ಶ್ರೀಕೃಷ್ಣನು ಬಲಶಾಲಿ ಹನುಮಾನ್ ಮೂಲಕ ಗರುಡ, ಸುದರ್ಶನ ಚಕ್ರ, ಸತ್ಯಭಾಮಾಳ ಅಹಂ ಮುರಿದದ್ದು ಹೇಗೆ?
ಒಮ್ಮೆ ವಿಷ್ಣುವಿನ ವಾಹನ ಗರುಡನು ತನ್ನ ಶಕ್ತಿ ಸಾಮಥ್ರ್ಯದ ಬಗ್ಗೆ ಬಹಳಷ್ಟು ಹೆಮ್ಮೆ ಪಟ್ಟುಕೊಂಡಿದ್ದನು. `ನನಗಿಂತ ವೇಗವಾಗಿ ಸಾಗುವವರು ಯಾರೂ ಇಲ್ಲ’ ಎಂಬ ಅಹಂ ಗರುಡನ ತಲೆಗೆ ಬಂದಿತ್ತು. ಶ್ರೀಕೃಷ್ಣನ ಬಳಿ ಬಂದ ಗರುಡನು ಇದೇ ಪ್ರಶ್ನೆಯನ್ನು ಶ್ರೀಕೃಷ್ಣನ ಬಳಿಯೂ `ಪ್ರಭು ಈ ಜಗತ್ತಿನಲ್ಲಿ ನನಗಿಂತ ವೇಗವಾಗಿ ಸಾಗುವವರು ಯಾರಾದರೂ ಇದ್ದಾರೆಯೇ’ ಎಂದು ಕೇಳಿದ್ದ. ಇದನ್ನು ಕೇಳಿ ನಸುನಕ್ಕ ಭಗವಾನ್ ಶ್ರೀಕೃಷ್ಣರು ಏನೂ ಹೇಳದೆ ಅಲ್ಲಿಂದ ಹೊರಟು ಹೋಗಿದ್ದರು…
ಮತ್ತೊಂದೆ, ಶ್ರೀಕೃಷ್ಣನ ಅಸ್ತ್ರ ಸುದರ್ಶನ ಚಕ್ರಕ್ಕೂ `ತನಗಿಂತ ಶಕ್ತಿಶಾಲಿ ಯಾರೂ ಇಲ್ಲ’ ಎಂಬ ಅಹಂ ಮೂಡಿತ್ತು. ಸುದರ್ಶನನೂ ಕೂಡಾ ಶ್ರೀಕೃಷ್ಣನ ಬಳಿ `ಈ ಸೃಷ್ಟಿಯಲ್ಲಿ ತನಗಿಂತ ಶಕ್ತಿಶಾಲಿಯಾದ ಬೇರೆ ಯಾವುದಾದರೂ ಅಸ್ತ್ರ ಇದೆಯೇ’ ಎಂದು ಪ್ರಶ್ನಿಸಿದ್ದ. ಆಗಲೂ ಶ್ರೀಕೃಷ್ಣ ಏನೂ ಮಾತನಾಡದೆ ರಹಸ್ಯಮಯ ನಗು ನಕ್ಕು ಅಲ್ಲಿಂದ ಹೊರಡುತ್ತಾರೆ…
ಇದನ್ನೆಲ್ಲಾ ಕೇಳಿ ಸತ್ಯಭಾಮಾ ಕೂಡಾ `ತ್ರೇತಾಯುಗದಲ್ಲಿ ನಿಮ್ಮ ಪತ್ನಿಯಾಗಿದ್ದ ಸೀತಾ ದೇವಿಗಿಂತಲೂ ನಾನು ಸುಂದರಿ ಅಲ್ವಾ?. ಈ ಯುಗದಲ್ಲಿ ನನಗಿಂತ ರೂಪವತಿ ಯಾರಿದ್ದಾರೆ’ ಎಂದು ಕೇಳಿದ್ದಳು.
ಇದನ್ನೆಲ್ಲಾ ಕೇಳಿ ಶ್ರೀಕೃಷ್ಣ ದೇವರು ಇವರ ಅಹಂಕಾರವನ್ನು ಮುರಿಯಲು ಇದೇ ಸಮಯ ಎಂದು ನಿರ್ಧರಿಸಿದ್ದರು.
ಮೊದಲು ಗರುಡನನ್ನು ಕರೆದ ಭಗವಾನ್ ಶ್ರೀಕೃಷ್ಣ, ಹಿಮಾಲಯದ ಗುಹೆಯೊಂದರಲ್ಲಿ ಹನುಮಾನ್ ಎಂಬ ಮಹಾನ್ ಒಬ್ಬರು ತಪಸ್ಸು ಮಾಡುತ್ತಿದ್ದಾರೆ. ಅವರ ಬಳಿ ಹೋಗಿ `ದ್ವಾರಕದಲ್ಲಿ ಸೀತೆ ಹಾಗೂ ರಾಮ ನಿಮಗಾಗಿ ಕಾಯುತ್ತಿದ್ದಾರೆ’ ಎಂದು ಹೇಳಿ ಕಳುಹಿಸಿದರು.
ಇತ್ತ, ಸುದರ್ಶನ ಚಕ್ರವನ್ನು ಕರೆದು `ದ್ವಾರದಲ್ಲಿ ನಿಲ್ಲು, ಎಷ್ಟೇ ಮಹಾನ್ ವ್ಯಕ್ತಿಗಳು ಬಂದರೂ ಅವರನ್ನು ಒಳಗೆ ಬಿಡಬೇಡ’ ಎಂದು ಆಜ್ಞೆ ಇತ್ತರು.
ಮತ್ತೊಂದು ಕಡೆ, ಸತ್ಯಭಾಮಾಳನ್ನು ಕರೆದು, ನೀನು ಮಹಾರಾಣಿ ರೀತಿ ಸಿದ್ಧವಾಗಿರು ಎಂದು ತಿಳಿಸಿದರು.
ಇತ್ತ, ಗರುಡನು ಹಿಮಾಲಯಕ್ಕೆ ತಲುಪಿ, ತಪಸ್ಸು ಮಾಡುತ್ತಿದ್ದ ಹನುಮಂತ ದೇವರನ್ನು ಕಂಡು `ನಿಮಗಾಗಿ ಸೀತೆ ಹಾಗೂ ರಾಮರು ಕಾಯುತ್ತಿದ್ದಾರೆ’ ಎಂಬ ವಿಷಯ ತಿಳಿಸಿದನು. ಇದನ್ನು ಕೇಳಿದ ತಕ್ಷಣ ಹನುಮಂತ ದೇವರು ಗರುಡನಿಗಿಂತ ಸಾವಿರಾರು ಪಟ್ಟು ವೇಗದಲ್ಲಿ ಸಾಗಿದ್ದರು. ಇದನ್ನು ನೋಡಿ ಗರುಡನು ಆಶ್ಚರ್ಯಚಕಿತನಾಗಿದ್ದನು. ಜೊತೆಗೆ ಗರುಡನು ದ್ವಾರಕಾ ತಲುಪುವ ಮೊದಲೇ ಹನುಮಂತ ದೇವರು ಶ್ರೀಕೃಷ್ಣರನ್ನು ಭೇಟಿಯಾಗಿದ್ದರು. ಹನುಮನ ಅಪಾರ ಶಕ್ತಿಯಿಂದ ತನ್ನ ಅಹಂ ಛಿದ್ರವಾಗಿದೆ ಎಂದು ಗರುಡ ಅರಿತುಕೊಂಡನು.
ಹೀಗೆ ದ್ವಾರಕಕ್ಕೆ ಬಂದ ಹನುಮಾನ್ ರಾಮನ ರೂಪದಲ್ಲಿ ಕುಳಿತಿದ್ದ ಶ್ರೀಕೃಷ್ಣರಿಗೆ ಪ್ರಣಾಮ ಮಾಡಿದರು. ಈ ವೇಳೆ ಶ್ರೀಕೃಷ್ಣ `ದ್ವಾರದಲ್ಲಿ ನಿನ್ನನ್ನು ಯಾರೂ ನಿಲ್ಲಿಸಲಿಲ್ಲವೇ’ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಹನುಮಂತ ದೇವರು, `ಒಂದು ಚಕ್ರ ನನ್ನನ್ನು ತಡೆದು ನಿಲ್ಲಲು ಪ್ರಯತ್ನಿಸಿತು. ಇದರೊಂದಿಗೆ ಯುದ್ಧ ಮಾಡುತ್ತಾ ಕುಳಿತರೆ ನಿಮ್ಮ ದರ್ಶನವನ್ನು ಪಡೆಯುವುದು ತಡವಾಗಬಹುದು ಎಂಬ ಕಾರಣಕ್ಕೆ ಆ ಚಕ್ರವನ್ನು ನನ್ನ ಬಾಯಿಯೊಳಗೆ ಇಟ್ಟಿದ್ದೇನೆ’ ಎಂದು ಹೇಳಿ ಸುದರ್ಶನನನ್ನು ಬಿಡುಗಡೆ ಮಾಡಿದರು. ಈಗ ವಿನಮ್ರನಾದ ಆಯುಧನು ಹನುಮಂತ ದೇವರು ತನ್ನನ್ನು ಸೋಲಿಸಿದರು ಎಂದು ಒಪ್ಪಿಕೊಂಡನು.
ಇತ್ತ, ಶ್ರೀಕೃಷ್ಣನ ಸನಿಹದಲ್ಲಿ ಕುಳಿತಿದ್ದ ಸತ್ಯಭಾಮಾಳನ್ನು ಕಂಡು ಹನುಮಾನ್ `ಸ್ವಾಮಿ ಯಾರು ಇವರು. ನನ್ನ ಮಾತೆ ಸೀತೆ ಎಲ್ಲಿ’ ಎಂದು ಕೇಳಿದರು. ಇದನ್ನು ಕೇಳಿದ ತಕ್ಷಣ ಸತ್ಯಭಾಮಾಳಿಗೆ ಸತ್ಯದ ಅರಿವಾಯಿತು. ನಿಜವಾದ ಭಕ್ತಿಯ ಮುಂದೆ ತನ್ನ ಸೌಂದರ್ಯ ಮತ್ತು ಸ್ಥಾನಮಾನ ಇಲ್ಲ ಎಂದು ಅರಿತುಕೊಂಡಾಗ ಸತ್ಯಭಾಮೆಯ ಅಹಂಕಾರ ಒಡೆದು ನುಚ್ಚುನೂರಾಯಿತು.
ಹೀಗೆ ಹನುಮಂತನ ಮೂಲಕ ಶ್ರೀಕೃಷ್ಣನು ಈ ಮೂವರ ಅಹಂಕಾರವನ್ನು ಒಡೆದದ್ದಲ್ಲದೆ, ಭಕ್ತರಿಗೆ ನಮ್ರತೆಯ ಅಮೂಲ್ಯ ಪಾಠವನ್ನು ಕಲಿಸಿದರು. ನಿಜವಾದ ಶ್ರೇಷ್ಠತೆ ಭಗವಂತನಿಗೆ ಭಕ್ತಿ ಮತ್ತು ಶರಣಾಗತಿಯಲ್ಲಿದೆ ಎಂಬುದನ್ನು ಭಗವಾನ್ ಶ್ರೀಕೃಷ್ಣ ತೋರಿಸಿದರು.



