ಶಿವ-ಪಾರ್ವತಿ ದೇವರು ವಿವಾಹ ಆಗಿದ್ದು ಇದೇ ಜಾಗದಲ್ಲಿಯಂತೆ!
ಭಾರತದಲ್ಲಿ ಪ್ರತಿಯೊಂದು ಪುಣ್ಯಕ್ಷೇತ್ರಕ್ಕೂ ಅದರದ್ದೇ ಆದ ಇತಿಹಾಸ, ಐತಿಹ್ಯ, ಸ್ಥಳಪುರಾಣಗಳಿರುತ್ತವೆ. ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ತ್ರಿಯುಗಿನಾರಾಯಣ ದೇಗುಲದ ಹಿಂದೆಯೂ ಇಂತಹದ್ದೇ ನಂಬಿಕೆಯ ಕಥೆ ಇದೆ.
ಹೃಷಿಕೇಷದಿಂದ ಸುಮಾರು 250 ಕಿ.ಮೀ ದೂರದಲ್ಲಿ ಈ ದೇಗುಲ ಇದೆ. ಇದು ಭಗವಾನ್ ವಿಷ್ಣುವಿಗೆ ಸಮರ್ಪಿತ ದೇವಸ್ಥಾನವಾಗಿದೆ. ವಿಷ್ಣು ದೇವರಿಗೆ ಸಮರ್ಪಿತ ದೇವಸ್ಥಾನವಾದರೂ ಇದನ್ನು ಶಿವ-ಪಾರ್ವತಿಯ ವಿವಾಹದ ಸ್ಥಳ ಎಂದೇ ಹೆಚ್ಚಾಗಿ ಗುರುತಿಸಲಾಗುತ್ತದೆ. ಹಲವು ಯುಗಗಳ ಹಿಂದೆ ಶಿವ ಹಾಗೂ ಪಾರ್ವತಿ ದೇವರು ವಿವಾಹವಾದ ಸ್ಥಳ ಇದು ಎನ್ನುತ್ತದೆ ಇಲ್ಲಿನ ಸ್ಥಳಪುರಾಣ.
ಇದೇ ಕಾರಣದಿಂದ ಈ ದೇಗುಲಕ್ಕೆ ತ್ರಿಯುಗಿ ನಾರಾಯಣ ದೇವಸ್ಥಾನ ಎಂಬ ಹೆಸರು ಬಂದಿದೆ. ತ್ರಿ ಎಂದರೆ ಮೂರು, ಯುಗಿ ಎಂದರೆ ಯುಗ ಹಾಗೂ ನಾರಾಯಣ ಎನ್ನುವುದು ವಿಷ್ಣು ದೇವರ ಹೆಸರು. ಈ ದೇಗುಲದ ಆವರಣದಲ್ಲಿ ನಿರಂತರವಾಗಿ ಬೆಂಕಿ ಉರಿಯುತ್ತದೆ. ಇದನ್ನು ಧೂನಿ ಎಂದು ಸ್ಥಳೀಯವಾಗಿ ಕರೆಯುತ್ತಾರೆ. ಇದು ಶಿವ ಪಾರ್ವತಿಯ ವಿವಾಹದ ಸಂದರ್ಭದಲ್ಲಿ ಬೆಳಗಿಸಿರುವ ಬೆಂಕಿ ಎಂಬುದು ನಂಬಿಕೆ.
ಸ್ಥಳೀಯ ನಂಬಿಕೆಯ ಪ್ರಕಾರ, ವಿವಾಹವನ್ನು ನೆರವೇರಿಸಲು ಬ್ರಹ್ಮ ದೇವರು ಪೌರೋಹಿತ್ಯದ ಕಾರ್ಯ ನೆರವೇರಿಸಿದ್ದರಂತೆ. ಭಗವಾನ್ ವಿಷ್ಣು ವಧುವಿನ ಸಹೋದರನು ಮಾಡಬೇಕಾದ ಎಲ್ಲಾ ಕರ್ತವ್ಯವನ್ನು ನಿರ್ವಹಿಸಿದನಂತೆ. ವಿವಾಹ ಸ್ಥಳದಲ್ಲಿ ಅದರ ನಿಖರವಾದ ಸ್ಥಳವನ್ನು ಗುರುತಿಸಲು ಬ್ರಹ್ಮ ಶಿಲೆ ಎಂಬ ಕಲ್ಲು ಇದೆ. ಇದೇ ಕಾರಣದಿಂದ ಸಾಕಷ್ಟು ಮಂದಿ ಇಲ್ಲಿಯೇ ವಿವಾಹವಾಗಲು ದೇಗುಲಕ್ಕೆ ಆಗಮಿಸುತ್ತಾರೆ. ಈ ಮೂಲಕ ಈ ಪವಿತ್ರ ಅಗ್ನಿಯ ಮುಂದೆ ತಮ್ಮ ಹೊಸ ಜೀವನ ಆರಂಭಿಸುತ್ತಾರೆ.
ತ್ರಿಯುಗಿನಾರಾಯಣ ದೇವಸ್ಥಾನವು ವಾಸ್ತುಶಿಲ್ಪದ ದೃಷ್ಟಿಯಿಂದ ಪ್ರಸಿದ್ಧ ಕೇದಾರನಾಥ ದೇವಸ್ಥಾನದಂತೆ ಕಾಣುತ್ತದೆ. ಈ ದೇವಾಲಯವು ಸೋನ್‍ಪ್ರಯಾಗದಿಂದ 12 ಕಿ.ಮೀ ದೂರದಲ್ಲಿದ್ದು, ವಾಹನ ಸಂಚಾರಕ್ಕೆ ಅನುಕೂಲಕರವಾದ ರಸ್ತೆ ಇದೆ. ಭಕ್ತರು ಸೋನ್‍ಪ್ರಯಾಗದ ಮೂಲಕ 5 ಕಿ.ಮೀ. ಚಾರಣದ ಮೂಲಕವೂ ಇಲ್ಲಿಗೆ ತಲುಪಬಹುದು. ಗೌರಿ ಕುಂಡದಿಂದ ಈ ದೇವಸ್ಥಾನ ಸುಮಾರು 45 ನಿಮಿಷಗಳ ಪ್ರಯಾಣದ ದೂರದಲ್ಲಿದೆ.



