ಶಿಶುಪಾಲನ ವಧೆ : ಶ್ರೀಕೃಷ್ಣ ದೇವರು ನೀಡಿದ್ದ ನೂರು ಅವಕಾಶಗಳು
ಶಿಶುಪಾಲ ಶ್ರೀಕೃಷ್ಣ ದೇವರ ಸೋದರ ಸಂಬಂಧಿ. ಚೇದಿ ರಾಜ್ಯದ ಅರಸನೀತ. ಶ್ರೀಕೃಷ್ಣ ದೇವರ ಕೈಯಲ್ಲಿಯೇ ಶಿಶುಪಾಲನ ವಧೆಯಾಗುತ್ತದೆ. ಈ ಸೂಚನೆ ಶಿಶುಪಾಲನ ಬಾಲ್ಯದಲ್ಲಿಯೇ ಸಿಕ್ಕಿರುತ್ತದೆ.
ಶಿಶುಪಾಲನು ಹುಟ್ಟುವಾಗ 3 ಕಣ್ಣುಗಳು, 4 ತೋಳುಗಳೊಂದಿಗೆ ಜನಿಸಿದ್ದ. ಈ ವೇಳೆ ಅಶರೀರವಾಣಿಯೊಂದಿಗೆ ಶಿಶುಪಾಲನ ಸಾವಿನ ರಹಸ್ಯವನ್ನು ಹೇಳಿತ್ತು. `ಯಾರ ಮಡಿಲಿನಲ್ಲಿದ್ದಾಗ ಈ ಮಗುವಿನ 3 ಕಣ್ಣುಗಳು, 4 ತೋಳುಗಳು ಮಾಯವಾಗುತ್ತವೆಯೋ, ಅವರಿಂದಲೇ ಈತನಿಗೆ ಮರಣ’ ಎಂಬ ಭವಿಷ್ಯವಾಣಿಯದು .
ಮಗುವನ್ನು ನೋಡಲು ಬಾಲಕ ಶ್ರೀಕೃಷ್ಣ ದೇವರು ಬಂದು ಸ್ಪರ್ಶಿಸಿದಾಗ ಈ ಹೆಚ್ಚುವರಿ ಕಣ್ಣು, ತೋಳುಗಳು ಮಾಯವಾಗಿದ್ದವು. ಇದನ್ನು ಕಂಡು ಕಂಗೆಟ್ಟ ಶಿಶುಪಾಲನ ತಾಯಿ ಶ್ರೀಕೃಷ್ಣ ದೇವರಲ್ಲಿಗೆ ಬಂದು ಮಗನ ಅಪರಾಧಗಳನ್ನು ಕ್ಷಮಿಸುವಂತೆ ಬೇಡಿಕೊಂಡರು. ಈ ವೇಳೆ ಶ್ರೀಕೃಷ್ಣ ದೇವರು ಸೋದರತ್ತೆಗೆ ವಾಗ್ದಾನ ನೀಡಿದ್ದರು. `ಶಿಶುಪಾಲನ ನೂರು ತಪ್ಪುಗಳನ್ನು ತಾನು ಕ್ಷಮಿಸುತ್ತೇನೆ’ ಎಂಬ ವಾಗ್ದಾನ ಅದು.
ಬೆಳೆಯುತ್ತಾ ಶಿಶುಪಾಲನು ಶ್ರೀಕೃಷ್ಣ ದ್ವೇಷಿಯಾಗಿದ್ದನು. ಮೇಲಿಂದ ಮೇಲೆ ತಪ್ಪುಗಳನ್ನು ಮಾಡುತ್ತಲೇ ಇದ್ದನು. ಒಮ್ಮೆ ಪಾಂಡವರು ನಡೆಸಿದ ರಾಜಸೂಯ ಯಾಗದ ವೇಳೆ ಅಗ್ರಪೂಜೆಯನ್ನು ಸ್ವೀಕರಿಸಲು ಶ್ರೀಕೃಷ್ಣ ದೇವರಿಗೆ ಆಹ್ವಾನ ನೀಡಿದರು. ಇದನ್ನು ಸಹಿಸದ ಶಿಶುಪಾಲನು ಸಭೆಯಲ್ಲಿಯೇ ಶ್ರೀಕೃಷ್ಣ ದೇವರನ್ನು ನಿಂದಿಸಲು, ಹೀಯಾಳಿಸಲು ಆರಂಭಿಸಿದ್ದ. ಶ್ರೀಕೃಷ್ಣ ದೇವರು ಮೌನವಾಗಿ ಶಿಶುಪಾಲನ ತಪ್ಪುಗಳ ಸಂಖ್ಯೆಯನ್ನು ಲೆಕ್ಕ ಮಾಡುತ್ತಾ ಇದ್ದರು. ನೂರನೇ ತಪ್ಪು ಮುಗಿದ ಕೂಡಲೇ ಎಚ್ಚರಿಸಿದರು. ಕೇಳದೆ 101ನೇ ನಿಂದನೆ ಮಾಡಿದಾಗ ಶ್ರೀಕೃಷ್ಣ ದೇವರು ತನ್ನ ಸುದರ್ಶನ ಚಕ್ರದಿಂದ ಶಿಶುಪಾಲನ ಶಿರವನ್ನು ಕತ್ತರಿಸಿದರು. ನಂತರ ಶಿಶುಪಾಲನ ಆತ್ಮವು ಜ್ಯೋತಿ ರೂಪದಲ್ಲಿ ಶ್ರೀಕೃಷ್ಣ ದೇವರಲ್ಲಿ ಲೀನವಾಯಿತು.



