ಏಕಾದಶಿ ದೇವಿಯ ಸೃಷ್ಟಿಯ ಕಥೆ
ದಾನವ ಕುಲದಲ್ಲಿ ಒಬ್ಬ ಬಲಶಾಲಿ ದೈತ್ಯನ ಜನನವಾಗಿತ್ತು. ಅವನ ಹೆಸರೇ ಮುರ. ಬಾಲ್ಯದಿಂದಲೇ ಇಂದ್ರನನ್ನು ಸೋಲಿಸುವ ಕನಸು ಕಂಡಿದ್ದ ಮುರ ಬ್ರಹ್ಮ ದೇವರ ಕುರಿತು ಘೋರ ತಪಸ್ಸನ್ನು ಮಾಡಿದ. ಈತನ ತಪಸ್ಸಿಗೆ ಪ್ರಸನ್ನರಾಗಿ ಬ್ರಹ್ಮ ದೇವರು ಪ್ರತ್ಯಕ್ಷರಾದಾಗ ಈತ ತಾನು ಅಜೇಯನಾಗಿರಬೇಕು ಎಂಬ ವರ ಕೇಳಿದ್ದ. `ನನ್ನನ್ನು ಯಾವುದೇ ದೇವತೆಗಳು, ದಾನವರು ಸಾಯಿಸಬಾರದು, ದೇವತೆಗಳ ಯಾವುದೇ ಅಸ್ತ್ರವು ನನ್ನ ಮೇಲೆ ಪ್ರಭಾವ ಬೀರಬಾರದು’ ಎಂಬ ವರವದು.
ಈ ವರಬಲದಿಂದ ಮೆರೆದಾಡುತ್ತಿದ್ದ ಮುರ ಸ್ವರ್ಗಲೋಕದ ಮೇಲೂ ದಾಳಿ ಮಾಡಿ ಇಂದ್ರನನ್ನು ಸೋಲಿಸಿದ್ದ. ಹೀಗಾಗಿ ದೇವತೆಗಳೆಲ್ಲಾ ರಕ್ಷಿಸುವಂತೆ ವಿಷ್ಣು ದೇವರ ಮೊರೆ ಹೋದರು. ದೇವತೆಗಳ ಕಷ್ಟವನ್ನು ಕಂಡು ಭಗವಾನ್ ವಿಷ್ಣು ಸ್ವರ್ಗಲೋಕಕ್ಕೆ ಬಂದು ಮುರಾಸುರನೊಂದಿಗೆ ಕಾಳಗಕ್ಕೆ ನಿಂತರು. ವಿಷ್ಣು ದೇವರು ಹಾಗೂ ಮುರಾಸುರನ ನಡುವೆ ಭಯಂಕರ ಯುದ್ಧ ಶುರುವಾಯಿತು.
ವಿಷ್ಣು ದೇವರು ತಮ್ಮ ಎಲ್ಲಾ ಅಸ್ತ್ರಗಳನ್ನು ಪ್ರಯೋಗಿಸಿ ಮುರಾಸುರನ ಅಸ್ತ್ರಗಳನ್ನು ವಿಫಲಗೊಳಿಸುತ್ತಿದ್ದರೂ ಈತ ಸಾಯುತ್ತಿರಲಿಲ್ಲ. ಬ್ರಹ್ಮ ದೇವರ ವರದಿಂದ ಮುರಾಸುರ ಸಾವನ್ನಪ್ಪುತ್ತಿರಲಿಲ್ಲ. ಹೀಗಾಗಿ ವಿಷ್ಣು ದೇವರು ತನ್ನ ರಣನೀತಿಯನ್ನು ರೂಪಿಸಿದರು. ಅದೇನೆಂದರೆ ಒಂದು ರಹಸ್ಯಮಯ ಗುಹೆಯನ್ನು ಹೊಕ್ಕು ಯೋಗ ನಿದ್ರೆ ಮಾಡಿದರು. ವಿಷ್ಣು ದೇವರನ್ನು ಬೆನ್ನಟ್ಟಿಕೊಂಡು ಬಂದಿದ್ದ ಮುರಾಸುರನು ಮಲಗಿದ್ದ ಭಗವಾನ್ ವಿಷ್ಣುವನ್ನು ಕಂಡಿದ್ದ. ಹೀಗಾಗಿ ಈ ರಕ್ಕಸ ವಿಷ್ಣು ದೇವರ ಮೇಲೆ ದಾಳಿಗೆ ಮುಂದಾದಾಗ ವಿಷ್ಣು ದೇವರ ಶರೀರದಿಂದ ದೇವಿಯೊಬ್ಬರು ಪ್ರತ್ಯಕ್ಷರಾದರು.
ಇದು ವಿಷ್ಣು ದೇವರ ತಂತ್ರವಾಗಿತ್ತು. ಯಾಕೆಂದರೆ ಈಗ ಇರುವ ದೇವತೆಗಳಿಂದ ಮರಣ ಬರಬಾರದು ಎಂಬ ವರವನ್ನು ಮುರ ಪಡೆದಿದ್ದ. ಆದರೆ ಈ ವರ ಪಡೆಯುವಾಗ ಈ ದೇವಿಯು ಬ್ರಹ್ಮಾಂಡದಲ್ಲಿ ಇರಲಿಲ್ಲ. ಈ ಕ್ಷಣವೇ ಈ ದೇವಿಯ ಸೃಷ್ಟಿಯಾಗಿತ್ತು. ಹೀಗೆ ಸೃಷ್ಟಿಯಾದ ದೇವಿಯು ಈ ಅಸುರನನ್ನು ವಧಿಸಿದರು. ಬಳಿಕ ಯೋಗ ನಿದ್ದೆಯಿಂದ ವಿಷ್ಣು ದೇವರು ಪ್ರಸನ್ನರಾಗಿ ಈ ದೇವಿಗೆ `ಏಕಾದಶಿ’ ಎಂಬ ಹೆಸರಿಟ್ಟರು ಎನ್ನುತ್ತದೆ ಈ ಪೌರಾಣಿಕ ಕಥೆ.
ಮುರ ಎಂಬ ರಕ್ಕಸನ ಬಗ್ಗೆ ಇನ್ನೊಂದು ಕಥೆ ಇದೆ. ನರಕಾಸುರನ ವಧೆಯ ಸಂದರ್ಭದಲ್ಲಿ ನಡೆದ ಸನ್ನಿವೇಶ ಇದು. ಅದೇನೆಂದರೆ ಶ್ರೀಕೃಷ್ಣ ದೇವರು ರಾಕ್ಷಸ ಸೇನಾಪತಿ ಮುರನನ್ನು ತನ್ನ ಸುದರ್ಶನ ಚಕ್ರದಿಂದ ಶಿರಚ್ಛೇದ ಮಾಡಿದರು. ಹೀಗಾಗಿಯೇ ಶ್ರೀಕೃಷ್ಣ ದೇವರನ್ನು ಮುರಾರಿ ಎಂದು ಕರೆಯಲಾಗುತ್ತದೆ ಎನ್ನುವುದು ನಂಬಿಕೆ. ಏನೇ ಆದರೂ ಶ್ರೀಕೃಷ್ಣ(ವಿಷ್ಣು) ದೇವರ ಲೀಲೆಯ ಅಂತಿಮ ಉದ್ದೇಶ ಲೋಕಕಲ್ಯಾಣವೇ ಆಗಿತ್ತು ಎನ್ನುವುದು ಸತ್ಯ.



