ಗಂಗಾ ದಸರಾದ ಬಗ್ಗೆ ಕೇಳಿದ್ದೀರಾ? : ಏನಿದರ ವಿಶೇಷತೆ…?
ಹಿಂದೂ ಕ್ಯಾಲೆಂಡರ್ ಪ್ರಕಾರ ಗಂಗಾ ದಸರಾವನ್ನು ಜ್ಯೇಷ್ಠ ಮಾಸದ ಶುಕ್ಲ ಪಕ್ಷದ 10ನೇ ದಿನ (ದಶಮಿ ತಿಥಿ) ಆಚರಿಸಲಾಗುತ್ತದೆ. ಗಂಗಾ ಮಾತೆಯನ್ನು ಗೌರವಿಸುವ ಸಲುವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಗಂಗಾ ದೇವಿಯು ಭೂಮಿಗೆ ಇಳಿದ ಶುಭ ದಿನ ಎಂದೂ ನಂಬಲಾಗುತ್ತದೆ. ಈ ವರ್ಷ 2026ರ ಮೇ 25 ರಂದು ಗಂಗಾ ದಸರಾವನ್ನು ಆಚರಿಸಲಾಗುತ್ತಿದೆ. ಪವಿತ್ರ ಗಂಗೆ ಭೂಮಿಗೆ ಇಳಿದಿರುವುದಕ್ಕೆ ಒಂದು ಹಿನ್ನೆಲೆಯೂ ಇದೆ.
ಸಗರನೆಂಬ ಚಕ್ರವರ್ತಿ 99 ಅಶ್ವಮೇಧ ಯಾಗಗಳನ್ನು ಮಾಡಿದ್ದ. ಇತ್ತ, ಸಗರ ಇನ್ನು ಒಂದು ಯಾಗ ಮಾಡಿದರೆ ಅವನು ಸ್ವರ್ಗದ ಒಡೆಯನಾಗಬಹುದು ಎಂಬ ಭೀತಿ ಇಂದ್ರನನ್ನು ಕಾಡಿತ್ತು. ಹೀಗಾಗಿ ಇಂದ್ರನು ಯಾಗದ ಕುದುರೆಯನ್ನು ಅಪಹರಿಸಿ ಪಾತಾಳ ಲೋಕಕ್ಕೆ ಕೊಂಡೊಯ್ದು ತಪಸ್ಸು ನಿರತ ಕಪಿಲ ಮುನಿಯ ಆಶ್ರಮದ ಹಿಂಭಾಗದಲ್ಲಿ ಕಟ್ಟಿ ಹಾಕಿದ್ದ. ಅನೇಕ ವರ್ಷ ಧ್ಯಾನದಲ್ಲಿ ಮಗ್ನರಾಗಿದ್ದ ಕಪಿಲ ಋಷಿಗಳು ಇದನ್ನು ಗಮನಿಸಲಿಲ್ಲ.
ಈ ಸಗರನಿಗೆ 60 ಸಾವಿರ ಮಂದಿ ಮಕ್ಕಳಿದ್ದರು. ಇವರೆಲ್ಲರೂ ಯಾಗದ ಕುದುರೆಯನ್ನು ಹುಡುಕಿಕೊಂಡು ಬಂದು ಕೊನೆಗೆ ಪಾತಾಳಕ್ಕೆ ಬಂದಾಗ ಕಪಿಲ ಋಷಿಗಳ ಆಶ್ರಮದಲ್ಲಿ ಕುದುರೆಯನ್ನು ಕಂಡಿದ್ದರು. ಇದನ್ನು ನೋಡಿ ಕಪಿಲ ಮುನಿಗಳೇ ಕುದುರೆಯನ್ನು ಕದ್ದಿದ್ದಾರೆ ಎಂದು ಭಾವಿಸಿ ಇವರು ಅವರ ತಪಸ್ಸಿಗೆ ಭಂಗ ತಂದಿದ್ದರು. ದೀರ್ಘಕಾಲ ಘೋರ ತಪಸ್ಸಿನಲ್ಲಿದ್ದ ಕಪಿಲ ಋಷಿಗಳು ಕಣ್ತೆರೆದಾಗ ಅಲ್ಲಿಂದ ಹೊರಸೂಸಿದ ಬೆಂಕಿಯಲ್ಲಿ ಆ ಅರುವತ್ತು ಸಾವಿರ ಜನರೂ ಸುಟ್ಟು ಭಸ್ಮವಾಗಿದ್ದರು.
ಇತ್ತ ಕುದುರೆ ಹುಡುಕಲು ಹೋದ ತನ್ನ ಪೂರ್ವಜರು ಬಹುಕಾಲ ಬರದೇ ಇದ್ದಾಗ ಸಗರನ ಮೊಮ್ಮಗ ಅಂಶುಮಂತ ಇವರನ್ನು ಹುಡುಕಿಕೊಂಡು ಕಪಿಲ ಋಷಿಗಳ ಆಶ್ರಮಕ್ಕೆ ಬಂದಿದ್ದ. ಇಲ್ಲಿ ಇವನಿಗೆ ನಡೆದ ಸಂಗತಿ ತಿಳಿಯಿತು. ಆಗ ಕಪಿಲರು ಭಸ್ಮವಾದ ಸಗರನ ಪುತ್ರರಿಗೆ ಮೋಕ್ಷ ಸಿಗಬೇಕಾದರೆ, ಸ್ವರ್ಗದಿಂದ ಗಂಗೆ ಇಳಿದು ಬಂದು ಅವರು ಸುಟ್ಟು ಹೋದ ಬೂದಿಗಳನ್ನು ಕೊಚ್ಚಿಕೊಂಡು ಹೋಗಬೇಕು ಎಂದು ಹೇಳಿದರು.
ಈ ವಿಷಯವನ್ನು ಅಂಶುಮಂತ ಸಗರನಿಗೆ ತಿಳಿಸಿದ. ಸಗರ ತಪಸ್ಸಿಗಾಗಿ ಕಾಡಿಗೆ ಹೊರಟ. ಗಂಗೆ ಒಲಿಯಲಿಲ್ಲ, ಆಂಶುಮಂತನೂ ತಪ್ಪಸ್ಸು ಮಾಡಿದ. ಆಗಲೂ ಗಂಗೆ ಒಲಿಯಲಿಲ್ಲ. ಇದಾದ ಬಳಿಕ ಅಂಶುಮಂತನ ಮಗ ದಿಲೀಪನೂ ಈ ಕಾರ್ಯದಲ್ಲಿ ವಿಫಲನಾಗಿ ಆ ಜವಾಬ್ದಾರಿಯನ್ನು ಪುತ್ರ ಭಗೀರಥನಿಗೆ ಒಪ್ಪಿಸಿದ.
ಭಗೀರಥ ಗಂಗೆಯನ್ನು ಕರೆತರುವ ಸಂಕಲ್ಪದಲ್ಲಿ ಘೋರ ತಪಸ್ಸನ್ನು ಆಚರಿಸಿದ. ಕೊನೆಗೆ ಈತನ ತಪಸ್ಸಿಗೆ ಮೆಚ್ಚಿ ಬ್ರಹ್ಮನು ಗಂಗೆಯನ್ನು ಕಳುಹಿಸಿದ. ಮೊದಲು ಭೂಮಿಗೆ ಬರಲು ಒಪ್ಪದ ಗಂಗೆ, ಕೊನೆಗೆ `ನನ್ನ ರಭಸಕ್ಕೆ ಭೂಮಿಯೇ ಕೊಚ್ಚಿ ಹೋಗಬಹುದು. ಹೀಗಾಗಿ ನನ್ನ ವೇಗವನ್ನು ತಡೆಯಲು ಶಿವನನ್ನು ತಪಸ್ಸು ಮಾಡಿ ಒಲಿಸಿಕೋ’ ಎಂದು ಹೇಳಿದ್ದಳು. ಅಂತೆಯೇ ಭಗೀರಥ ಶಿವನ ಕುರಿತು ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡ. ಕೊನೆಗೆ ಆಕಾಶದಿಂದ ಧುಮುಕಿದ ಗಂಗೆಯನ್ನು ಶಿವನು ಭೂಮಿಯಲ್ಲಿ ನಿಂತು ತನ್ನ ಜಟೆಯಲ್ಲಿ ಧರಿಸಿದ. ಹೀಗೆ ಸ್ವರ್ಗದಿಂದ ಇಳಿದ ಗಂಗೆ ಪಾತಾಳಲೋಕಕ್ಕೆ ಹರಿದು ಸಗರ ಪುತ್ರರ ದೇಹದ ಬೂದಿಯನ್ನು ತೊಳೆದು ಮೋಕ್ಷಕ್ಕೆ ಕಾರಣಳಾದಳು.
ಭಗೀರಥನ ಕಾರಣದಿಂದ ಗಂಗೆ ಭೂಮಿಗೆ ಬಂದಿದ್ದರಿಂದ ಗಂಗೋತ್ರಿಯ ಮೂಲಕ ಹರಿಯುವ ಗಂಗಾ ನದಿಯ ಭಾಗವನ್ನು ಭಾಗೀರಥಿ ಎಂದು ಕರೆಯಲಾಗುತ್ತದೆ. ಭಗೀರಥನ ಮಹಾನ್ ಪ್ರಯತ್ನವನ್ನು “ಭಗೀರಥ ಪ್ರಯತ್ನ” ಎಂದೂ ಉಲ್ಲೇಖಿಸಲಾಗುತ್ತದೆ.
ಇದೇ ಹಿನ್ನೆಲೆಯಲ್ಲಿ ಗಂಗಾ ದಸರಾವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಗಂಗಾ ಘಾಟ್ಗಳಲ್ಲಿ ಸೇರುವ ಜನ ಗಂಗಾರತಿ ಮಾಡುತ್ತಾರೆ. ಜೊತೆಗೆ ಹರಿದ್ವಾರ, ಋಷಿಕೇಶ, ವಾರಣಾಸಿ ಮತ್ತು ಇತರ ಅನೇಕ ಸ್ಥಳಗಳಲ್ಲಿ ಗಂಗಾ ನದಿಯಲ್ಲಿ ಪವಿತ್ರ ಸ್ನಾನವನ್ನೂ ಮಾಡುತ್ತಾರೆ. ಗಂಗಾ ದಸರಾದ ಶುಭ ದಿನದಂದು ಬಡವರಿಗೆ ಆಹಾರ ಮತ್ತು ಬಟ್ಟೆಗಳನ್ನು ದಾನ ಮಾಡಬಹುದು.



