Mohanlal’s Petition : ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಮಲಯಾಳಂ ಸ್ಟಾರ್ ಮೋಹನ್ ಲಾಲ್: ಕಾರಣವೇನು?
ಮಲಯಾಳಂ ಸೂಪರ್ಸ್ಟಾರ್, ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ನಟ ಮೋಹನ್ ಲಾಲ್ ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗಾಗಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ವ್ಯಕ್ತಿತ್ವ ಹಕ್ಕುಗಳ ಉಲ್ಲಂಘನೆ ವಿಷಯದಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ಮೋಹನ್ಲಾಲ್ ಅವರು ಕೋರಿಕೊಂಡಿದ್ದರು. ಆದರೆ ಇದೀಗ ಮೋಹನ್ಲಾಲ್ ಈ ಅರ್ಜಿಯನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ.
ಮೋಹನ್ಲಾಲ್ ಅವರ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯವು ಅರ್ಜಿಯನ್ನು ಹಿಂಪಡೆಯಲು ಅವರಿಗೆ ಅವಕಾಶ ನೀಡಿತು ಮತ್ತು ಸ್ಪಷ್ಟ ವಿವರಗಳೊಂದಿಗೆ ಹೊಸ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಿದೆ. ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರು ಮೋಹನ್ಲಾಲ್ ಪರ ವಕೀಲರಿಗೆ ಮಧ್ಯಂತರ ಅರ್ಜಿಯನ್ನು ಹಿಂಪಡೆಯಲು ಸೂಚಿಸಿದ್ದು, ಸಂಪೂರ್ಣ ಹಾಗೂ ಇನ್ನಷ್ಟು ವಿವರಗಳೊಂದಿಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಿದ್ದಾರೆ.
ಯಾವುದೇ ವ್ಯಕ್ತಿ ತನ್ನ ಸ್ಪಷ್ಟ ಒಪ್ಪಿಗೆಯಿಲ್ಲದೆ ವಾಣಿಜ್ಯ ಉದ್ದೇಶಗಳಿಗಾಗಿ ತನ್ನ ಹೆಸರು, ಧ್ವನಿ, ಫೋಟೋ ಅಥವಾ ವಿಶಿಷ್ಟ ನಟನಾ ನಡವಳಿಕೆಯನ್ನು ಬಳಸಲು ಅನುಮತಿಸಬಾರದು ಎಂದು ಮೋಹನ್ ಲಾಲ್ ತಮ್ಮ ಅರ್ಜಿಯಲ್ಲಿ ವಿನಂತಿಸಿಕೊಂಡಿದ್ದರು.
ವಿಚಾರಣೆಯ ಸಮಯದಲ್ಲಿ ಮೋಹನ್ಲಾಲ್ ಪರ ವಕೀಲರು ಅನಧಿಕೃತ ಬಳಕೆ, ಡೀಪ್ಫೇಕ್ ಹಾಗೂ ಎಐ ರಚಿತ ಕಂಟೆಂಟ್ಗಳು, ವಾಯ್ಸ್ ಕ್ಲೋನಿಂಗ್, ನಟನ ಫೋಟೋ ಹಾಗೂ ವಿಡಿಯೋಗಳ ದುರ್ಬಳಕೆ ಸೇರಿದಂತೆ ಬಹು ಉಲ್ಲಂಘನೆಗಳ ಬಗ್ಗೆ ವಿವರಿಸಿದ್ದರು. ಈ ವೇಳೆ ಪ್ರತಿ ಪ್ರತಿವಾದಿಯ ವಿರುದ್ಧ ಕೋರಿದ ಪರಿಹಾರವನ್ನು ವಾದಿಯು ಆಕ್ಷೇಪಾರ್ಹ ಲಿಂಕ್ಗಳೊಂದಿಗೆ ಸ್ಪಷ್ಟವಾಗಿ ಪಟ್ಟಿ ಮಾಡಿದ್ದಾರೆಯೇ ಎಂಬುದನ್ನು ನ್ಯಾಯಾಲಯ ಕೇಳಿದ್ದು, ಲಿಂಕ್ಗಳನ್ನು ಸರಿಯಾಗಿ ಬೇರ್ಪಡಿಸಿ ಹಾಗೂ ಇನ್ನಷ್ಟು ವಿವರಗಳನ್ನು ನೀಡುವಂತೆ ನಿರ್ದೇಶನ ನೀಡಿದೆ.
ಈ ವಿಷಯವನ್ನು ಈಗ ಮಾರ್ಚ್ 27 ರಂದು ವಿಚಾರಣೆಗೆ ಪಟ್ಟಿ ಮಾಡಲಾಗಿದೆ.
ಅಮಿತಾಬ್ ಬಚ್ಚನ್, ಅನಿಲ್ ಕಪೂರ್, ಸೋನಾಕ್ಷಿ ಸಿನ್ಹಾ ಮತ್ತು ಕಮಲ್ ಹಾಸನ್ ಅವರಂತಹ ನಟರು ಸೇರಿದಂತೆ ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗಾಗಿ ಅರ್ಜಿ ಸಲ್ಲಿಸಿರುವ ಸೆಲೆಬ್ರಿಟಿಗಳ ಪಟ್ಟಿಗೆ ಮೋಹನ್ ಲಾಲ್ ಕೂಡಾ ಈಗ ಸೇರಿದ್ದಾರೆ.

