ಧುರಂಧರ್ 2ನಲ್ಲಿ ಸೇನಾ ರಹಸ್ಯ ಬಹಿರಂಗವಾಗಿದೆಯೇ? : ಪರಿಶೀಲನೆಗೆ ದಹಲಿ ಹೈಕೋರ್ಟ್ ಸೂಚನೆ : ಏನಿದು ಪ್ರಕರಣ?
ರಣಬೀರ್ ಸಿಂಗ್ ಅಭಿನಯದ ಸೂಪರ್ ಹಿಟ್ ಸಿನಿಮಾ ಧುರಂಧರ್ ಈಗ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ. ಧುರಂಧರ್ 2ನಲ್ಲಿ ಸೇನಾ ರಹಸ್ಯವನ್ನು ಬಹಿರಂಗಪಡಿಸಲಾಗಿದೆ ಎಂದು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್ ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಏನಿದು ಪ್ರಕರಣ?
ಧುರಂಧರ್ 2 ಸಿನಿಮಾದಲ್ಲಿ ಸೇನಾಪಡೆಗಳ ಕಾರ್ಯಾಚರಣೆಯ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಇದು ದೇಶದ ಭದ್ರತೆ ಹಾಗೂ ಸಮಗ್ರತೆಗೆ ಅಪಾಯವನ್ನುಂಟುಮಾಡಬಹುದು ಎಂದು ಸಶಸ್ತ್ರ ಸೀಮಾ ಬಲ್(ಎಸ್‌ಎಸ್‌ಬಿ)ನ ಹೆಡ್ ಕಾನ್‌ಸ್ಟೆಬಲ್ ದೀಪಕ್ ಕುಮಾರ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ವಿಭಾಗೀಯ ಪೀಠವು, ಈ ಸಿನಿಮಾ ಕಾಲ್ಪನಿಕ ಕಥೆಯಾಗಿದ್ದರೂ ಭದ್ರತಾ ಪಡೆಯಸಿಬ್ಬಂದಿ ಎತ್ತಿರುವ ಕಳವಳಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಹೇಳಿದೆ.
ಜೊತೆಗೆ ಧುರಂಧರ್: ದಿ ರಿವೆಂಜ್ ಅಧಿಕೃತ ರಹಸ್ಯ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂಬ ಆರೋಪಗಳನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ -ಸಿಬಿಎಫ್‌ಸಿ ಗೆ ಸೂಚಿಸಿದೆ.



