ವಿಶ್ವದ ಅತೀ ಎತ್ತರದ ಈ ದೇವಾಲಯದ ನೆರಳು ಮಧ್ಯಾಹ್ನ ನೆಲಕ್ಕೆ ಬೀಳದು…!
ತಮಿಳುನಾಡಿನಲ್ಲಿ ಸಾವಿರಾರು ವರ್ಷ ಹಿಂದಿನ ಈ ಭವ್ಯ ದೇಗುಲವಿದೆ. ಪುರಾತನ ಎಂಜಿನಿಯರಿಂಗ್ ಕೌಶಲ್ಯಕ್ಕೆ ಈ ದೇವ ಮಂದಿರ ಸಾಕ್ಷಿಯಾಗಿದೆ.
ವಿಶ್ವದ ಅತೀ ಎತ್ತರದ ದೇಗುಲ ಇದು. ಇಷ್ಟಿದ್ದರೂ ಸುಡು ಬಿಸಿಲಿನಲ್ಲೂ ಈ ದೇಗುಲದ ನೆರಳು ಮಧ್ಯಾಹ್ನ ನೆಲಕ್ಕೇ ಬೀಳದು…! ದೇವಾಲಯದ ನೆರಳೇ ಬೀಳದ ರೀತಿಯಲ್ಲಿ ಇದನ್ನು ನಿರ್ಮಿಸಲಾಗಿದೆ…!
ತಮಿಳುನಾಡಿನ ತಂಜಾವೂರು ನಗರದಲ್ಲಿದೆ ಅದ್ಭುತ ದೇವಸ್ಥಾನ. ಅದೇ ಬೃಹದೀಶ್ವರ ದೇಗುಲ. ತಂಜಾವೂರಿನ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ಆಕರ್ಷಣೆಗಳಲ್ಲಿ ಈ ಪುರಾತನ ದೇಗುಲ ಕೂಡಾ ಒಂದು. ಚೋಳದ ಕಾಲದಲ್ಲಿ ತಂಜಾವೂರು ಪ್ರಮುಖ ನಗರವಾಗಿತ್ತು. ಪ್ರಾಚೀನ ಕಾಲದಲ್ಲಿ ತಂಜಾವೂರನ್ನು `ಅನ್ನದ ಬಟ್ಟಲು’ ಎಂದೇ ಕರೆಯುತ್ತಿದ್ದರು. ಇಂತಹ ಸ್ಥಳದಲ್ಲಿದೆ ಬೃಹದೀಶ್ವರ ದೇಗುಲ.
ಈ ದೇಗುಲಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ದೇಗುಲದ ನಿರ್ಮಾಣವೇ ಒಂದು ಕೌತುಕ. `ದೊಡ್ಡ ದೇವಾಲಯ’ ಎಂದೂ ಇದನ್ನು ಕರೆಯಲಾಗುತ್ತದೆ. ಈ ದೇವಾಲಯದ ಗೋಪುರವು 216 ಅಡಿ ಎತ್ತರ ಇದೆ. ತಂಜಾವೂರಿನಲ್ಲಿ ಹೆಚ್ಚು ಜನರು ಭೇಟಿ ನೀಡುವ ಸ್ಥಳ ಕೂಡಾ ಇದು. ಅಷ್ಟದಿಕ್ಪಾಲಕರು ಅಥವಾ ದಿಕ್ಕುಗಳ ಅಧಿಪತಿಗಳಾದ – ಇಂದ್ರ, ಅಗ್ನಿ, ನಿರೃತಿ, ವರುಣ, ಕುಬೇರ, ಈಶಾನ, ಯಮ ಮತ್ತು ವಾಯುವಿನ ಮೂರ್ತಿಯನ್ನು ಹೊಂದಿರುವ ಈ ದೇಗುಲ ಅಪರೂಪದ್ದಾಗಿದೆ. ಇದರ ವಾಸ್ತುಶಿಲ್ಪದ ಬಗ್ಗೆ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ದೇವಾಲಯದ ವಿಮಾನ (ಗರ್ಭಗೃಹದ ಮೇಲಿರುವ ಗೋಪುರ) ಗೋಪುರ ಮಧ್ಯಾಹ್ನದ ಸಮಯದಲ್ಲಿ ನೆರಳು ನೀಡುವುದಿಲ್ಲ. ದೇವಾಲಯವು ಸಂಪೂರ್ಣವಾಗಿ ಗ್ರಾನೈಟ್ನಿಂದ ಮಾಡಲ್ಪಟ್ಟಿದೆ. ವರ್ಷದ ಯಾವುದೇ ಸಂದರ್ಭದಲ್ಲಿ ಮಧ್ಯಾಹ್ನ ಇದರ ನೆರಳು ನೆಲಕ್ಕೆ ಬೀಳದಂತೆ ಈ ದೇಗುಲವನ್ನು ವಿನ್ಯಾಸಗೊಳಿಸಲಾಗಿದೆ. ಶಿವ ದೇವರಿಗೆ ಸಮರ್ಪಿತವಾದ ದೇವಸ್ಥಾನವಿದು. ಇದು ದಕ್ಷಿಣ ಭಾರತದ ಪ್ರಮುಖ ದೇವಸ್ಥಾನ ಕೂಡಾ ಹೌದು. ಶಿವ ದೇವರ ಪರಿವಾರವನ್ನೂ ಇಲ್ಲಿ ನೋಡಬಹುದು. ಪಾರ್ವತಿ, ನಂದಿ, ಗಣೇಶ ಮತ್ತು ಕಾರ್ತಿಕೇಯನ ದೇಗುಲಗಳೂ ಇಲ್ಲಿವೆ.
ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ `ಗೇಟ್ ಲಿವಿಂಗ್ ಚೋಳ ಟೆಂಪಲ್ಸ್’ ಎಂದು ಕರೆಸಿಕೊಳ್ಳುವ ಈ ಪ್ರದೇಶ ಹಲವಾರು ದೇಗುಲಗಳ ಸಮೂಹದಲ್ಲಿ ಈ ಭವ್ಯ ಮಂದಿರ ಕೂಡಾ ಪ್ರಮುಖವಾದದ್ದು. ಸುಮಾರು 1000 ವರ್ಷಗಳ ಹಿಂದೆ 11ನೇ ಶತಮಾನದಲ್ಲಿ ಈ ದೇಗುಲವನ್ನು ನಿರ್ಮಿಸಲಾಗಿತ್ತು. ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಇಲ್ಲಿ ನೋಡಬಹುದು. ಈ ದೇವಸ್ಥಾನ ನಮ್ಮ ಪ್ರಾಚೀನರ ಎಂಜಿನಿಯರಿಂಗ್ ಕೌಶಲ್ಯಕ್ಕೂ ಉದಾಹರಣೆಯಾಗಿದೆ.
ಯಾಕೆ ನೆರಳು ಬೀಳದು…?
ವಿಮಾನ (ಗರ್ಭಗೃಹದ ಮೇಲೆ ನಿರ್ಮಿಸಲಾದ ಗೋಪುರದಂತಹ ರಚನೆ)ದ ಅಡಿಯ ಭಾಗ ಮೇಲಿನ ಭಾಗಕ್ಕಿಂತ ದೊಡ್ಡದಾಗಿದೆ. ಇದೇ ರೀತಿಯಲ್ಲಿ ಈ ಗೋಪುರವನ್ನು ನಿರ್ಮಾಣ ಮಾಡಲಾಗಿದೆ. ಹೀಗಾಗಿ, ಮಧ್ಯಾಹ್ನದ ಬಿಸಿಲಿನಿಂದ ಉಂಟಾಗುವ ನೆರಳು ಗೋಪುರದ ಅಡಿಯ ಭಾಗದಲ್ಲೇ ಸೇರುತ್ತದೆ. ಹೀಗಾಗಿ, ನೆರಳು ನೆಲಕ್ಕೆ ಬೀಳುವುದಿಲ್ಲ ಎನ್ನಲಾಗುತ್ತಿದೆ. ಈ ನೆರಳು ಬೆಳಕಿನ ಅದ್ಭುತ ಜ್ಞಾನ ಮತ್ತು ವಾಸ್ತುಶಿಲ್ಪಿಯ ಕೌಶಲ್ಯ ಬೆರಗು ಮೂಡಿಸದೇ ಇರದು.
ದೇವಸ್ಥಾನವಲ್ಲ, ನೆರಳೂ ಬೀಳದು ಎಂದಿದ್ದರಂತೆ ವಾಸ್ತುಶಿಲ್ಪಿ
ಈ ದೇಗುಲದ ಹಿಂದೆ ದಂತಕಥೆಯೊಂದಿದೆ. ಅದೇನೆಂದರೆ, ದೇಗುಲ ಪೂರ್ಣಗೊಂಡಾಗ ಅರಸ ರಾಜರಾಜ ಚೋಳ `ಈ ದೇವಾಲಯವು ಎಂದಾದರೂ ಬೀಳುತ್ತದೆಯೇ’ ಎಂದು ವಾಸ್ತುಶಿಲ್ಪಿಯನ್ನು ಕೇಳಿದ್ದರಂತೆ. ಅದಕ್ಕೆ ಆ ವಾಸ್ತುಶಿಲ್ಪಿ, `ದೇವಾಲಯ ಅಲ್ಲ, ಇದರ ನೆರಳೂ ನೆಲಕ್ಕೆ ಬೀಳುವುದಿಲ್ಲ’ ಎಂದು ಅಷ್ಟು ಸದೃಢ ನಿರ್ಮಾಣವಿದು ಎಂಬ ವಿಶ್ವಾಸದಲ್ಲಿ ಹೇಳಿದ್ದರಂತೆ. ಹೀಗೊಂದು ಐತಿಹ್ಯ ಕೂಡಾ ಇದೆ.
ನೀವು ತಮಿಳುನಾಡಿನ ಪ್ರವಾಸ ಕೈಗೊಂಡರೆ ತಂಜಾವೂರಿನ ಈ ಭವ್ಯ ದೇಗುಲಕ್ಕೆ ಹೋಗುವುದನ್ನು ಮರೆಯಬೇಡಿ.



