ಬಂಟ್ವಾಳ : ನೇರಂಬೋಳು ಪ್ರದೇಶದಲ್ಲಿ ಕುಡಿಯುವ ನೀರಿನ ಸಂಕಷ್ಟ
ಯಾದವ ಕುಲಾಲ್ ಅಗ್ರಬೈಲು
ಬಿ.ಸಿ.ರೋಡ್ : ಬಂಟ್ವಾಳ ಪುರಸಭೆ ವ್ಯಾಪ್ತಿಯ ನೇರಂಬೋಳು ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದೆ. ಇಲ್ಲಿನ ಜನ ಕಳೆದ ಮೂರು ತಿಂಗಳಿನಿಂದ ಸಮರ್ಪಕವಾಗಿ ಕುಡಿಯುವ ನೀರು ದೊರೆಯದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ದಿನಕ್ಕೆ ಕೇವಲ ಅರ್ಧ ಗಂಟೆ ಮಾತ್ರ ನೀರು ಬರುತ್ತದೆ. ಅದೂ ತುಂಬಾ ಸಪೂರವಾಗಿ ಬರುತ್ತದೆ. ಹೀಗಾಗಿ ಸಂಗ್ರಹವಾಗುವ ನೀರು ದಿನನಿತ್ಯದ ಅಗತ್ಯಗಳಿಗೆ ಸಾಕಾಗುವುದಿಲ್ಲ ಎನ್ನುವುದು ಗ್ರಾಮಸ್ಥರ ಅಳಲು.
ಟ್ಯಾಂಕರ್‌ನಿಂದ ನೀರು ತರಿಸಿಕೊಳ್ಳುವುದು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ದೊಡ್ಡ ಸವಾಲಾಗಿದೆ. ಹೀಗಾಗಿ ಈ ಭಾಗದ ನಿವಾಸಿಗಳು ಕಳೆದ ಕೆಲವು ತಿಂಗಳಿನಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ನೀರಿನ ಕೊರತೆಯಿಂದ ಕೆಲವರು ಬಟ್ಟೆ ಒಗೆಯಲು ದೂರದ ನೇತ್ರಾವತಿ ನದಿ ತೀರದತ್ತ ತೆರಳುತ್ತಿದ್ದಾರೆ.
ಈ ಹಿಂದೆ ಈ ಪ್ರದೇಶದಲ್ಲಿ ಇದ್ದ ಬೋರ್‌ವೆಲ್ ಗ್ರಾಮಸ್ಥರಿಗೆ ಪ್ರಮುಖ ನೀರಿನ ಆಧಾರವಾಗಿತ್ತು. ಆದರೆ ಅದರ ಸಂಪರ್ಕವನ್ನು ತೆಗೆದುಹಾಕಿರುವುದರಿಂದ ಅದು ಬಳಕೆಗೆ ಯೋಗ್ಯವಾಗಿಲ್ಲ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಗಂಭೀರವಾಗಿದ್ದು, ಸಂಬಂಧಪಟ್ಟ ಅಕಾರಿಗಳು ತಕ್ಷಣ ಕ್ರಮ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎನ್ನುವುದು ಇಲ್ಲಿನ ಗ್ರಾಮಸ್ಥರ ಒತ್ತಾಯ.
ದಿನಕ್ಕೆ ಅರ್ಧಗಂಟೆ ಮಾತ್ರ ಸಪೂರದಲ್ಲಿ ನೀರು ಬರುತ್ತದೆ. ಅದನ್ನು ಸಂಗ್ರಹಿಸಿದರೂ ದಿನನಿತ್ಯದ ಬಳಕೆಗೆ ಸಾಕಾಗುವುದಿಲ್ಲ. ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ತಕ್ಷಣ ಸಮಸ್ಯೆ ಪರಿಹರಿಸಬೇಕು.
ಮನೋಹರ ನೇರಂಬೋಳು, ಸದಸ್ಯರು ಬಂಟ್ವಾಳ ಪ್ರಾಧಿಕಾರ
ದಿನಕ್ಕೆ ಅರ್ಧಗಂಟೆ ಮಾತ್ರ ಸಪೂರದಲ್ಲಿ ನೀರು ಬರುತ್ತದೆ. ಅದನ್ನು ಸಂಗ್ರಹಿಸಿದರೂ ದಿನನಿತ್ಯದ ಬಳಕೆಗೆ ಸಾಕಾಗುವುದಿಲ್ಲ. ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ತಕ್ಷಣ ಸಮಸ್ಯೆ ಪರಿಹರಿಸಬೇಕು.
– ಮನೋಹರ ನೇರಂಬೋಳು, ಸದಸ್ಯರು ಬಂಟ್ವಾಳ ಪ್ರಾಧಿಕಾರ
ಮೂರು ತಿಂಗಳಿನಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ಟ್ಯಾಂಕರ್ ನೀರು ತರಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹಳೆಯ ಬೋರ್‌ವೆಲ್ ಕೂಡಾ ಹಾಳಾಗಿದೆ. ತಕ್ಷಣ ಹೊಸ ವ್ಯವಸ್ಥೆ ಮಾಡಬೇಕು. ಅಧಗಂಟೆಯೂ ನೀರು ಬರುವುದಿಲ್ಲ.
– ಉಮೇಶ್ ಕುಲಾಲ್, ಸ್ಥಳೀಯ ನಿವಾಸಿ
ನೀರಿನ ಕೊರತೆಯಿಂದ ಮನೆಯ ಕೆಲಸಗಳು ಕೂಡ ಕಷ್ಟಕರವಾಗಿದ್ದು, ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳಲು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ. ಹತ್ತಾರು ಮನೆಗಳ ನಿವಾಸಿಗಳು ಕಳೆದ ಕೆಲವು ತಿಂಗಳಿನಿಂದ ಸಂಕಷ್ಟದ ಜೀವನ ನಡೆಸುತ್ತಿದ್ದೇವೆ.
– ಗೋಪಾಲ ಪೂಜಾರಿ, ಸ್ಥಳೀಯ ನಿವಾಸಿ



