ಸುಳ್ಳು ಸುದ್ದಿ ವಿರುದ್ಧ ಸಿಡಿದೆದ್ದ `ವಿರೋಶ್’ : ಸೈಬರ್ ಕ್ರೈಂಗೆ ವಿಜಯ ದೇವರಕೊಂಡ ಮತ್ತು ರಶ್ಮಿಕಾ ತಂಡದಿಂದ ದೂರು
ಕರಣ್ ಜೋಹರ್ ನಡೆಸಿಕೊಡುವ `ಕಾಫಿ ವಿತ್ ಕರಣ್ ಸೀಸನ್ 9′ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ದಂಪತಿ ಸಂಬಂಧವನ್ನು ಟೀಕಿಸಿ ಹಲವರು ಟ್ರೋಲ್ ಮಾಡಿದ್ದರು. ಇದರ ವಿರುದ್ಧ ವಿಜಯ ದೇವರಕೊಂಡ ಹಾಗೂ ರಶ್ಮಿಕಾ ದಂಪತಿಯ ಪರವಾಗಿ ಅವರ ಪ್ರತಿನಿಧಿಗಳ ತಂಡವು ಹೈದರಾಬಾದ್ನ ಸೈಬರ್ ಕ್ರೈಂ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಂಪತಿ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಮತ್ತು ದಾರಿತಪ್ಪಿಸುವ ವಿಷಯಗಳನ್ನು ಹರಡಲಾಗುತ್ತಿದೆ ಎಂದು ತಂಡ ದೂರು ನೀಡಿದ್ದು, ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೋರಿದ್ದಾರೆ.
ದೂರಿನಲ್ಲಿ ಸುಳ್ಳು ಸುದ್ದಿಗಳು, ಸೃಷ್ಟಿಸಲಾದ ವಿಷಯಗಳು, ತಿರುಚಲಾದ ಸ್ಕ್ರೀನ್ಶಾಟ್ಗಳು, ಉದ್ದೇಶಿತ ಆನ್ಲೈನ್ ಕಿರುಕುಳಕ್ಕೆ ಸಂಬಂಧಿಸಿದ ಹಲವು ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಮತ್ತು ಡಿಜಿಟಲ್ ಪ್ರಕಟಣೆಗಳನ್ನು ಉಲ್ಲೇಖಿಸಲಾಗಿದೆ. ಜೊತೆಗೆ ಪರಿಶೀಲನೆಗಾಗಿ ಸಂಬಂಧಿತ ಲಿಂಕ್ಗಳು ಮತ್ತು ಪೂರಕ ಸಾಕ್ಷ್ಯಗಳನ್ನು ಸಹ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ವರದಿಯಾಗಿದೆ.
`ಕಾನೂನಿನ ಪ್ರಕಾರ ಈ ವಿಷಯದ ತನಿಖೆ ನಡೆಯಲಿದೆ ಎಂದು ನಾವು ಆಶಿಸುತ್ತೇವೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ತಮ್ಮ ಸಂಬಂಧವನ್ನು ಟೀಕಿಸಿದ ಟ್ರೋಲಿಗರಿಗೆ ವಿಜಯ್ ದೇವರಕೊಂಡ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ತಿರುಗೇಟು ನೀಡಿದ್ದರು. `ನನ್ನ ಆತ್ಮೀಯ ಸ್ನೇಹಿತೆ, ನನ್ನ ಪತ್ನಿ, ನನ್ನ ಪ್ರೀತಿಯ ಮಹಿಳೆ. ನನ್ನ ಜೀವನದಲ್ಲಿ ನಾನು ಸರಿಯಾಗಿ ಆಯ್ಕೆ ಮಾಡಿಕೊಂಡ ಅತ್ಯಂತ ಸುಂದರವಾದ ಸಂಗತಿಗಳಲ್ಲಿ ಅವಳು ಒಬ್ಬಳು. ನಮ್ಮ ಬಗ್ಗೆ ಕಾಳಜಿ ವಹಿಸುವ ಎಲ್ಲರಿಗೂ ಹೇಳುವುದೇನೆಂದರೆ, ನಾವಿಬ್ಬರೂ ಅತ್ಯಂತ ಸಂತೋಷವಾಗಿದ್ದೇವೆ. ನಾನು ಭಾಗ್ಯಶಾಲಿ’ ಎಂದು ಬರೆದುಕೊಂಡಿದ್ದರು.
ಇತ್ತ ರಶ್ಮಿಕಾ ಕೂಡಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. `ಈ ಬಾರಿ ತಮ್ಮ ಸಂದರ್ಶನದ ಕುರಿತು ನಡೆಯುತ್ತಿರುವ ಚರ್ಚೆಯು ಕೇವಲ ಅಭಿಪ್ರಾಯಗಳ ವಿನಿಮಯದಂತೆ ಕಾಣುತ್ತಿಲ್ಲ. ಬದಲಾಗಿ, ಯಾರ ಮೇಲಾದರೂ ತಮ್ಮ ಕೋಪವನ್ನು ಹೊರಹಾಕಲು ಕಾಯುತ್ತಿರುವ ಆಕ್ರೋಶಭರಿತ ಗುಂಪಿನ ವರ್ತನೆಯಂತೆ ಕಾಣುತ್ತಿದೆ’ ಎಂದು ಅವರು ಬರೆದುಕೊಂಡಿದ್ದಾರೆ.
ಕಾಫಿ ವಿತ್ ಕರಣ್ ಸೀಸನ್ 9 ಕಾರ್ಯಕ್ರಮದಲ್ಲಿ ನಿರೂಪಕ ಕರಣ್ ಜೋಹರ್, ಮೊದಲು ಮದುವೆಯ ಪ್ರಸ್ತಾಪ ಮಾಡಿದ್ದು ಯಾರು ಎಂದು ಕೇಳಿದಾಗ ಉತ್ತರಿಸಿದ ರಶ್ಮಿಕಾ, ತಾವು ಮತ್ತು ವಿಜಯ್ ವಿಮಾನ ನಿಲ್ದಾಣದಲ್ಲಿದ್ದಾಗ ಮೊದಲು ಮದುವೆಯ ವಿಷಯವನ್ನು ಪ್ರಸ್ತಾಪಿಸಿದ್ದಾಗಿ ತಿಳಿಸಿದ್ದಾರೆ. ಆದರೆ, ವಿಜಯ್ ಅವರು ಒಪ್ಪಿಕೊಳ್ಳುವ ಮೊದಲು ತಮಗೆ “100 ಬಾರಿ” ಕೇಳುವಂತೆ ಹೇಳಿದ್ದರು ಎಂದು ರಶ್ಮಿಕಾ ತಿಳಿಸಿದ್ದಾರೆ. ಬಳಿಕ ಸುಮಾರು ಒಂದು ವರ್ಷದವರೆಗೆ ತಾವು ಮದುವೆಯ ವಿಷಯವನ್ನು ಪದೇಪದೇ ಪ್ರಸ್ತಾಪಿಸಿದ ನಂತರ, 2026ರ ಫೆಬ್ರವರಿಯಲ್ಲಿ ಮದುವೆಯಾಗಲು ನಿರ್ಧರಿಸಿದ್ದಾಗಿ ಅವರು ವಿವರಿಸಿದ್ದಾರೆ. ಈ ಸಂಭಾಷಣೆಯನ್ನು ಜನರು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ರಶ್ಮಿಕಾ ಹೇಳಿದ್ದಾರೆ.



