ಒಬ್ಬರೇ ಒಬ್ಬರು ನನ್ನತ್ತ ನೋಡಲೇ ಇಲ್ಲ!, ಇದು ನನ್ನ ಅಹಂ ಅನ್ನು ಪುಡಿಗಟ್ಟಿದ ಕ್ಷಣ : ರಜನಿಕಾಂತ್ ಅದ್ಭುತ ಮಾತು
ಸೂಪರ್ ಸ್ಟಾರ್ ರಜನಿಕಾಂತ್ ಅವರು ಉತ್ತಮ ವಾಗ್ಮಿಯೂ ಹೌದು. ಇವರ ಹಾಸ್ಯಪ್ರಜ್ಞೆಯೂ ಅದ್ಭುತ. ಹಾಸ್ಯ ಲೇಪಿತ ಮಾತಿನ ಮೂಲಕವೇ ಇವರು ಜೀವನ ಪಾಠವನ್ನು ತಿಳಿಸುವಲ್ಲಿಯೂ ನಿಸ್ಸೀಮ. ಇದೀಗ ರಜನಿಕಾಂತ್ ಅವರು ಇದೇ ರೀತಿಯ ತಮ್ಮ ಅದ್ಭುತ ವಾಗ್ಝರಿಯ ಮೂಲಕ ಗಮನ ಸೆಳೆದಿದ್ದಾರೆ.
ಆರ್ಟ್ ಆಫ್ ಲಿವಿಂಗ್ನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರಜನಿಕಾಂತ್, ಆಧ್ಯಾತ್ಮಿಕತೆಯ ಶಕ್ತಿಯ ಬಗ್ಗೆ ವಿವರಿಸಿದ್ದಾರೆ. ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ನ ತಮ್ಮ ಭೇಟಿ ತಮಗೆ ಕಣ್ಣು ತೆರೆಸುವ ಅನುಭವ ನೀಡಿದೆ ಎಂದು ಅವರು ಹೇಳಿದರು. ಜೊತೆಗೆ `ಒಬ್ಬ ಸ್ಟಾರ್ ಎಂಬ ಅಹಂ ಅನ್ನು ಇದು ಪುಡಿ ಮಾಡಿತು’ ಎಂದ ರಜನಿಕಾಂತ್, ಸ್ಟಾರ್ಡಮ್ ಕ್ಷಣಿಕ ಅಷ್ಟೇ, ಆಧ್ಯಾತ್ಮಿಕ ನೆಮ್ಮದಿಯೇ ಶಾಶ್ವತ ಎಂದು ಹೇಳಿದರು.
“ಹಿಮಾಲಯದ ನಂತರ, ಈ ಆಶ್ರಮದಲ್ಲಿ ಇರುವುದನ್ನು ನಾನು ನಿಜವಾಗಿಯೂ ಆನಂದಿಸುತ್ತೇನೆ. ನಾನು ಎರಡು ದಿನಗಳ ಕಾಲ ಇರಲು ಯೋಜಿಸಿದ್ದೆ, ಆದರೆ ಅದನ್ನು 15 ದಿನಗಳವರೆಗೆ ವಿಸ್ತರಿಸಿದೆ. ಒಂದು ಸಂಜೆ ಗುರುದೇವ್ ತಮ್ಮನ್ನು ನೋಡಲು ಬಂದಿದ್ದ ಸಾವಿರಾರು ಭಕ್ತರಿಗೆ ದರ್ಶನ ನೀಡುವುದಾಗಿ ಹೇಳಿದ್ದರು. ಅವರು ನನ್ನನ್ನು ತಮ್ಮೊಂದಿಗೆ ಬರಲು ಕೇಳಿದ್ದರು. ನಾನು ಅವರೊಂದಿಗೆ ಬರಲು ಹಿಂಜರಿದೆ. ಯಾಕೆಂದರೆ ನಾನು ಬಂದರೆ ಗುರುದೇವ್ ಅವರಿಗೆ ತೊಂದರೆಯಾಗುತ್ತದೆ ಎಂದು ಹೇಳಿದೆ. ಆದರೆ ಇಲ್ಲ ತೊಂದರೆ ಇಲ್ಲ ಬನ್ನಿ ಎಂದು ಕರೆದರು, ನಾನು ಬಂದೆ. ಅನೇಕರು ನನ್ನ ಸುತ್ತಲೂ ಗುಂಪುಗುಂಪಾಗಿ ಬಂದು ನನ್ನ ಆಟೋಗ್ರಾಫ್ ಮತ್ತು ಫೋಟೋಗಳನ್ನು ಕೇಳುತ್ತಾರೆ ಎಂದು ನಾನು ಭಾವಿಸಿದೆ. ಆದರೆ ನಿಜವಾಗಿಯೂ ಹೇಳುತ್ತೇನೆ. ಒಬ್ಬರೇ ಒಬ್ಬರು ನನ್ನತ್ತ ನೋಡಲಿಲ್ಲ.ನಾನೇ ಕೈಬೀಸಿದರೂ ಯಾರೂ ನನ್ನತ್ತ ನೋಡಲಿಲ್ಲ. ನಾನು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ, ಆದರೆ ಇದು ನನ್ನ ಅಹಂಕಾರವನ್ನು ಪುಡಿಮಾಡಿದೆ. ಅದು ಆಧ್ಯಾತ್ಮಿಕತೆಯ ಶಕ್ತಿ ಎಂದು ರಜನಿಕಾಂತ್ ಅವರು ಹಾಸ್ಯದ ದಾಟಿಯಲ್ಲಿ ಹೇಳುತ್ತಿದ್ದಂತೆಯೇ ಇಡೀ ಸಭಾಂಗಣ ಚಪ್ಪಾಳೆ ತಟ್ಟಿತ್ತು.
VIDEO | Recalling his earlier visit to the Art of Living, actor Rajinikanth (@rajinikanth) brought the house down with his humorous take, said, 'nobody even looked at me'.#Rajinikanth pic.twitter.com/JPZGgxtLMv
— Press Trust of India (@PTI_News) May 12, 2026
ಸದ್ಯ ರಜನಿಕಾಂತ್ ತಮ್ಮ ಜೈಲರ್ 2 ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಜೊತೆಗೆ ಇವರ ಕೈಯಲ್ಲಿ ಇನ್ನೂ ಅನೇಕ ಪ್ರಾಜೆಕ್ಟ್ಗಳಿವೆ.



