ಮದ್ರಾಸ್ ಹೈಕೋರ್ಟ್ನಲ್ಲಿ ನಟಿ ತಮನ್ನಾಗೆ ಹಿನ್ನಡೆ : ಏನಿದು ಪ್ರಕರಣ?
`ಅನಧಿಕೃತವಾಗಿ’ ತನ್ನ ಫೋಟೋ ಬಳಸಿದ್ದಕ್ಕಾಗಿ 1 ಕೋಟಿ ರೂಪಾಯಿ ಪರಿಹಾರ ಕೋರಿ ನಟಿ ತಮನ್ನಾ ಭಾಟಿಯಾ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾ ಮಾಡಿದೆ. ಪುದುಚೇರಿ ಮೂಲದ ಪವರ್ ಸೋಪ್ಸ್ ಲಿಮಿಟೆಡ್ ತನ್ನ ಬ್ರಾಂಡ್ ರಾಯಭಾರಿಯಾಗಿದ್ದ ಒಪ್ಪಂದದ ಅವಧಿ ಮುಗಿದ ನಂತರವೂ ಸೋಪ್ ಹೊದಿಕೆಗಳು ಮತ್ತು ಪ್ರಚಾರ ಸಾಮಗ್ರಿಗಳಲ್ಲಿ ತನ್ನ ಫೋಟೋಗಳನ್ನು ಬಳಸುವುದನ್ನು ಮುಂದುವರೆಸಿದೆ. ಹೀಗಾಗಿ ತಮನ್ನಾ ಪವರ್ ಸೋಪ್ ಸಂಸ್ಥೆಯಿಂದ 1 ಕೋಟಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು 2017ರ ಏಪ್ರಿಲ್ 17ರಂದು ಹೈಕೋರ್ಟಿನ ಏಕ ನ್ಯಾಯಾಧೀಶರ ಪೀಠ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ತಮನ್ನಾ ಮದ್ರಾಸ್ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ವೇಲ್ ಮುರುಗನ್ ಅವರಿದ್ದ ಪೀಠ ಗುರುವಾರ (ಏಪ್ರಿಲ್ 16) ಅರ್ಜಿಯನ್ನು ತಿರಸ್ಕರಿಸಿ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದ್ದಾರೆ.
ತಮನ್ನಾ ವಾದ
ಪವರ್ ಸೋಪ್ಸ್ ಜೊತೆಗೆ ತಮನ್ನಾ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದದ ಪ್ರಕಾರ 2008ರ ಅಕ್ಟೋಬರ್ 7ರ ತನಕ ಸೋಪ್ನ ಕವರ್ನಲ್ಲಿ ತಮ್ಮ ಚಿತ್ರ ಬಳಸಲು ಒಪ್ಪಿಗೆ ನೀಡಿದ್ದರು. ಈ ಒಪ್ಪಂದ ಒಂದು ವರ್ಷದ ಅವಧಿಗೆ ಸೀಮಿತವಾಗಿತ್ತು ಹಾಗೂ 2009ರ ಅಕ್ಟೋಬರ್ 9ರ ತನಕ ಮಾತ್ರ ಇದು ಮಾನ್ಯವಾಗಿತ್ತು. ಆ ಬಳಿಕ ಈ ಒಪ್ಪಂದವನ್ನು ನವೀಕರಿಸಲಾಗಿಲ್ಲ. ಹೀಗಾಗಿ ಒಪ್ಪಂದದ ಅವಧಿ ಮುಗಿದ ಬಳಿಕವೂ ಕಂಪನಿ ತನ್ನ ಫೋಟೋವನ್ನು ಬಳಸುತ್ತಿದೆ ಎಂದು ತಮನ್ನಾ ವಾದಿಸಿದ್ದರು.
ಪವರ್ ಸೋಪ್ಸ್ ವಾದ
ಮತ್ತೊಂದೆಡೆ ಪವರ್ ಸೋಪ್ಸ್ ತನ್ನ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿತು ಮತ್ತು 2008 ರಲ್ಲಿ ಒಪ್ಪಂದಕ್ಕೆ ಬಂದಾಗ ಅವರು ಜನಪ್ರಿಯವಾಗಿರಲಿಲ್ಲ. ಒಂದು ವರ್ಷದ ಒಪ್ಪಂದಕ್ಕೆ ಅವರಿಗೆ 1 ಲಕ್ಷ ರೂಪಾಯಿ ಪಾವತಿಸಲಾಗಿದೆ ಮತ್ತು ಅವರ ಕಾರಣದಿಂದಾಗಿ ತನ್ನ ವ್ಯವಹಾರವು ಹಲವು ಪಟ್ಟು ಹೆಚ್ಚಾಗಿದೆ ಎಂಬ ಹೇಳಿಕೆಯನ್ನು ಕಂಪನಿ ನಿರಾಕರಿಸಿದೆ. ಜೊತೆಗೆ ಒಪ್ಪಂದದ ಅವಧಿ ಮುಗಿದ ನಂತರ ಅವರ ಫೋಟೋಗಳನ್ನು ಬಳಸುತ್ತಿಲ್ಲ ಎಂದೂ ಕಂಪನಿ ಹೇಳಿಕೊಂಡಿತ್ತು.
ಈ ವಾದ ಪ್ರತಿವಾದವನ್ನು ಆಲಿಸಿದ್ದ ಏಕಸದಸ್ಯ ಪೀಠ ತಮನ್ನಾ ಅರ್ಜಿಯನ್ನು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು.



