ರಾಜೇಶ್ ಖನ್ನಾ ಜೊತೆಗಿನ ವೈವಾಹಿಕ ಮಾನ್ಯತೆಗಾಗಿ ಅನಿತಾ ಅಡ್ವಾಣಿ ಸಲ್ಲಿಸಿದ್ದ ಅರ್ಜಿ ವಜಾ: ಏನಿದು ಪ್ರಕರಣ
ಬಾಲಿವುಡ್ನ ದಿವಂಗತ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಅವರೊಂದಿಗಿನ ತಮ್ಮ ಸಂಬಂಧವನ್ನು ವೈವಾಹಿಕ ಮಾನ್ಯತೆಯಾಗಿ ಗುರುತಿಸಬೇಕು ಎಂದು ನಟಿ ಅನಿತಾ ಅಡ್ವಾಣಿ ಸಲ್ಲಿಸಿದ್ದ ಮೇಲ್ಮನವಿ ಬಾಂಬೆ ಹೈಕೋರ್ಟಿನಲ್ಲಿ ತಿರಸ್ಕೃತವಾಗಿದೆ. ಈ ಮೂಲಕ ಕೆಳ ಹಂತದ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಏನಿದು ಪ್ರಕರಣ?
ರಾಜೇಶ್ ಖನ್ನಾ 1973ರಲ್ಲಿ ನಟಿ ಡಿಂಪಲ್ ಕಪಾಡಿಯಾ ಅವರನ್ನು ವಿವಾಹವಾಗಿದ್ದರು. ಆದರೆ 1980ರ ದಶಕದ ಮಧ್ಯಭಾಗದಲ್ಲಿ ಈ ಜೋಡಿ ಪರಸ್ಪರ ದೂರವಾಗಿದ್ದರು. ಡಿಂಪಲ್ ಕಪಾಡಿಯಾ ತನ್ನ ಪುತ್ರಿಯರಾದ ಟ್ವಿಂಕಲ್ ಖನ್ನಾ ಹಾಗೂ ರಿಂಕೆ ಖನ್ನಾ ಅವರೊಂದಿಗೆ ಆಶೀರ್ವಾದ್ ಬಂಗಲೆಯನ್ನು ತೊರೆದಿದ್ದರೂ ಇವರು ರಾಜೇಶ್ ಖನ್ನಾ ಅವರಿಗೆ ಅಧಿಕೃತವಾಗಿ ವಿಚ್ಛೇದನ ನೀಡಿರಲಿಲ್ಲ. ಹೀಗೆ ಡಿಂಪಲ್ ಕಪಾಡಿಯಾ ರಾಜೇಶ್ ಖನ್ನಾರಿಂದ ದೂರವಾದ ಬಳಿಕ ಹಲವು ವರ್ಷಗಳ ಕಾಲ, ಅಂದರೆ 2012 ರಲ್ಲಿ ಅವರು ಮರಣ ಹೊಂದುವ ತನಕ ಅನಿತಾ ಅಡ್ವಾಣಿ ರಾಜೇಶ್ ಖನ್ನಾ ಅವರೊಂದಿಗೆ ಲಿವ್-ಇನ್ ಸಂಬಂಧ ಹೊಂದಿದ್ದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಆಶೀರ್ವಾದ್ ಬಂಗಲೆ ಸೇರಿದಂತೆ ರಾಜೇಶ್ ಖನ್ನಾ ಅವರ ಮನೆಯನ್ನು ನೋಡುತ್ತಿದ್ದಾಗಿ ಹಾಗೂ ಅನಾರೋಗ್ಯದ ಸಮಯದಲ್ಲಿ ಅವರ ಆರೈಕೆ ಮಾಡಿದ್ದಾಗಿ ಇವರು ಹೇಳಿಕೊಂಡಿದ್ದಾರೆ. ಹೀಗಾಗಿ ರಾಜೇಶ್ ಖನ್ನಾ ಅವರ ಜೊತೆಗಿನ ತಮ್ಮ ಸಂಬಂಧಕ್ಕೆ ವೈವಾಹಿಕ ಮಾನ್ಯತೆ ನೀಡಬೇಕು ಎಂದು ಅನಿತಾ ಅಡ್ವಾಣಿ ಅರ್ಜಿ ಸಲ್ಲಿಸಿದ್ದರು. ಇದನ್ನು ಡಿಂಪಲ್ ಕಪಾಡಿಯಾ, ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ವಿರೋಧಿಸಿದ್ದರು.
ಈ ಹಿಂದೆ 2017ರಲ್ಲಿ, ದಿನೋಶಿ ಸಿವಿಲ್ ನ್ಯಾಯಾಲಯವು ತಾಂತ್ರಿಕ ಕಾರಣಗಳ ಮೇಲೆ ಅನಿತಾ ಅಡ್ವಾಣಿ ಅವರ ಸಿವಿಲ್ ಮೊಕದ್ದಮೆಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಇವರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದು ಅನಿತಾ ಅಡ್ವಾಣಿ ಅವರ ಅರ್ಜಿಯನ್ನು ವಜಾ ಮಾಡಿದೆ.
ರಹಸ್ಯ ಮದುವೆ:
ರಾಜೇಶ್ ಜೊತೆಗಿನ ಸಂಬಂಧದ ಬಗ್ಗೆ ಅನಿತಾ ನಡೆಸುತ್ತಿರುವ ಕಾನೂನು ಹೋರಾಟ ಸುಮಾರು 14 ವರ್ಷಗಳು. ಕಳೆದ ವರ್ಷ ಮೇರಿ ಸಹೇಲಿಗೆ ನೀಡಿದ ಸಂದರ್ಶನದಲ್ಲಿ, ಅನಿತಾ ತಾನು ಹಾಗೂ ರಾಜೇಶ್ ಖಾಸಗಿಯಾಗಿ ವಿವಾಹವಾಗಿದ್ದೆವು ಎಂದು ಹೇಳಿಕೊಂಡಿದ್ದರು. `ನಾವು ಖಾಸಗಿಯಾಗಿ ವಿವಾಹವಾದೆವು, ಆದರೆ ಚಿತ್ರರಂಗದಲ್ಲಿ ಯಾರೂ ಅಂತಹ ವಿಷಯಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಎಲ್ಲರೂ `ನಾವು ಸ್ನೇಹಿತರು’ ಅಥವಾ `ನಾವು ಸಂಬಂಧದಲ್ಲಿದ್ದೇವೆ’ ಅಥವಾ ಇನ್ನೇನಾದರೂ ಹೇಳುತ್ತಾರೆ. ಆದರೆ ನಾನು ಅವರೊಂದಿಗೆ ಇದ್ದೇನೆ ಎಂದು ಮಾಧ್ಯಮಗಳಲ್ಲಿ ಈಗಾಗಲೇ ವರದಿಯಾಗಿತ್ತು, ಆದ್ದರಿಂದ ನಾವಿಬ್ಬರೂ ಹೋಗಿ ನಾವು ಮದುವೆಯಾಗಿದ್ದೇವೆ ಎಂದು ಸಾರ್ವಜನಿಕವಾಗಿ ಘೋಷಿಸುವ ಅಗತ್ಯವಿರಲಿಲ್ಲ. ನಮಗೆ ಆ ಅಗತ್ಯ ಎಂದಿಗೂ ಅನಿಸಲಿಲ್ಲ.’ ಎಂದು ಇವರು ಹೇಳಿಕೊಂಡಿದ್ದರು.



