Special Desk

ವೈಕುಂಠದ ದ್ವಾರ ರಕ್ಷಕರಿಗೆ ಶಾಪ! : ಭಗವಾನ್ ವಿಷ್ಣುವಿನಿಂದ ಸಂಹಾರವಾದ ಹಿರಣ್ಯಾಕ್ಷ- ಹಿರಣ್ಯಕಶಿಪು, ರಾವಣ-ಕುಂಭಕರ್ಣ, ಶಿಶುಪಾಲ-ದಂತವಕ್ರರ ಕಥೆ!

ವಿಷ್ಣು ದೇವರು ಇರುವ ವೈಕುಂಠದ ಪ್ರವೇಶದ್ವಾರವನ್ನು ರಕ್ಷಿಸುತ್ತಿದ್ದವರು ಅವಳಿ ದೇವತೆಗಳಾದ ಜಯ ಮತ್ತು ವಿಜಯರು. ಒಮ್ಮೆ ಬ್ರಹ್ಮ ದೇವರ ಮಾನಸಪುತ್ರರಾದ ಸನಕ, ಸನಂದನ, ಸನಾತನ, ಸನತ್ಕುಮಾರ ಎಂಬ ನಾಲ್ಕು ಕುಮಾರರು ವೈಕುಂಠಕ್ಕೆ ಬರುತ್ತಾರೆ. ಈ ಬಾಲಯೋಗಿಗಳನ್ನು ಮಕ್ಕಳು ಎಂದು ಪರಿಗಣಿಸಿ, ಬ್ರಹ್ಮ ದೇವರ ಮಾನಸಪುತ್ರರು ಎಂದು ತಿಳಿಯದೆ ಜಯ, ವಿಜಯರು ಒಳಗೆ ಪ್ರವೇಶಿಸಲು ಬಿಡುವುದಿಲ್ಲ.

ಇದರಿಂದ ಕೋಪಗೊಂಡ ಈ ಬಾಲಯೋಗಿಗಳು ಜಯ ವಿಜಯರು ತಮ್ಮ ದೈವತ್ವವನ್ನು ಕಳೆದುಕೊಂಡು ಭೌತಿಕ ಜಗತ್ತಿನಲ್ಲಿ ಜನ್ಮ ಪಡೆಯಲಿ ಎಂದು ಶಪಿಸಿದರು. ಆ ಬಳಿಕ ನಿಜಾಂಶ ತಿಳಿದು ಶಾಪವನ್ನು ಹಿಂಪಡೆಯುವಂತೆ ಜಯ ವಿಜಯರು ಪ್ರಾರ್ಥಿಸಿದರು. ಅಷ್ಟರಲ್ಲಿ ವಿಷ್ಣು ದೇವರೂ ಅಲ್ಲಿಗೆ ಬಂದಿದ್ದರು. ಜೊತೆಗೆ, ಈ ಕುಮಾರರ ಶಾಪವನ್ನು ಹಿಂಪಡೆಯಲು ಆಗದು, ಬದಲಾಗಿ ಇದನ್ನು ಮಾರ್ಪಡಿಸಬಹುದು ಎಂದು ಹೇಳಿದರು. ಅಲ್ಲದೆ ಏಳು ಬಾರಿ ವಿಷ್ಣು ದೇವರ ಭಕ್ತರಾಗಿ ಅಥವಾ ಮೂರು ಬಾರಿ ಭಗವಾನ್ ವಿಷ್ಣುವಿನ ಶತ್ರುಗಳಾಗಿ ಜನಿಸಬಹುದು ಎಂಬ ಆಯ್ಕೆಯನ್ನು ನೀಡಿದರು.

ಆಗ ಜಯ ವಿಜಯರು ಬೇಗ ತಮ್ಮ ಶಾಪವನ್ನು ವಿಮೋಚನೆ ಮಾಡಿಕೊಂಡು ಮತ್ತೆ ವಿಷ್ಣು ದೇವರನ್ನು ಸೇರಬೇಕು ಎಂದು ಬಯಸಿದರು. ಹೀಗಾಗಿಯೇ ಅವರು ವಿಷ್ಣು ದೇವರ ಶತ್ರುಗಳಾಗಿ ಮೂರು ಬಾರಿ ಜನಿಸುವ ಆಯ್ಕೆಯನ್ನು ಮಾಡಿಕೊಂಡರು. ಆದರೆ ತಮ್ಮ ಮರಣ ಭಗವಾನ್ ವಿಷ್ಣುವಿನಿಂದಲೇ ಆಗಬೇಕು ಎಂದು ಅವರು ಬಯಸಿದರು. ಹೀಗೆ ಅವರು ಭೂಮಿಯಲ್ಲಿ ಮೂರು ಜನ್ಮ ತಾಳಿದರು.

ಸತ್ಯ ಯುಗದಲ್ಲಿ ಜಯ ಮತ್ತು ವಿಜಯರು ಅಸುರರಾದ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪುಗಳಾಗಿ ಜನಿಸಿದರು. ಹಿರಣ್ಯಾಕ್ಷನನ್ನು ವರಾಹ ಅವತಾರದಿಂದ, ಹಿರಣ್ಯಕಶಿಪುವನ್ನು ನರಸಿಂಹ ಅವತಾರದಲ್ಲಿ ವಿಷ್ಣು ದೇವರು ಸಂಹಾರ ಮಾಡಿದರು. ತ್ರೇತಾ ಯುಗದಲ್ಲಿ ಇವರು ರಾವಣ ಮತ್ತು ಕುಂಭಕರ್ಣರಾಗಿ ಜನಿಸಿದರು. ಅವರಿಬ್ಬರೂ ವಿಷ್ಣುವಿನ ಏಳನೇ ಅವತಾರವಾದ ರಾಮ ದೇವರಿಂದ ಸಂಹಾರವಾದರು. ದ್ವಾಪರ ಯುಗದಲ್ಲಿ ಶಿಶುಪಾಲ ಮತ್ತು ದಂತವಕ್ರರಾಗಿ ಜನಿಸಿದರು. ಅವರಿಬ್ಬರೂ ವಿಷ್ಣುವಿನ ಎಂಟನೇ ಅವತಾರವಾದ ಶ್ರೀಕೃಷ್ಣ ದೇವರಿಂದ ಹತರಾದರು.

ಹೀಗೆ ತಮ್ಮ ಮೂರು ಜನ್ಮವನ್ನು ಪೂರ್ಣಗೊಳಿಸಿದ ಜಯ ವಿಜಯರು ಮತ್ತೆ ವೈಕುಂಠದ ದ್ವಾರದ ರಕ್ಷಣೆಯ ಕಾರ್ಯ ಮುಂದುವರಿಸಿದ್ದರು.

Show More

Related Articles

Leave a Reply

Your email address will not be published. Required fields are marked *

Back to top button