Drishyam 3 Movie Review : ಹೇಗಿದೆ ದೃಶ್ಯಂ 3…? : ವರ್ಕ್ ಔಟ್ ಆಗುತ್ತಾ ಜಾರ್ಜ್ಕುಟ್ಟಿ ಪ್ಲ್ಯಾನ್
ಒಂದು ಕಡೆ ವರುಣ್ನ ಅಸ್ಥಿ ಸಿಗದೆ ಕುಟುಂಬದ ದ್ವೇಷ… ಮತ್ತೊಂದೆಡೆ ತನ್ನ ಪುಟ್ಟ ಕುಟುಂಬವನ್ನು, ಮಗಳನ್ನು ರಕ್ಷಿಸಲೇಬೇಕು ಎಂದು ಪಣತೊಟ್ಟಿರುವ ಜಾರ್ಜ್ಕುಟ್ಟಿ… ದೃಶ್ಯಂ 1 ರಿಂದ ಶುರುವಾದ ಈ ಪಯಣ ದೃಶ್ಯಂ 3 ತನಕ ಬಂದು ನಿಂತಿದೆ…! ಕೊಲೆಯಾದ ವರುಣ್ ಅಸ್ಥಿ ತಂದೆ ತಾಯಿಗೆ ಸಿಕ್ಕಿತೇ…? ಪೊಲೀಸರು, ರಿಟೈರ್ಡ್ ಐಜಿ ಗೀತಾ ಪ್ರಭಾಕರ್ (ಆಶಾ ಶರತ್) ಯೋಚಿಸುವುದಕ್ಕಿಂತ ಮೂರು ಪಟ್ಟು ಮುಂದಕ್ಕೆ ಹೋಗಿ ಕಾರ್ಯಪ್ರವೃತ್ತನಾಗುತ್ತಿದ್ದ ಜಾರ್ಜ್ಕುಟ್ಟಿ (ಮೋಹನ್ಲಾಲ್) ಯ ರಹಸ್ಯ ಬಯಲಾಗುತ್ತದೆಯೇ…? ಇದು ತಿಳಿಯಲು ನೀವು ಸಿನಿಮಾವನ್ನೇ ನೋಡಬೇಕು…
ದೃಶ್ಯಂ 1 ಮತ್ತು ದೃಶ್ಯಂ 2ಗೆ ಹೋಲಿಸಿದರೆ ದೃಶ್ಯಂ 3ಯಲ್ಲಿ ಹೆಚ್ಚಿನ ಭಾಗವನ್ನು ಫ್ಯಾಮಿಲಿ ಸೆಂಟಿಮೆಂಟ್ಗೆ ಫೋಕಸ್ ಮಾಡಿದಂತಿದೆ. ಕುಟುಂಬವನ್ನು ರಕ್ಷಿಸಲೇಬೇಕೆಂದು ಪಣತೊಟ್ಟಿರುವ, ಮಗಳಿಗೊಂದು ಉತ್ತಮ ಜೀವನ ಕಟ್ಟಿಕೊಡಬೇಕೆಂದು ಪ್ರತಿಕ್ಷಣವೂ ಯೋಚಿಸುವ ಜಾರ್ಜ್ಕುಟ್ಟಿ, ಅಪ್ಪಟ ಮಧ್ಯಮ ಕುಟುಂಬದ ಅಮ್ಮನಂತಿರುವ ರಾಣಿ (ಮೀನಾ)ಯ ಹುಸಿ ಮುನಿಸು, ಆತಂಕ, ಮಗಳ ಭವಿಷ್ಯದ ಕನಸು, ವರಾಣ್ವೇಷಣೆ, ಅದಕ್ಕೆ ಬರುವ ಅಡ್ಡಿ ಹೀಗೆ ಮೊದಲಾರ್ಥ ಸಾಗುತ್ತದೆ.
ಹೀಗೆ ಸಾಗುವ, ಕೆಲವೊಮ್ಮೆ ತೀರಾ ನಿಧಾನವಾದಂತೆ ಅನಿಸುವ ಕಥೆ ಇಂಟರ್ವಲ್ ಬ್ಲಾಕ್ನಲ್ಲಿ ಕುತೂಹಲಕಾರಿ ಘಟ್ಟಕ್ಕೆ ಬಂದು ನಿಲ್ಲುತ್ತದೆ… ದ್ವಿತೀಯಾರ್ಧ ನಿರೂಪಣೆ ವೇಗವನ್ನು ಪಡೆಯುತ್ತದೆ. ನಿರ್ದೇಶಕ ಜೀತು ಜೋಸೆಫ್ ಈ ಚಿತ್ರದಲ್ಲಿ ಹೆಚ್ಚಾಗಿ ಭಾವನಾತ್ಮಕ ಕಕಥಾಹಂದರಕ್ಕೆ ಹೆಚ್ಚು ಗಮನ ಹರಿಸಿದಂತೆ ಕಾಣುತ್ತದೆ.
ಜಾರ್ಜ್ಕುಟ್ಟಿಯ ರಹಸ್ಯ ಭೇದಿಸಲು ಇಲ್ಲಿ ಬರುವವರು ಹಲವರು… ಜೊತೆಗೆ ಜಾರ್ಜ್ಕುಟ್ಟಿಯನ್ನು ರಕ್ಷಿಸಲು ಸಹಾಯ ಮಾಡುವವರೂ ಇನ್ನೊಂದಷ್ಟು ಮಂದಿ… ಹೀಗೆ ರಹಸ್ಯದ ಪರದೆ ಬಿಚ್ಚಬೇಕು ಎಂದು ಶತಪ್ರಯತ್ನ ಮಾಡುವವರ ಚಾಣಾಕ್ಷ್ಯ ಹೆಜ್ಜೆಯ ನಡುವೆ ಒಂದಷ್ಟು ಟ್ವಿಸ್ಟ್ ಆಂಡ್ ಟರ್ನ್ಗಳೊಂದಿಗೆ ಕಥೆಯು ಸಾಗುತ್ತದೆ.
ಹೀಗೆ ಕುತೂಹಲವನ್ನು ಕಾಪಿಡುತ್ತಾ, ಕುಟುಂಬದ ಬಂಧವನ್ನು ಕಟ್ಟಿಕೊಡುತ್ತಾ ಸಾಗುವ ಚಿತ್ರದಲ್ಲಿ ತನ್ನ ನಟನೆಯ ಮೂಲಕವೇ ಸಂಪೂರ್ಣವಾಗಿ ಆವರಿಸಿಕೊಳ್ಳುವವರು ಮೋಹನ್ಲಾಲ್. ಮಗಳ ಶ್ರೇಯೋಭಿವೃದ್ಧಿ ಬಯಸುವ ಮುಗ್ಧ ಅಪ್ಪನಾಗಿ, ತನ್ನ ನೋವನ್ನು ಒಳಗೊಳಗೇ ನುಂಗುತ್ತಾ ಪರಿಸ್ಥಿತಿ ಎದುರಿಸುವ ಚಾಣಾಕ್ಷನಾಗಿ, `ಯಾರೋ ನನ್ನ ಹಿಂದೆ ಬಿದ್ದಿದ್ದಾರೆ’ ಎಂಬ ಭಯವನ್ನು ತೋಡಿಕೊಳ್ಳುತ್ತಲೇ ಮುಂದೆ ಎದುರಾಗುವ ಸನ್ನಿವೇಶಗಳನ್ನು ಊಹಿಸಿ ಹೆಜ್ಜೆ ಇಡುವ ಚತುರನಾಗಿ ಮೋಹನ್ ಲಾಲ್ ಇಷ್ಟ ಆಗುತ್ತಾರೆ… ಮಾಸ್ ಡೈಲಾಗ್, ಪಂಚ್ ಲೈನ್ಗಳು ಇಲ್ಲದೆ ಸಾಮಾನ್ಯ ತಂದೆಯೊಬ್ಬನ ತಾಕಲಾಟವನ್ನು ಮೋಹನ್ಲಾಲ್ ತನ್ನ ಅಭಿನಯದ ಮೂಲಕವೇ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಮಾತ್ರ ಬರುವ `ಮಗಳ ತಂಟೆಗೆ ಬಂದರೆ ಕೊಂದೇ ತೀರುತ್ತೇನೆ’ ಎಂಬ ಡೈಲಾಗ್ನ ತೀವ್ರತೆ, ಮುಖಭಾವಕ್ಕೆ ಥಿಯೇಟರ್ನಲ್ಲಿ ಚಪ್ಪಾಳೆ ಬೀಳದೆ ಇರದು. ಆದರೂ ದೃಶ್ಯಂ 3ಯಲ್ಲಿ ಥ್ರಿಲ್ಲರ್ ಎಲಿಮೆಂಟ್ಗಳು ಕಡಿಮೆ ಇವೆ ಎಂದು ಅನಿಸಲೂಬಹುದು. ಯಾಕೆಂದರೆ ಒಂದು ಕಡೆ ಐಜಿ ಹೇಳುವಂತೆ `ದುರದೃಷ್ಟವಶಾತ್, ನಮ್ಮ ವ್ಯವಸ್ಥೆಯಲ್ಲಿ ಪರಿಹಾರಗಳಿಗಿಂತ ಹೆಚ್ಚಿನ ಲೋಪದೋಷಗಳಿವೆ’ ಎಂದು ಹೇಳಿದರೂ ಅದನ್ನು ಈ ಬಾರಿ ಜಾರ್ಜ್ಕುಟ್ಟಿ ಬಳಸಿದಂತೆ ಕಾಣುತ್ತಿಲ್ಲ.
Thank you for carrying this journey with us for 13 years. ❤️
Your love, support, and belief in this story continue to humble us every day.#Drishyam3 running successfully in theatres near you.@jeethu4ever @antonypbvr @KumarMangat @jayantilalgada @AbhishekPathakk… pic.twitter.com/eIo0vLtKdE
— Mohanlal (@Mohanlal) May 23, 2026
ಚಿತ್ರದ ಕ್ಲೈಮ್ಯಾಕ್ಸ್ ನ ಕೊನೆಯ ಅರ್ಧ ಗಂಟೆಯ ಅವಧಿಯಂತು ಸಖತ್ ಥ್ರಿಲ್ ನೀಡುತ್ತದೆ. ಬಾಕಿ ಉಳಿದಂತೆ ಬಹುತೇಕ ದೃಶ್ಯಂ 2 ನಲ್ಲಿದ್ದ ಪಾತ್ರಗಳು ಇಲ್ಲೂ ಮುಂದುವರಿದಿದೆ. ಸಹದೇವನಾಗಿ ಕಲಾಭವನ್ ಶಾಜಾನ್ ಅಬ್ಬರಿಸುತ್ತಾರೆ, ಐಜಿ ಥಾಮಸ್ ಬಾಸ್ಟಿನ್ ಐಪಿಎಸ್ ಆಗಿ ಮುರಳಿ ಗೋಪಿ, ಪ್ರಭಾಕರ್ ಆಗಿ ಸಿದ್ಧಿಕಿ ಗಮನ ಸೆಳೆಯುತ್ತಾರೆ. ಆದರೆ ಆಶಾ ಶರತ್ ಪಾತ್ರ ಈ ಭಾಗದಲ್ಲಿ ಅಷ್ಟಾಗಿ ಇಲ್ಲ. ಛಾಯಾಗ್ರಾಹಣ, ಹಿನ್ನೆಲೆ ಸಂಗೀತ ಹೀಗೆ ತಾಂತ್ರಿಕವಾಗಿ ಚಿತ್ರ ಗಟ್ಟಿಯಾಗಿದೆ.
ಹಕ್ಕು ನಿರಾಕರಣೆ : ಈ ವಿಮರ್ಶೆ ನಮ್ಮ ವೈಯಕ್ತಿಕ ಅಭಿಪ್ರಾಯಗಳಷ್ಟೇ. ಇದು ಸಮಷ್ಠಿಯ ಅಭಿಪ್ರಾಯವಲ್ಲ. ಚಿತ್ರ ಒಬ್ಬೊಬ್ಬರಲ್ಲಿ ಒಂದೊಂದು ಭಾವ ಮೂಡಿಸಬಹುದು. ಹೀಗಾಗಿ ಈ ವಿಮರ್ಶೆಯೇ ಅಂತಿಮ ಅಭಿಪ್ರಾಯ ಎಂದು ಸ್ವೀಕರಿಸಬೇಡಿ – ಟೀಂ ಪಿಕ್ಚರ್ ಪಾರಿವಾಳ

