ತೆಂಕುತಿಟ್ಟು ಯಕ್ಷಗಾನದ ಅಗ್ರಮಾನ್ಯ ಯಕ್ಷಗುರು ಕೆ.ಗೋವಿಂದ ಭಟ್ ವಿಧಿವಶ

ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ಅಗ್ರಮಾನ್ಯ ಕಲಾವಿದ, ಯಕ್ಷಗುರು ಸೂರಿಕುಮೇರು ಕೆ. ಗೋವಿಂದ ಭಟ್ ಅವರು ವಿಧಿವಶರಾಗಿದ್ದಾರೆ. ತೀರ್ಥಹಳ್ಳಿಯ ತಮ್ಮ ಪುತ್ರನ ನಿವಾಸದಲ್ಲಿ ಇವರು ಕೊನೆಯುಸಿರೆಳೆದಿದ್ದಾರೆ. ಇವರಿಗೆ 90 ವರ್ಷ ವಯಸ್ಸಾಗಿತ್ತು. ಇವರು ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಯಕ್ಷರಂಗದಲ್ಲಿ ಕಲಾವಿದರಾಗಿ, ತಾಳಮದ್ದಳೆ ಕ್ಷೇತ್ರದ ಅದ್ಭುತ ಅರ್ಥದಾರಿಯಾಗಿ ಗಮನ ಸೆಳೆದಿದ್ದ ಗೋವಿಂದ ಭಟ್ ಅವರು ಅದೆಷ್ಟೋ ಕಲಾವಿದರಿಗೆ ಗುರುಗಳಾಗಿ ಮಾರ್ಗದರ್ಶನ ತೋರಿದವರು. ಶ್ರೀ ಧರ್ಮಸ್ಥಳ ಮೇಳವೊಂದರಲ್ಲೇ 50 ವರ್ಷಗಳಿಗೂ ಅಧಿಕ ಕಾಲ ತಿರುಗಾಟ ನಡೆಸಿದ್ದ ಕೀರ್ತಿ ಇವರದ್ದು.
ತೆಂಕುತಿಟ್ಟು ಯಕ್ಷಗಾನದ ‘ದಶಾವತಾರಿ’ ಎಂದೇ ಇವರು ಪ್ರಸಿದ್ಧರಾಗಿದ್ದರು. ಜೊತೆಗೆ ಇವರು ತೆಂಕುತಿಟ್ಟು ಯಕ್ಷಗಾನಕ್ಕೆ ಎರಡನೇ ರಾಷ್ಟ್ರಪ್ರಶಸ್ತಿ ತಂದು ಕೊಟ್ಟವರು. ತಮ್ಮ ಯಕ್ಷತಿರುಗಾಟದ ಅನುಭವ ಕಥನವನ್ನು ಇವರು ‘ಎಪ್ಪತ್ತು ತಿರುಗಾಟಗಳು’ ಎಂಬ ಕೃತಿಯಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.



