ಹುಬ್ಬಳ್ಳಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿವಿಧ ಸಂಘ, ಘಟಕಗಳ ಬೀಳ್ಕೊಡುಗೆ ಸಮಾರಂಭ

ಹುಬ್ಬಳ್ಳಿ : ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 2025-26 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘ, ಕ್ರೀಡಾ ಸಂಘ, ರಾಷ್ಟ್ರೀಯ ಸೇವಾ ಯೋಜನೆ – ಎನ್ಎಸ್ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಡಾ. ಹೇಮಾ ಪಟ್ಟಣಶೆಟ್ಟಿ ಅವರು ಪಾಲ್ಗೊಡಿದ್ದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿ ಜೀವನವು ಸುವರ್ಣ ಅವಕಾಶವಾಗಿದ್ದು, ನಿಮ್ಮಲ್ಲಿರುವ ಅಪಾರ ಸಾಮರ್ಥ್ಯವನ್ನು ಸದ್ಬಳಕೆ ಮಾಡಿಕೊಂಡು ಸರ್ವಾಂಗೀಣ ಬೆಳವಣಿಗೆಯನ್ನು ಹೊಂದಬೇಕು. ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದರಂತಹ ಆದರ್ಶ ವ್ಯಕ್ತಿಗಳನ್ನು ಮಾದರಿಯಾಗಿಟ್ಟುಕೊಂಡು ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ನಿಮ್ಮ ಸ್ವಂತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಗೀತಾ ಎಮ್, ವಿದ್ಯಾರ್ಥಿಗಳು ಶಿಸ್ತು, ಕಠಿಣ ಪರಿಶ್ರಮ ಮತ್ತು ಸಮಯಪಾಲನೆಯನ್ನು ಅಳವಡಿಸಿಕೊಂಡು ಅತ್ಯುತ್ತಮ ಸಾಧನೆಗಳನ್ನು ಮಾಡಿ, ಸಂಸ್ಥೆಯ ಹಾಗೂ ದೇಶದ ಕೀರ್ತಿಯನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಹೇಳಿದರು.
ಈ ಸಮಾರಂಭದಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸಂಸ್ಥೆಯ ಕುಲಸಚಿವರಾದ ಶ್ರೀಮತಿ ರೂಪಾ ಯಾವಗಲ್, ವಿದ್ಯಾರ್ಥಿ ಸಂಘದ ಸಲಹೆಗಾರರಾದ ರಾಜೇಶ ಹೊಂಗಲ್, ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಅಧಿಕಾರಿಯಾದ ಕಿರಣಕುಮಾರ ನಲವಡೆ, ಕ್ರೀಡಾ ಸಲಹೆಗಾರರಾದ ಶಿದ್ಲಿಂಗಪ್ಪ ಕರಿಯಣ್ಣನವರ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಯಾದ ರುದ್ರಪ್ಪ ಬಡಿಗೇರ, ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿಯಾದ ಮಂಜುನಾಥ ಎಸ್., ಎಲ್ಲ ವಿಭಾಗದ ವಿಭಾಗಾಧಿಕಾರಿಗಳು, ಉಪನ್ಯಾಸಕರು, ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗಣಕಯಂತ್ರ ವಿಭಾಗದ ಹಿರಿಯ ಶ್ರೇಣಿ ಉಪನ್ಯಾಸಕಿ ಶ್ರೀಸನ್ಮತಿ ಸುಗಂಧಿ ಸ್ವಾಗತಿಸಿದರು. ವಿಜ್ಞಾನ ವಿಭಾಗದ ಹಿರಿಯ ಶ್ರೇಣಿ ಉಪನ್ಯಾಸಕಿ ಶ್ರೀಮತಿ ಅಮೃತಾ ಕುಲಕರ್ಣಿʼ ಮುಖ್ಯ ಅತಿಥಿಗಳ ಪರಿಚಯ ಭಾಷಣವನ್ನು ಮಾಡಿದರು. ಮೆಕ್ಯಾನಿಕಲ್ ವಿಭಾಗದ ಹಿರಿಯ ಶ್ರೇಣಿ ಉಪನ್ಯಾಸಕರಾದ ಶಂಭುಲಿಂಗ ಉಪ್ಪಿನ ವಂದಿಸಿದರು. ಮೆಕ್ಯಾನಿಕಲ್ ವಿಭಾಗದ ಹಿರಿಯ ಶ್ರೇಣಿ ಉಪನ್ಯಾಸಕರಾದ ಕಿರಣಕುಮಾರ ನಲವಡೆ ಕಾರ್ಯಕ್ರಮ ನಿರೂಪಿಸಿದರು.



