ಅಶ್ಲೀಲವಾಗಿ ಬರೆಯಬೇಕು, ನೋಯಿಸಬೇಕೆಂಬ ಉದ್ದೇಶದಿಂದ ಬರೆದಿಲ್ಲ, ನೋವಾಗಿದ್ದರೆ ಕ್ಷಮೆಯಾಚಿಸುವೆ : ಪ್ರೇಮ್
ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ” ದಿ ಡೆವಿಲ್’ ಚಿತ್ರದ ‘ಸರ್ಸೆ ನಿನ್ನ ಸೆರಗ’ ಹಾಡು ವಿವಾದ ಎಬ್ಬಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಪ್ರೇಮ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ತಮ್ಮ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಪ್ರೇಮ್, ಅಶ್ಲೀಲ ಅರ್ಥ ನೀಡಬೇಕು, ನೋಯಿಸಬೇಕು, ಬೇರೆಯವರಿಗೆ ತೊಂದರೆ ಕೊಡಬೇಕು ಎಂಬ ಉದ್ದೇಶದಿಂದ ಹಾಡು ಬರೆದಿಲ್ಲ. ಆದರೆ ನನ್ನ ಈ ಸಾಹಿತ್ಯದಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. `ಈ ಹಾಡನ್ನು ನನ್ನ ದೃಷ್ಟಿಕೋನದಲ್ಲಿ ಬರೆದೆ. ಬಾಟಲಿ, ಉಪ್ಪಿನಕಾಯಿ ಈ ವಿಷಯ ಇಟ್ಟುಕೊಂಡು ಹಾಡು ಬರೆದಿದ್ದೆ. ಒಂದು ಪದ ತೆಗೆದು ಹಿಂದೆ ಹಾಕಬಹುದಿತ್ತು, `ಬಾಟಲಿಯನ್ನು ಮೇಲೆ ಎತ್ತಿ’ ಎಂದು ಮಾಡಬಹುದಿತ್ತು. ಕುತೂಹಲ ಇರಲಿ ಎಂಬ ಕಾರಣಕ್ಕೆ ಅದನ್ನು ಕೊನೆಯಲ್ಲಿ ಹಾಕಿದೆ. ಇದನ್ನು ಅಶ್ಲೀಲ ರೀತಿಯಾಗಿ ಅಥವಾ ಬೇರೆ ಯಾವುದೇ ರೀತಿಯಲ್ಲಿ ಅರ್ಥ ನೀಡುವಂತೆ ಬರೆದಿಲ್ಲ’ ಎಂದು ಅವರು ಹೇಳಿದ್ದಾರೆ.
Love you all 🙏❤️ pic.twitter.com/McRLHHkkIK
— PREM❣️S (@directorprems) March 18, 2026
ಜೊತೆಗೆ ಈ ಹಾಡನ್ನು ಮತ್ತೆ ಬೇರೆ ರೀತಿಯಲ್ಲಿ ಬರೆದು ಬಿಡುಗಡೆ ಮಾಡುತ್ತೇನೆ ಎಂದೂ ಪ್ರೇಮ್ ತಿಳಿಸಿದ್ದಾರೆ. ನನ್ನ ಈ ಹಿಂದಿನ ಕೆಲಸಗಳಿಗೆ ಎಲ್ಲರೂ ಬೆಂಬಲ ನೀಡಿದ್ದಾರೆ. ಈ ಬೆಂಬಲಕ್ಕೆ ನಾನು ಚಿರಋಣಿ ಎಂದೂ ಪ್ರೇಮ್ ಹೇಳಿದ್ದಾರೆ..



