ಲೈಂಗಿಕ ಕಿರುಕುಳ ಆರೋಪ : ಮಲಯಾಳಂ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ಬಂಧನ
ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮಲಯಾಳಂ ಸಿನಿಮಾ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ಬಂಧನಕ್ಕೊಳಪಟ್ಟಿದ್ದಾರೆ. ಇವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವೈದ್ಯಕೀಯ ಪರೀಕ್ಷೆಗಳಂತಹ ಪ್ರಕ್ರಿಯೆ ಮುಗಿಸಿದ ಬಳಿಕ ಇವರನ್ನು ಎರ್ನಾಕುಲಂ ಉಪ ಜೈಲಿಗೆ ಸ್ಥಳಾಂತರಿಸಲಾಗಿದೆ.
ರಂಜಿತ್ ಅವರನ್ನು ಮಂಗಳವಾರ ರಾತ್ರಿ ಇಡುಕ್ಕಿ ಜಿಲ್ಲೆಯ ಮುಟ್ಟಂ ಬಳಿ ವಶಕ್ಕೆ ಪಡೆಯಲಾಗಿತ್ತು. ಮೊದಲು ಇವರನ್ನು ತೋಡುಪುಳ ಪೊಲೀಸ್ ಠಾಣೆಗೆ ಕರೆತರಲಾಯಿತು, ನಂತರ ಕೊಚ್ಚಿ ನಗರ ಪೊಲೀಸರಿಗೆ ಹಸ್ತಾಂತರಿಸಲಾಯಿತು ಬಳಿಕ ಉತ್ತರ ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ತ್ರಿಪ್ಪುನಿತುರದಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ ಮೊದಲು ಆರೋಗ್ಯದ ಕಾರಣ ಅವರನ್ನು ಎರ್ನಾಕುಲಂ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರಂಜಿತ್, ಇದು ಸುಳ್ಳು ಪ್ರಕರಣ ಎಂದು ಆರೋಪಗಳನ್ನು ನಿರಾಕರಿಸಿದರು.
ಪ್ರಸ್ತುತ ರಂಜಿತ್ ಅವರ ಚಿತ್ರದಲ್ಲಿ ನಟಿಸುತ್ತಿದ್ದ ಮಹಿಳಾ ನಟಿ ಸಲ್ಲಿಸಿದ್ದ ದೂರಿನ ಅನ್ವಯ ಇವರನ್ನು ಬಂಧಿಸಲಾಗಿದೆ. ಜನವರಿ 28 ರಂದು ಫೋರ್ಟ್ ಕೊಚ್ಚಿಯ ಶೂಟಿಂಗ್ ಸ್ಥಳದಲ್ಲಿ ನಿರ್ದೇಶಕರು ಅನುಮತಿಯಿಲ್ಲದೆ ತಮ್ಮ ಕ್ಯಾರವಾನ್ಗೆ ಪ್ರವೇಶಿಸಿ, ತಮ್ಮನ್ನು ಚುಂಬಿಸಲು ಪ್ರಯತ್ನಿಸಿದ್ದರು. ಈ ವೇಳೆ ವಿರೋಧ ವ್ಯಕ್ತಪಡಿಸಿದರಿಂದ ಅವರು ಹಿಂದೆ ಸರಿದಿದ್ದರು ಎಂದು ನಟಿ ಆರೋಪಿಸಿದ್ದರು.
2024 ರಲ್ಲಿ ಬಂಗಾಳಿ ನಟಿಯೊಬ್ಬರು 2009 ರಲ್ಲಿ ಪಲೇರಿ ಮಾಣಿಕ್ಯಂ: ಒರು ಪತಿರಕೋಲಪಥಕಥಿಂಟೆ ಕಥಾ ಚಿತ್ರದ ಆಡಿಷನ್ ಸಮಯದಲ್ಲಿ ತಮ್ಮೊಂದಿಗೆ ಇವರು ಅನುಚಿತವಾಗಿ ವರ್ತಿಸಿದ್ದರು ಎಂದು ದೂರಿದ್ದರು. ಈ ದೂರಿನ ಕಾರಣದಿಂದ ರಂಜಿತ್ ಕೇರಳ ರಾಜ್ಯ ಚಲಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. ಇದಲ್ಲದೆ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಯುವಕನೊಬ್ಬ ಈ ಹಿಂದೆ ಮತ್ತೊಂದು ದೂರು ದಾಖಲಿಸಿದ್ದ.

