ಶ್ರೀರಾಮ ದೇವರನ್ನು ಆಂಜನೇಯಸ್ವಾಮಿ ಮೊದಲು ಭೇಟಿಯಾಗಿದ್ದು ಎಲ್ಲಿ?

ಹನುಮಂತ ದೇವರು ಶ್ರೀರಾಮ ದೇವರ ಪರಮ ಭಕ್ತ. ಸೀತಾಮಾತೆಯ ಹುಡುಕಾಟದಲ್ಲಿ ಹನುಮಾನ್ ದೇವರ ಪಾತ್ರವೂ ಹಿರಿದು. ಹೀಗೆ ತನ್ನ ಪ್ರಭುವನ್ನು ಹನುಮಂತ ದೇವರು ಮೊದಲು ಭೇಟಿಯಾಗಿದ್ದು ಎಲ್ಲಿ…? ಇಲ್ಲಿದೆ ಕಥೆ…
ಅದು ಸೀತಾಮಾತೆಯನ್ನು ರಾವಣ ಅಪಹರಿಸಿಕೊಂಡು ಹೋಗಿದ್ದ ಸಂದರ್ಭ. ಸೀತಾಮಾತೆಯನ್ನು ಹುಡುಕಿಕೊಂಡು ಬರುತ್ತಿದ್ದ ಶ್ರೀರಾಮ ಹಾಗೂ ಲಕ್ಷ್ಮಣ ಕಿಷ್ಕಿಂಧೆ ತಲುಪಿದ್ದರು. ಕಿಷ್ಕಿಂಧೆಯಲ್ಲಿ ಸುಗ್ರೀವ ರಾಜನಾಗಿದ್ದ, ಆಗ ಸುಗ್ರೀವನಿಗೆ ಮಂತ್ರಿಯಾಗಿದ್ದದ್ದು ಇದೇ ಹನುಮಾನ್. ಹೀಗೆ ಸಾಗುತ್ತಿದ್ದ ಶ್ರೀರಾಮ, ಲಕ್ಷ್ಮಣರನ್ನು ಸುಗ್ರೀವ ನೋಡಿದ್ದ.
ಸುಗ್ರೀವ ಋಷ್ಯಮುಖ ಪರ್ವತದ ಬಳಿ ತನ್ನ ಸೋದರ ವಾಲಿಯ ಭಯದಲ್ಲಿ ಅಡಗಿ ಕುಳಿತಿದ್ದ. ಹೀಗಾಗಿ ತನ್ನನ್ನು ಕೊಲ್ಲಲು ವಾಲಿ ಈ ಇಬ್ಬರನ್ನು ಕಳುಹಿಸಿದ್ದಾನೆ ಎಂದು ಸುಗ್ರೀವ ಭಯಗೊಂಡಿದ್ದ. ಆಗ ಸುಗ್ರೀವ ಹನುಮನನ್ನು ಕರೆದು `ಅವರಿಬ್ಬರು ಯಾರು’ ಎಂದು ತಿಳಿದುಬರಲು ಕಳುಹಿಸಿದ್ದ.
ಆಗ ಹನುಮಾನ್ ದೇವರು ಸಾಧುವಿನ ರೂಪ ಧರಿಸಿ ಶ್ರೀರಾಮ ಮತ್ತು ಲಕ್ಷ್ಮಣರ ಬಳಿ ಬಂದಿದ್ದರು.
ಈ ಸಂಭಾಷಣೆಯ ಮೂಲಕ ಹನುಮನು ಶೀಘ್ರದಲ್ಲೇ ಭಗವಾನ್ ಶ್ರೀರಾಮನ ದೈವಿಕ ಸ್ವರೂಪವನ್ನು ಅರಿತುಕೊಂಡಿದ್ದರು. ಶ್ರೀರಾಮದೇವರು ಕೂಡಾ ಇದು ಸಾಮಾನ್ಯ ಸಾಧು ಅಲ್ಲ ಎಂದು ಅರಿತುಕೊಂಡಿದ್ದರು . ಈ ಮೂಲಕ ಹನುಮಂತ ದೇವರು ಮೊದಲ ಬಾರಿಗೆ ತನ್ನ ಆರಾಧ್ಯಮೂರ್ತಿ ಶ್ರೀರಾಮ ದೇವರನ್ನು ಕಂಡಿದ್ದರು.
ಬಳಿಕ ಹನುಮಂತ ದೇವರು ಈ ಇಬ್ಬರೂ ಸುಗ್ರೀವನಿದ್ದಲ್ಲಿಗೆ ಕರೆದುಕೊಂಡು ಬಂದಿದ್ದರು. ಇದಾದ ಬಳಿಕ ಸುಗ್ರೀವನೂ ಸೀತಾ ಮಾತೆಯನ್ನು ಹುಡುಕುವ ಅನ್ವೇಷಣೆಯಲ್ಲಿ ರಾಮ, ಲಕ್ಷ್ಮಣರಿಗೆ ನೆರವಾಗಿದ್ದನು. ಈ ಭೇಟಿ ನಡೆದಿದ್ದ ಈ ಕಿಷ್ಕಂಧೆ ಎನ್ನುವುದೇ ಈಗಿನ ಹಂಪಿಯ ಬಳಿಯ ಪ್ರದೇಶ.



