ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ : ಅಪರಾಧಿ ಮೊಹಮ್ಮದ್ ಶಾರಿಕ್ಗೆ 10 ವರ್ಷಗಳ ಕಠಿಣ ಶಿಕ್ಷೆ

ಮಂಗಳೂರು : ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಅಪರಾಧಿ ಮೊಹಮ್ಮದ್ ಶಾರಿಕ್ಗೆ 10 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ, ಐಪಿಸಿ ಸೆಕ್ಷನ್ 121ಎ, ಐಪಿಸಿ ಸೆಕ್ಷನ್ 326 ಹಾಗೂ ಭಯೋತ್ಪಾದನಾ ಚಟುವಟಿಕೆಗಳ ತಡೆ ಕಾಯ್ದೆಯಡಿ ಕಠಿಣ ಶಿಕ್ಷೆ ವಿಧಿಸಿದೆ. ಈ ವಿಚಾರಣೆ ವೇಳೆ ಶಾರಿಕ್ ತಾನು ಮಾಡಿದ್ದ ಅಪರಾಧಗಳನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದ.
ಸ್ಫೋಟದ ಸಂಚು ರೂಪಿಸಿ ಕುಕ್ಕರ್ನೊಳಗೆ ಬಾಂಬ್ ಇರಿಸಿ ಶಾರಿಕ್ ಕೊಂಡೊಯ್ಯುತ್ತಿದ್ದ ವೇಳೆಯೇ ಆಕಸ್ಮಾತ್ತಾಗಿ ಅದು ಸ್ಫೋಟಗೊಂಡಿತ್ತು. 2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿ ಬಳಿ ಆಟೋರಿಕ್ಷಾದಲ್ಲಿ ಸಾಗುತ್ತಿದ್ದಾಗ ಈ ಕುಕ್ಕರ್ ಸ್ಫೋಟಗೊಂಡಿತ್ತು. ಹೀಗಾಗಿ ಈತನ ಸಂಚು ವಿಫಲವಾಗುವುದರೊಂದಿಗೆ ಭಾರೀ ಅನಾಹುತ ತಪ್ಪಿತ್ತು. ಘಟನೆಯಲ್ಲಿ ಅಮಾಯಕ ಆಟೋ ಚಾಲಕರೂ ಗಾಯಗೊಂಡಿದ್ದರು.
ತಾನೇ ಹಿಡಿದುಕೊಂಡಿದ್ದ ಕುಕ್ಕರ್ ಬಾಂಬ್ ಸ್ಫೋಟಗೊಂಡಿದ್ದರಿಂದ ಮೊಹಮ್ಮದ್ ಶಾರಿಕ್ ಕೂಡಾ ಗಾಯಗೊಂಡಿದ್ದ. ಇತ್ತ ರಾಷ್ಟ್ರದ ಭದ್ರತೆಗೆ ಧಕ್ಕೆ ತರುವ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಈ ಸ್ಫೋಟದ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಲಾಗಿತ್ತು.



