1990ರಲ್ಲಿ ವಿವಾಹ, 2016ರಲ್ಲಿ ವಿಚ್ಛೇದನ, 2026ರಲ್ಲಿ ಮತ್ತೆ ಒಂದಾಯ್ತು ಜೋಡಿ : ಸಿನಿಮಾದಷ್ಟೇ ಸೂಪರ್ ಆಗಿದೆ ಡೈರೆಕ್ಟರ್, ನಟಿಯ ಬಾಳಿನ ಕಥೆ
ಇದು ವಿಚ್ಛೇದಿತ ಜೋಡಿಯೊಂದು ಹತ್ತು ವರ್ಷದ ಬಳಿಕ ಮತ್ತೆ ಒಂದಾದ ಕಥೆ… ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಹಾಗೂ ನಟಿ ಲಿಸ್ಸಿ ಲಕ್ಷ್ಮೀಯೇ ಈ ಕಥೆಯ ಹೀರೋ ಹೀರೋಯಿನ್.
ಹೌದು 2016ರಲ್ಲಿ ವಿಚ್ಛೇದನ ಪಡೆದಿದ್ದ ಈ ಜೋಡಿ ಸುಮಾರು ಹತ್ತು ವರ್ಷದ ಬಳಿಕ ಮತ್ತೆ ಒಂದಾಗಿದ್ದಾರೆ. ದಶಕಗಳ ಕಾಲ ಬೇರ್ಪಟ್ಟು ಈಗ ಎಲ್ಲವನ್ನೂ ಮರೆತು ಈ ಜೋಡಿಯ ಪುನರ್ಮಿಲನದ ಹಿಂದೆ ಮಕ್ಕಳಾದ ನಟಿ ಕಲ್ಯಾಣಿ ಪ್ರಿಯದರ್ಶನ್ ಹಾಗೂ ಸಿದ್ಧಾರ್ಥ್ ಪ್ರಿಯದರ್ಶನ್ ಅವರ ಪ್ರಯತ್ನವೂ ದೊಡ್ಡದಿದೆ.
ಪ್ರಿಯದರ್ಶನ್ ಮತ್ತು ಲಿಸ್ಸಿ 1990ರ ಡಿಸೆಂಬರ್ 13ರಂದು ವಿವಾಹವಾಗಿದ್ದರು ಹಾಗೂ 2016ರ ಸೆಪ್ಟೆಂಬರ್ನಲ್ಲಿ ಬೇರ್ಪಟ್ಟಿದ್ದರು. ಈ ವರ್ಷದ ಜನವರಿಯಲ್ಲಿ ನಿರ್ಮಾಪಕ ಸಿಬಿ ಮಲಯಿಲ್ ಅವರ ಪುತ್ರ ಜೋ ಮಲಯಿಲ್ ಅವರ ವಿವಾಹಕ್ಕೆ ಇಬ್ಬರೂ ಒಟ್ಟಿಗೆ ಬಂದಿದ್ದರು. ಆಗಲೇ ಇವರಿಬ್ಬರ ಪುನರ್ಮಿಲನದ ಬಗ್ಗೆ ವದಂತಿಗಳು ಹಬ್ಬಿತ್ತು.
ಇದೀಗ ಈ ಸುದ್ದಿಯನ್ನು ಪ್ರಿಯದರ್ಶನ್ ಅವರೇ ಅಧಿಕೃತಗೊಳಿಸಿದ್ದಾರೆ. ಮದುವೆ ಪ್ರಮಾಣಪತ್ರವನ್ನು ಹೊರತುಪಡಿಸಿ ತಾವು ಒಟ್ಟಾಗಿ ಜೀವನ ನಡೆಸುತ್ತಿದ್ದೇವೆ ಎಂದು ಪ್ರಿಯದರ್ಶನ್ ತಿಳಿಸಿದ್ದಾರೆ ಎಂದು ಮಿಡ್-ಡೇ ವರದಿ ಮಾಡಿದೆ. ಮಕ್ಕಳಾದ ಕಲ್ಯಾಣಿ ಪ್ರಿಯದರ್ಶನ್ ಮತ್ತು ಸಿದ್ಧಾರ್ಥ್ ಇವರಿಬ್ಬರನ್ನು ಒಟ್ಟಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಾಗೂ ಒಟ್ಟಿಗೆ ವಾಸಿಸುವ ನಿರ್ಧಾರವನ್ನು ಸುಮಾರು ಆರರಿಂದ ಎಂಟು ತಿಂಗಳ ಹಿಂದೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ ಈ ಜೋಡಿ ಮರುಮದುವೆಯಾಗುವ ಯೋಚನೆ ಹೊಂದಿಲ್ಲ.
ಇತ್ತೀಚೆಗೆ ಈ ಜೋಡಿ ಮಲಯಾಳಂ ಸೂಪರ್ಸ್ಟಾರ್ ಮಮ್ಮುಟ್ಟಿ ಅವರನ್ನೂ ಭೇಟಿಯಾಗಿದ್ದರು. ಈ ಫೋಟೋವನ್ನು ಲಿಸ್ಸಿ ಲಕ್ಷ್ಮೀ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.
View this post on Instagram
ವಿಚ್ಛೇದನದ ಬಳಿಕವೂ ಈ ಜೋಡಿ ಸೌಹಾರ್ದಯುತ ಸಂಬಂಧವನ್ನು ಉಳಿಸಿಕೊಂಡಿದ್ದರು. 2023 ರಲ್ಲಿ ಅವರ ಮಗ ಸಿದ್ಧಾರ್ಥ್ ಅವರ ವಿವಾಹ ಸೇರಿದಂತೆ ತಮ್ಮ ಮಕ್ಕಳನ್ನು ಒಳಗೊಂಡ ಪ್ರಮುಖ ಕುಟುಂಬ ಸಂದರ್ಭಗಳಿಗಾಗಿ ಇವರು ಜೊತೆಯಾಗಿ ಹಾಜರಾಗುತ್ತಿದ್ದರು.

