ನಿತ್ಯದ ದಿನಚರಿಯಲ್ಲಿ ನಾವು ಮೌನವಾಗಿ ಇರಬೇಕಾದ ಸಂದರ್ಭಗಳು
ಮೌನಕ್ಕೂ ಅದ್ಭುತ ಶಕ್ತಿ ಇದೆ. ಕೆಲವೊಂದು ಸಂದರ್ಭದಲ್ಲಿ ಮಾತಿಗಿಂತ ಮೌನವೇ ಪ್ರಭಾವಶಾಲಿಯಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಮೌನವಾಗಿ ಇರುವುದು ಹಲವು ಪ್ರಯೋಜನಗಳನ್ನು ತರುತ್ತದೆ, ಜೊತೆಗೆ ಹಲವು ಸಂಕಷ್ಟ, ಸಂಘರ್ಷಗಳಿಂದಲೂ ನಮ್ಮನ್ನು ಪಾರು ಮಾಡುತ್ತದೆ. ಹಾಗೆಯೇ ಯಾವೆಲ್ಲಾ ಸಂದರ್ಭಗಳಲ್ಲಿ ಮೌನವಾಗಿರುವುದು ಉತ್ತಮ ಎಂಬ ಬಗ್ಗೆ ಇಲ್ಲಿ ನೋಡೋಣ.
ಕೋಪದಲ್ಲಿದ್ದಾಗ
ನಾವು ಕೋಪದಲ್ಲಿದ್ದಾಗ ಮೌನವಾಗಿ ಇರುವುದು ಉತ್ತಮ. ಯಾಕೆಂದರೆ ಕೋಪ ವ್ಯಾಗ್ಯುದ್ಧಕ್ಕೆ ಕಾರಣವಾಗುತ್ತದೆ. ಕೋಪದ ಸಂದರ್ಭದಲ್ಲಿ ಮನಸ್ಸು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ, ಆಗ ನಿಮ್ಮ ಬಂಧಗಳನ್ನು ಹಾನಿಗೊಳಿಸುವ ಮಾತುಗಳು ನಿಮ್ಮ ಬಾಯಿಯಿಂದ ಬರಬಹುದು. ಜೊತೆಗೆ ತೀವ್ರ ಕೋಪದ ಸಂದರ್ಭದಲ್ಲಿ ಮಾತುಗಳೂ ಬೆಂಕಿಯಂತೆ ಇರುತ್ತವೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಮೌನವಾಗಿ ಇರುವುದು ನಮಗೆ ನಾವು ಶಾಂತವಾಗಲು ಹಾಗೂ ನಂತರ ಸ್ಪಷ್ಟ ದೃಷ್ಟಿಕೋನದ ಆಧಾರದಲ್ಲಿ ಸಮಸ್ಯೆಯ ಬಗ್ಗೆ ಚರ್ಚಿಸಲು ದಾರಿ ಮಾಡಿಕೊಡುತ್ತದೆ. ಇದು ಸಂಬಂಧವನ್ನು ಉಳಿಸಬಹುದು
ಟೀಕೆಗೆ ಪ್ರತಿಕ್ರಿಯಿಸುವ ಮುನ್ನ
ಟೀಕೆ, ಪ್ರತಿಕ್ರಿಯೆಗಳು ಕೆಲವೊಮ್ಮೆ ನೋವುಂಟು ಮಾಡುತ್ತವೆ. ಇಂತಹ ಸಂದರ್ಭದಲ್ಲಿ ತಕ್ಷಣ ಮರು ಪ್ರತಿಕ್ರಿಯೆ ನೀಡುವುದು ವಿರುದ್ಧ ಪರಿಣಾಮ ಬೀರಲೂಬಹುದು. ಹೀಗಾಗಿ ಟೀಕೆಗಳನ್ನು ಕೇಳುವಾಗ ಮೌನವಾಗಿರುವುದು ವಸ್ತುನಿಷ್ಠವಾಗಿ ಆಲಿಸಲು ಮತ್ತು ಅಗತ್ಯವಿದ್ದರೆ ಬದಲಾವಣೆಗಳನ್ನು ಮಾಡಲು ನಮಗೆ ಅನುವು ಮಾಡಿಕೊಡುತ್ತದೆ. ಹೀಗಾಗಿ ರಚನಾತ್ಮಕ ಟೀಕೆಗಳನ್ನು ಅನುಸರಿಸುವುದು ಉತ್ತಮ. ಇದರಿಂದ ಟೀಕೆಯ ವೇಳೆ ಮೌನವಾಗಿದ್ದು ಎಲ್ಲವನ್ನೂ ಸರಿಯಾಗಿ ಪರಾಮರ್ಶಿಸಿ
ಸಂಪೂರ್ಣ ವಿವರ ಗೊತ್ತಿಲ್ಲದೇ ಇದ್ದಾಗ
ಯಾವುದೋ ಪ್ರಮುಖ ವಿಷಯಗಳ ಸಂಪೂರ್ಣ ವಿವರ, ಮಾಹಿತಿ, ಸತ್ಯಗಳು ಗೊತ್ತಿಲ್ಲದೇ ಇದ್ದಾಗ ಮೌನವಾಗಿ ಇರುವುದು ಲೇಸು. ಅಪೂರ್ಣ ಮಾಹಿತಿಯ ಆಧಾರದ ಮೇಲೆ ಮಾತನಾಡುವುದು ದೋಷಗಳನ್ನು ಉಂಟು ಮಾಡಬಹುದು, ಇದು ತಪ್ಪು ಮಾಹಿತಿ ರವಾನೆ ಮಾಡಬಹುದು. ವೃಥಾ ಸಂಬಂಧಗಳು ಹಾಳಾಗಲು ಕಾರಣವಾಗಬಹುದು
ಪ್ರಚೋದನಕಾರಿ ಸನ್ನಿವೇಶ
ಎಲ್ಲರೂ ನಿಮಗೆ ಉತ್ತಮವಾದುದ್ದನ್ನೇ ಬಯಸಲು ಸಾಧ್ಯವಿಲ್ಲ ಹಾಗೂ ನಿಮ್ಮನ್ನು ಕೆಳಗೆ ತಳ್ಳಲು ಬಯಸಬಹುದು. ಇಂತವರು ನಿಮ್ಮನ್ನು ಪ್ರತಿಕ್ರಿಯಿಸುವಂತೆ ಪ್ರಚೋದಿಸಬಹುದು, ವೃಥಾ ಸಮಸ್ಯಾತ್ಮಕ ಸನ್ನಿವೇಶಕ್ಕೆ ಎಳೆದು ತರಬಹುದು. ಹೀಗಾಗಿ ಇಂತಹ ಸನ್ನಿವೇಶಗಳನ್ನು ನಿಮಗೆ ಸರಿಯಾಗಿ ಗುರುತಿಸಲು ಕಷ್ಟವಾದರೆ, ಆಗ ನೀವು ಮೌನವಾಗಿರುವುದೇ ಲೇಸು
ಕೆಲಸದ ಸ್ಥಳದಲ್ಲಿ ಸಂಘರ್ಷ ಉಂಟಾದಾಗ
ಕೆಲಸದ ಸ್ಥಳದಲ್ಲಿ ಮೌನವು ಜಗಳಗಳು ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯುತ್ತದೆ ಮತ್ತು ರಚನಾತ್ಮಕ ಪ್ರತಿಕ್ರಿಯೆಯ ಬಗ್ಗೆ ಯೋಚಿಸಲು ಒಂದು ಸಮಯವನ್ನು ನೀಡುತ್ತದೆ.
ಗಾಸಿಪ್ಗಳ ಸಂದರ್ಭದಲ್ಲಿ
ಗಾಸಿಪ್ಗಳಲ್ಲಿ ತೊಡಗಿಕೊಳ್ಳುವುದು ನಿಮ್ಮ ಪ್ರತಿಷ್ಠೆ ಹಾಗೂ ಸಂಬಂಧಗಳಿಗೆ ಮಾರಕವಾಗಬಹುದು. ಹೀಗಾಗಿ ಯಾರಾದರೂ ಗಾಸಿಪ್ನಲ್ಲಿ ತೊಡಗಿಕೊಂಡಾಗ ಸುಮ್ಮನಿರುವುದು ಅಥವಾ ಆ ಸನ್ನಿವೇಶದಿಂದ ದೂರ ಬರುವುದು ಒಳ್ಳೆಯದು. ಇದು ನಿಮ್ಮ ಸುತ್ತ ಧನಾತ್ಮಕ ವಾತಾವರಣ ಬೆಳೆಯುವುದಕ್ಕೂ ಸಹಾಯ ಮಾಡುತ್ತದೆ
ನಿಮ್ಮ ಮಾತುಗಳು ಹಾನಿ ಮಾಡುತ್ತವೆ ಎಂದಾಗ
ನಿಮ್ಮ ಮಾತು ಬೇರೆಯವರಿಗೆ ಘಾಸಿಗೊಳಿಸುತ್ತದೆ, ನೋವು ತರುತ್ತದೆ ಎಂದೆನಿಸಿದರೆ ಅಂತಹ ಸಂದರ್ಭದಲ್ಲಿ ಮೌನವಾಗಿ ಇರುವುದು ಉತ್ತಮ. ಮಾತನಾಡುವ ಮುನ್ನ ನಿಮ್ಮ ಮಾತಿನ ಪರಿಣಾಮಗಳನ್ನು ಪರಿಗಣಿಸಿ. ಯಾಕೆಂದರೆ ಇಂತಹ ಸಂದರ್ಭದಲ್ಲಿ ಮೌನವಾಗಿರುವುದು ಅನಗತ್ಯ ನೋವನ್ನು ತಡೆಯಬಹುದು. ಜೊತೆಗೆ ಬೆಂಬಲ ತುಂಬಿದ ವಾತಾವರಣ ನಿರ್ಮಿಸಲು ನೆರವಾಗುತ್ತದೆ



