನೇಜ್, ರಾಜಕಾಲುವೆ ಹೂಳೆತ್ತುವ ಕಾಮಗಾರಿ ಇನ್ನೂ ಆರಂಭವಾಗದಿದ್ದು ಅತೀ ಶೀಘ್ರದಲ್ಲಿ ಇದನ್ನು ಕೈಗೆತ್ತುಕೊಂಡು ಸಮಸ್ಯೆಗೆ ಸ್ಪಂದಿಸಿದರೆ ಪಂಚಾಯತ್‍ಗೂ ಒಳ್ಳೆಯ ಹೆಸರು ಬರಬಹುದು ಹಾಗೂ ಗ್ರಾಮಸ್ಥರಿಗೂ ಸಮಸ್ಯೆ ಮುಕ್ತಿ ಸಿಕ್ಕದಂತಾಗುತ್ತದೆ.

ಕುಂಪಣಮಜಲು ಬಳಿ ರಾಜಕಾಲುವೆಯಲ್ಲಿ ತುಂಬಿರುವ ಹೂಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ, ಮಳೆ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರಕ್ಕಾಗಿ ಯೋಜನೆ ರೂಪಿಸಲಾಗುವುದು.
– ರಮ್ಲಾನ್ ಮಾರಿಪಳ್ಳ, ಅಧ್ಯಕ್ಷರು ಪುದು ಗ್ರಾಮ ಪಂಚಾಯತ್

ಪುದು ಗ್ರಾಮದಲ್ಲಿ ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳ ಕುರಿತು ಚರ್ಚಿಸಲು ಶೀಘ್ರದಲ್ಲೇ ಎಲ್ಲಾ ಸದಸ್ಯರ ಸಭೆ ಕರೆಯಲಾಗಿದ್ದು, ರಸ್ತೆ, ಚರಂಡಿ, ಡ್ರೈನೇಜ್ ಹಾಗೂ ರಾಜಕಾಲುವೆ ಹೂಳೆತ್ತುವ ಕಾಮಗಾರಿಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
– ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪುದು ಗ್ರಾಮ ಪಂಚಾಯತ್

Show More

Related Articles

Leave a Reply

Your email address will not be published. Required fields are marked *

Back to top button