ಸಕ್ರಿಯ ಜ್ವಾಲಾಮುಖಿಯ ಸನಿಹದಲ್ಲಿದೆ 700 ವರ್ಷ ಹಳೆಯ ಗಣೇಶ ವಿಗ್ರಹ : ಇದು ಭಾರತದ ಕತೆಯಲ್ಲ!
ಭಾರತೀಯರ ಪಾಲಿಗೆ ಗಣಪತಿ ಇಷ್ಟದೇವರು, ವಿಘ್ನ ನಿವಾರಕ. ಕಷ್ಟಗಳನ್ನು ಪರಿಹರಿಸುವ ದೇವರು. ಬರೀ ಭಾರತ ಮಾತ್ರವಲ್ಲ ವಿಶ್ವದ ನಾನಾ ಭಾಗಗಳಲ್ಲಿ ಗಣಪನ ಮೇಲೆ ಅಪಾರ ಭಕ್ತಿ ಹೊಂದಿರುವ ಜನರಿದ್ದಾರೆ. ಅದಕ್ಕೆ ಸಾಕ್ಷಿ ಈ ವಿನಾಯಕ ವಿಗ್ರಹ. ಈ ವಿಗ್ರಹಕ್ಕೆ ಇದೆ 700 ವರ್ಷ ಹಿಂದಿನ ಇತಿಹಾಸ…!
ಇಷ್ಟಕ್ಕೂ ಈ ಪುರಾತನ ಗಣಪತಿ ವಿಗ್ರಹ ಇರುವುದು ಇಂಡೋನೇಷ್ಯಾದಲ್ಲಿ… ಇಂಡೋನೇಷ್ಯಾದಲ್ಲಿ ಭಾರತೀಯ ಪರಂಪರೆಯನ್ನು ನೋಡಬಹುದು. ಇಲ್ಲಿ ಗಣಪತಿ ದೇವರಿಗೆ ಮೀಸಲಾದ ಸಾಕಷ್ಟು ದೇವಸ್ಥಾನಗಳೂ ಇವೆ. ಅದರಲ್ಲಿ ಒಂದು ಈ ಸುಂದರ ತಾಣ.
ಇಂಡೋನೇಷ್ಯಾದ ಸಕ್ರಿಯ ಜ್ವಾಲಾಮುಖಿಯಾದ ಮೌಂಟ್ ಬ್ರೋಮೋದ ಅಂಚಿನಲ್ಲಿದೆ ಅಪರೂಪದ ಗಣಪತಿ ದೇವರ ವಿಗ್ರಹ. ಇಲ್ಲಿನ ಟೆಂಗರ್ ಬುಡಕಟ್ಟು ಜನಾಂಗದವರು ಸ್ಥಾಪಿಸಿರುವ ಗಣಪತಿ ವಿಗ್ರಹ ಇದು ಎಂದು ಹೇಳಲಾಗುತ್ತದೆ. ಇಲ್ಲಿ ವಿನಾಯಕ ದೇವರು ಜ್ವಾಲಾಮುಖಿ ಸ್ಫೋಟಗಳಿಂದ ಸ್ಥಳೀಯರನ್ನು ರಕ್ಷಿಸುತ್ತಿದ್ದಾರೆ ಎಂಬ ಬಲವಾದ ನಂಬಿಕೆ ಇಲ್ಲಿನ ಜನರದ್ದು. ಹೀಗಾಗಿ ಇಂದಿಗೂ ಇಲ್ಲಿನ ಜನರು ಗಣಪತಿ ದೇವರಿಗೆ ಹೂವು, ಹಣ್ಣು, ಧೂಪದ್ರವ್ಯಗಳನ್ನು ಅರ್ಪಿಸುತ್ತಿದ್ದಾರೆ. ಜೊತೆಗೆ ಇದು ಭಕ್ತರು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಸುಂದರ ಸ್ಥಳ ಕೂಡಾ ಹೌದು.
View this post on Instagram
ಬ್ರೋಮೋ ಟೆಂಗರ್ ಸೆಮೆರು ರಾಷ್ಟ್ರೀಯ ಉದ್ಯಾನವನದೊಳಗೆ ಈ ಪವಿತ್ರ ಸ್ಥಳವಿದೆ.ಬ್ರೋಮೋ ಎಂಬ ಹೆಸರು ಸೃಷ್ಟಿಯ ಹಿಂದೂ ದೇವರಾದ ಬ್ರಹ್ಮನ ಜಾವಾನೀಸ್ ಉಚ್ಚಾರಣೆಯಿಂದ ಬಂದಿದೆ ಎಂದೂ ಹೇಳಲಾಗುತ್ತದೆ. ಮೌಂಟ್ ಬ್ರೋಮೋ ಬ್ರೋಮೋ ಟೆಂಗರ್ ಸೆಮೆರು ರಾಷ್ಟ್ರೀಯ ಉದ್ಯಾನವನದ ಭಾಗವಾಗಿದೆ. ಇದು 800 ಚದರ ಕಿಲೋಮೀಟರ್ ವ್ಯಾಪ್ತಿಯ ಸುಂದರ ಭೂದೃಶ್ಯಗಳನ್ನು ಹೊಂದಿದೆ.
View this post on Instagram
ಹೇಗೆ ತಲುಪಬಹುದು?
ಈ ಸುಂದರ ತಾಣಕ್ಕೆ ಬರಲು ಹತ್ತಿರದ ವಿಮಾನ ನಿಲ್ದಾಣವೆಂದರೆ ಅದು ಸುರಬಯಾದಲ್ಲಿರುವ ಜುವಾಂಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇಲ್ಲಿಂದ ಪ್ರಯಾಣಿಕರು ಸುರಬಯಾ-ಪಸುರುವಾನ್-ವೊನೊಕಿತ್ರಿ-ಮೌಂಟ್ ಬ್ರೋಮೋ ಮಾರ್ಗದಲ್ಲಿ 2-3 ಗಂಟೆಗಳ ಪ್ರಯಾಣ ಮೂಲಕ ಇಲ್ಲಿಗೆ ತಲುಪಬಹುದು.



