ವಿಶ್ವದ ಏಕೈಕ ತೇಲುವ ರಾಷ್ಟ್ರೀಯ ಉದ್ಯಾನವನ ಇರುವುದು ಭಾರತದಲ್ಲಿ…!
ತೇಲುವ ರಾಷ್ಟ್ರೀಯ ಉದ್ಯಾನವನ…! ಇಂತಹ ಅಪರೂಪದ ತಾಣ ಇರುವುದು ನಮ್ಮ ದೇಶದಲ್ಲಿಯೇ…! ಕೇಳುವಾಗಲೇ ಅಚ್ಚರಿಯಾಗುತ್ತದೆಯಲ್ವಾ…? ನಿಜ, ವಿಶ್ವದಲ್ಲಿಯೇ ಇಂತಹ ಅಪರೂಪದ ತಾಣವೊಂದು ಭಾರತದಲ್ಲಿದೆ. ಇಂತಹ ಸುಂದರ ಮತ್ತು ಅಪರೂಪದ ಜಾಗ ಇರುವುದು ಮಣಿಪುರದಲ್ಲಿ. ಈ ಉದ್ಯಾನವನದ ಹೆಸರು ಕೈಬುಲ್ ಲಂಜಾವ್ ಪಾರ್ಕ್. ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಸುಮಾರು 40 ಚದರ ಕಿಮೀ ಅಂದರೆ 15.4 ಸ್ಕ್ವೇರ್ ಮೈಲ್ ವಿಸ್ತೀರ್ಣದ ಈ ಉದ್ಯಾನವನವಿದೆ. ಮಣಿಪುರದ ರಾಜಧಾನಿ ಇಂಫಾಲದಿಂದ ಸುಮಾರು ಒಂದೂವರೆ ಗಂಟೆ ಪ್ರಯಾಣಿಸಿದರೆ ಈ ಅಪರೂಪದ ಉದ್ಯಾನವನ ಸಿಗುತ್ತದೆ.
ಭಾರತದ ಅತೀ ದೊಡ್ಡ ಸಿಹಿ ನೀರಿನ ಸರೋವರವಾದ ಲೋಕ್ಟಾಕ್ ಸರೋವರದ ಭಾಗವಿದು. ಇದು ನೀರಿನಲ್ಲಿ ತೇಲುವ ರಿಂಗ್ನಂತೆ ಕಾಣುವ ಸಸ್ಯಗಳಿಂದ ಕೂಡಿದೆ. ಸ್ಥಳೀಯವಾಗಿ ಇದನ್ನು ಫುಮ್ಡಿ ಎಂದು ಕರೆಯಲಾಗುತ್ತದೆ. ಈ ಫುಮ್ಡಿಗಳು ಕೆಲವು ಕಡೆ ಸಾಕಷ್ಟು ಗಟ್ಟಿಯಾಗಿವೆ. ಈ ತೇಲುವ ಫುಮ್ಡಿಯಲ್ಲಿ ಸಾಕಷ್ಟು ಜೀವರಾಶಿಗಳು ತಮ್ಮ ಬದುಕು ಕಟ್ಟಿಕೊಂಡಿವೆ. ಬಲು ಅಪರೂಪದ ಸಂಗೈ ಜಿಂಕೆಗಳ ನೆಲೆ ಇದು. ಇವುಗಳ ನೈಸರ್ಗಿಕ ಆವಾಸಸ್ಥಾನವನ್ನು ರಕ್ಷಿಸುವ ಸಲುವಾಗಿ 1966ರಲ್ಲಿ ಇದನ್ನು ವನ್ಯಜೀವಿ ಅಭಯಾರಣ್ಯವಾಗಿ ರೂಪಿಸಲಾಗಿದೆ. ನಂತರ 1977ರಲ್ಲಿ ಇದು ರಾಷ್ಟ್ರೀಯ ಉದ್ಯಾನವನವಾಗಿತ್ತು. ಈ ಅಪರೂಪದ ಜಿಂಕೆಗಳಲ್ಲದೆ, ಹಲವು ಹಾವುಗಳು, ಸಾಕಷ್ಟು ಪಕ್ಷಿ ಸಂಕುಲಗಳೂ ಇಲ್ಲಿ ನೆಲೆ ಕಂಡುಕೊಂಡಿವೆ. ಇದನ್ನು `ಬರ್ಡ್ ಪ್ಯಾರಡೈಸ್’ ಎಂದೂ ಕರೆಯಲಾಗುತ್ತದೆ. ಇದು ಮಣಿಪುರದ ಪ್ರವಾಸಿ ಸ್ಥಳ ಕೂಡಾ ಹೌದು.



